ಅನಗೊಂಡನಹಳ್ಳಿ: ಗಾಂಜಾ ಅಕ್ರಮ ಶೇಖರಣೆ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿದ್ದ ಕಸಬ ಹೋಬಳಿಯ ಆರೋಪಿಯೋರ್ವ ಮೃತಪಟ್ಟಿದ್ದು, ಪೊಲೀಸರ ದೌರ್ಜನ್ಯದಿಂದ ಮೃತಪಟ್ಟಿದ್ದಾನೆ ಎಂದು ಮೃತರ ಕುಟುಂಬಸ್ಥರು ಹೊಸಕೋಟೆ ಪೊಲೀಸ್ ಠಾಣೆ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು.
ರಿಮ್ಯಾಂಡ್ ರೂಂಗೆ ವರ್ಗ: ತಾಲೂಕಿನ ಕಸಬ ಹೋಬಳಿಯ ದಾಸರಹಳ್ಳಿ ಗ್ರಾಮದ 38 ವರ್ಷದ ಲಕ್ಷ್ಮಯ್ಯ ಅವರನ್ನು ವಾರದ ಹಿಂದೆ ಗಾಂಜಾ ಅಕ್ರಮ ಶೇಖರಣೆ ಆರೋಪದ ಮೇರೆಗೆ ಹೊಸಕೋಟೆ ಠಾಣೆಯ ಪೊಲೀಸರು ಬಂಧಿಸಿದ್ದು,ಹೊಸಕೋಟೆ ಮ್ಯಾಜಿಸ್ಟೇಟ್ ಆದೇಶದ ಮೇರೆಗೆ ಆರೋಪಿಯನ್ನು ಬೆಂಗಳೂರು ಕೇಂದ್ರ ಕಾರಾಗೃಹದ ರಿಮ್ಯಾಂಡ್ ರೂಂಗೆ ವರ್ಗಾಯಿಸಲಾಗಿತ್ತು.
ಆತ್ಮಹತ್ಯೆಗೆ ಯತ್ನ: ಆರೋಪಿ ಮಾನಸಿಕ ಖನ್ನತೆಗೆ ಒಳಗಾಗಿ ಅಸ್ವಸ್ಥನಂತೆ ವರ್ತಿಸಿ ಕೈಗೆ ಹಾಕಿದ್ದ ಕೋಳ, ಚೈನ್‌ಗಳಿಂದ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡು ಬಂದಿದ್ದು, ಕೂಡಲೇ ಠಾಣಾ ಸಿಬ್ಬಂದಿಗಳು ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವ ಮಧ್ಯ ಆರೋಪಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ಆಸ್ಪತ್ರೆ ಶವಾಗಾರದಲ್ಲಿ ಇರಿಸಿಲಾಗಿದೆ ಎಂದು ಕಾರಾಗೃಹದ ವರದಿಯಲ್ಲಿ ತಿಳಿಸಲಾಗಿದೆ.
ಆದರೆ ಕುಟುಂಬಸ್ಥರು ಹಾಗೂ ಮೃತರ ಸಂಬಂಧಿಗಳು, ಹೊಸಕೋಟೆ ಪೊಲೀಸರ ದೌರ್ಜನ್ಯದಿಂದಲೇ ಆರೋಪಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಘಟನೆಯಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕೆಂದು ತಾಲೂಕಿನ ಮುಖಂಡರು ಒತ್ತಾಯಿಸಿದರು.
ಪೊಲೀಸರಿಂದ ಹಲ್ಲೆ: ಆರೋಪ : ಲಕ್ಷ್ಮಯ್ಯ ಅವರನ್ನು ಕಳೆದ ಭಾನುವಾರ(ಆ.16 ರಂದು) ಪೊಲೀಸರು ಕರೆದೊಯ್ದಿದ್ದು, ಇಂದು (ಭಾನುವಾರ) ನನ್ನ ಗಂಡ ಮೃತಪಟ್ಟಿದ್ದಾರೆ. ಈ ಮೊದಲು ಮಹಜರಿಗೆ ಮನೆಗೆ ಬಂದ ಸಮಯದಲ್ಲಿ ಪೊಲೀಸರು ನನ್ನ ಮೇಲೆ ತೀವ್ರ ಹಲ್ಲೆ ನಡೆಸುತ್ತಿದ್ದಾರೆ. ನನ್ನನ್ನು ಬದುಕಲು ಬಿಡುವುದಿಲ್ಲ.ನೀವು ಸಹ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳಿ, ಇಲ್ಲದಿದ್ದರೆ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ನನ್ನ ಮತ್ತು ಮಕ್ಕಳ ಮುಂದೆ ತನ್ನ ನೋವು ಹೇಳಿಕೊಂಡಿದ್ದರು ಎಂದು ಮೃತರ ಪತ್ನಿ ಶ್ಯಾಮಲಮ್ಮ ಆರೋಪಿಸಿದ್ದು, ನನಗೂ ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.
ಆರೋಪಿಯನ್ನು ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದ್ದು, ಅಲ್ಲಿ ಆರೋಪಿ ಆತ್ಮಹತ್ಯೆಗೆ ಪ್ರಯತ್ನಿಸಿ ಮೃತಪಟ್ಟಿದ್ದಾನೆ. ಹೆಚ್ಚಿನ ತನಿಖೆಗೆ ಕೇಂದ್ರ ಕಾರಾಗೃಹಕ್ಕೆ ಬರೆಯಲಾಗುವುದು.
–ನಿಂಗಪ್ಪ ಬಸಪ್ಪ ಸಕ್ರಿ, ಹೊಸಕೋಟೆ ಪೊಲೀಸ್ ಉಪವಿಭಾಗಾಧಿಕಾರಿ