Advertisement

Lok Sabha polls: 6 ಕಡೆ ಕಾಂಗ್ರೆಸ್‌ ಟಿಕೆಟ್‌ಗೆ “ಕುಟುಂಬ’ ಸಮಸ್ಯೆ

11:41 PM Mar 12, 2024 | Team Udayavani |

ಬೆಂಗಳೂರು: ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ 7 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರೂ ಉಳಿದ 21 ಕ್ಷೇತ್ರಗಳ ಪಟ್ಟಿ ಬಿಡುಗಡೆ ಕಗ್ಗಂಟಾಗಿದೆ. ಈ ಪೈಕಿ 6 ಕ್ಷೇತ್ರಗಳಲ್ಲಿ ಎದುರಾಗಿರುವ “ಕುಟುಂಬ’ ಸಮಸ್ಯೆಯಿಂದಾಗಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

Advertisement

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿದ್ದ ಕಲಬುರಗಿ, ಸಿಎಂ ಸಿದ್ದರಾಮಯ್ಯ ಅವರ ಸ್ವಂತ ಜಿಲ್ಲೆ ಮೈಸೂರು ಸಹಿತ ಬೆಳಗಾವಿ, ಚಿಕ್ಕೋಡಿ, ಚಾಮರಾಜನಗರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಈಗ “ಪರಿವಾರದ ಅಂಗಳ’ ಕ್ಕೆ ಬಂದು ನಿಂತಿದೆ.

ಖರ್ಗೆ, ಸಿದ್ದರಾಮಯ್ಯ ಅವರಲ್ಲದೆ ಸಚಿವರಾದ ಡಾ| ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಲಕ್ಷಿ$¾à ಹೆಬ್ಟಾಳ್ಕರ್‌ ಹಾಗೂ ರಾಮಲಿಂಗಾ ರೆಡ್ಡಿ ಅವರ ಕುಟುಂಬ ಸದಸ್ಯರನ್ನೇ (ಅಳಿಯ, ಪುತ್ರ, ಪುತ್ರಿಯರು) ಅಭ್ಯರ್ಥಿಗಳನ್ನಾಗಿಸುವ ಹೊಸ ಲೆಕ್ಕಾಚಾರ ಈಗ ಆರಂಭವಾಗಿದೆ.

ಈ ಸಲದ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲವೆಂದು ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿರುವುದರಿಂದ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯವನ್ನು ಬೆಂಗಳೂರಿನಲ್ಲಿ ಸೋಮವಾರ ನಡೆದ ಸ್ಕ್ರೀನಿಂಗ್‌ ಕಮಿಟಿ ಸಭೆಯು ಖರ್ಗೆ ವಿವೇಚನೆಗೆ ಬಿಟ್ಟಿದೆ. ಖರ್ಗೆ ಅವರ ಅಳಿಯ ರಾಧಾಕೃಷ್ಣ ಸ್ಪರ್ಧೆಗೆ ಕೆಲವು ತಿಂಗಳಿಂದ ಭರ್ಜರಿ ತಯಾರಿ ನಡೆಸಿದ್ದರೂ ಇದುವರೆಗೂ ಖರ್ಗೆ ಈ ಬಗ್ಗೆ ಯಾವುದೇ ಸುಳಿವು ನೀಡಿಲ್ಲ, ಅಳಿಯ ಸ್ಪರ್ಧಿಸಬೇಕೊ-ಬೇಡವೋ ಎಂಬುದನ್ನು ಅವರೇ ನಿರ್ಧರಿಸಲಿ, ಜತೆಗೆ ಬೇರೆ ಯಾರೇ ಅಭ್ಯರ್ಥಿಗಳು ಇದ್ದರೆ ಅವರೇ ಸೂಚಿಸಲಿ ಎಂಬ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ ಕಲಬುರಗಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯನ್ನು ಖರ್ಗೆ ಹೆಗಲಿಗೆ ಹಾಕಲಾಗಿದೆ.ಮೈಸೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಸಾಕಷ್ಟು ಗೊಂದಲಗಳಿವೆ.

ಕೆಪಿಸಿಸಿ ವಕ್ತಾರ ಲಕ್ಷ್ಮಣ ಹೆಸರು ಮುಂಚೂಣಿಯಲ್ಲಿದ್ದರೂ ಸಿದ್ದರಾಮಯ್ಯ ಅವರ ಪುತ್ರ ಡಾ| ಯತೀಂದ್ರ ಸ್ಪರ್ಧಿಸಬೇಕೆಂಬ ಒತ್ತಡ ಹೈಕಮಾಂಡ್‌ನಿಂದ ಇದೆ. ಈ ಮಧ್ಯೆ ಹಾಲಿ ಸಂಸದ ಪ್ರತಾಪಸಿಂಹಗೆ ಟಿಕೆಟ್‌ ಸಿಗುವುದು ಅನುಮಾನವೆಂದು ಹೇಳಲಾಗುತ್ತಿದೆ. ಬದಲಿಗೆ ಮೈಸೂರಿನ ಯದುವೀರ್‌ ಒಡೆಯರ್‌ ಇಲ್ಲವೇ ಸಿ.ಟಿ.ರವಿ ಅಭ್ಯರ್ಥಿಯಾಗಬಹುದೆಂಬ ಹೊಸ ಲೆಕ್ಕಾಚಾರಗಳು ನಡೆದಿವೆ.

Advertisement

ಹೀಗಾಗಿ ಕಾಂಗ್ರೆಸ್‌ ಕೂಡ ತನ್ನ ಅಭ್ಯರ್ಥಿಯನ್ನು ಪ್ರಕಟಿಸದೆ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಇಲ್ಲಿ ಸಿಎಂ ಪುತ್ರ ಯತೀಂದ್ರ ಕೊನೆಯ ಘಳಿಗೆಯಲ್ಲಿ ಅಭ್ಯರ್ಥಿಯಾದರೂ ಅಚ್ಚರಿ ಇಲ್ಲ. ಹೀಗಾಗಿ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಸಿಎಂ ವಿವೇಚನೆಗೆ ಬಿಡಲಾಗಿದೆ.

ನನಗೆ ಬೇಡ, ಪುತ್ರನಿಗೆ ಕೊಡಿ
ಇನ್ನು ಪಕ್ಕದ ಚಾಮರಾಜನಗರಕ್ಕೆ ಸಮಾಜ ಕಲ್ಯಾಣ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಸ್ಪರ್ಧಿಸಲು ಆಸಕ್ತರಾಗಿದ್ದರೂ ಪಕ್ಷ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಪುತ್ರನಿಗೆ ಟಿಕೆಟ್‌ ಕೊಡಬೇಕೆಂದು ಮಹದೇವಪ್ಪ ಹೈಕಮಾಂಡ್‌ ಮುಂದೆ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಆದರೆ ಪುತ್ರನ ಬದಲಿಗೆ ತಾವೇ ಅಭ್ಯರ್ಥಿಯಾಗುವುದು ಸೂಕ್ತವೆಂದು ಹೈಕಮಾಂಡ್‌ ಹೇಳಿರುವುದರಿಂದ ಮಹದೇವಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ ಮುಂದೂಡಲಾಗಿದೆ.

ಸಚಿವದ್ವಯರ ಪ್ರತಿಷ್ಠೆ
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕೂಡ ಕಗ್ಗಂಟಾಗಿದೆ ಅಷ್ಟೇ ಅಲ್ಲ, ಸಚಿವರಾದ ಸತೀಶ್‌ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಚಿಕ್ಕೋಡಿಯಿಂದ ತಮ್ಮ ಪುತ್ರಿಗೆ ಪಕ್ಷ ಟಿಕೆಟ್‌ ನೀಡಿದರೆ ಸ್ಪರ್ಧಿಸಲು ಸಿದ್ದವೆಂದು ಸತೀಶ್‌ ಜಾರಕಿಹೊಳಿ ಪಕ್ಷದ ಮುಂದೆ ಪ್ರಸ್ತಾವಿಸಿದ್ದರು. ಇದಕ್ಕೆ ಪ್ರತಿಯಾಗಿ ಚಿಕ್ಕೋಡಿಯಿಂದ ಸಚಿವರ ಪುತ್ರಿಗೆ ಟಿಕೆಟ್‌ ನೀಡಿದರೆ ಬೆಳಗಾವಿಯಿಂದ ತಮ್ಮ ಪುತ್ರನಿಗೂ ಟಿಕೆಟ್‌ ಕೊಡಬೇಕೆಂದು ಸಚಿವೆ ಪಟ್ಟು ಹಿಡಿದಿರುವುದು ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ನಿರ್ಮಾಣವಾಗಿದೆ.

ಯಾವ ಕಡೆ ವಾಲಿದರೂ ಕಷ್ಟ ಎಂಬ ಸಂದಿಗ್ಧ ಸ್ಥಿತಿ ಇದೆ. ಅಂತಿಮವಾಗಿ ಇಬ್ಬರು ಸಚಿವರ ಕುಟುಂಬಗಳಿಗೆ ಮನ್ನಣೆ ಹಾಕದೆ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೂ ಅಚ್ಚರಿ ಇಲ್ಲ.

ಬೆಂಗಳೂರು ದಕ್ಷಿಣದ್ದು ಖಾಯಂ ಸಮಸ್ಯೆ
ಪ್ರತಿ ಸಲ ಚುನಾವಣೆ ಬಂದಾಗಲೂ ಹೊಸ ಹೊಸ ಅಭ್ಯರ್ಥಿ ಶೋಧಿಸುವ ಕಾಂಗ್ರೆಸ್‌ನ ಹಳೆ ಸಮಸ್ಯೆ ಬೆಂಗಳೂರು ದಕ್ಷಿಣದಲ್ಲಿ ಈ ವರ್ಷವೂ ಮುಂದುವರಿದಿದೆ, ಅಕ್ಷರಶಃ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಮಾಜಿ ಶಾಸಕಿ ಸೌಮ್ಯರೆಡ್ಡಿ, ಶಾಸಕ ಪ್ರಿಯಾಕೃಷ್ಣ ಹೆಸರು ಚರ್ಚೆಯಲ್ಲಿದ್ದರೂ ಅವರು ಸ್ಪರ್ಧೆಗೆ ಆಸಕ್ತಿ ತೋರಿಲ್ಲ. ಈ ಮಧ್ಯೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನೇ ಕಣಕ್ಕಿಳಿಸಬಹುದೇ ಎಂಬ ಚರ್ಚೆ ಒಂದು ಹಂತದವರೆಗೂ ನಡೆದಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ರಾಮಲಿಂಗಾ ರೆಡ್ಡಿ ಬದಲಿಗೆ ಅವರ ಪುತ್ರಿ ಸೌಮ್ಯರೆಡ್ಡಿಯೇ ಅಭ್ಯರ್ಥಿಯಾದರೆ ಸೂಕ್ತವೆಂದು ಸಲಹೆ ನೀಡಿದ್ದಾರೆ.

ಈ ಬಗ್ಗೆ ರಾಮಲಿಂಗಾ ರೆಡ್ಡಿ ಜತೆ ಸಾಕಷ್ಟು ಚರ್ಚೆಗಳು ನಡೆದಿದ್ದು, ತಮಗಾಗಲಿ ಅಥವಾ ತಮ್ಮ ಪುತ್ರಿಗಾಗಲಿ ಸ್ಪರ್ಧಿಸಲು ಆಸಕ್ತಿ ಇಲ್ಲವೆಂದು ಹೇಳಿದ್ದಾರೆ. ಆದರೆ ಪಕ್ಷ ಯೋಚಿಸಿ ನೋಡಿ ಎಂದು ಹೇಳಿರುವುದರಿಂದ ಸಮಯ ಕೊಡಿ ಎಂದು ಹೇಳಿದ್ದಾರೆ. ಹೀಗಾಗಿ ಇಲ್ಲೂ ಅಭ್ಯರ್ಥಿ ಆಯ್ಕೆ ವಿಷಯ ಕುಟುಂಬದೊಳಗೆ ಬಂದು ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next