ಮುಂಡಗೋಡ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಚೆಕ್ ಬೌನ್ಸ್, ಅಮಲ್ಜಾರಿ, ಮೂಲ ದಾವಾ, ಕ್ರಿಮಿನಲ್ ಮಿಸಿಲೆನಿಯಸ್, ಪಿಟ್ಟಿ ಹಾಗೂ ಐಪಿಸಿ ಪ್ರಕರಣಗಳು ಸೇರಿ ಒಟ್ಟು 264 ಪ್ರಕರಣಗಳು ಇತ್ಯರ್ಥಗೊಂಡು 80.51 ಲಕ್ಷ ರೂ. ವಸೂಲಿಯಾಗಿದೆ.
ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಮೂರು ವರ್ಷಗಳ ನಂತರ ನ್ಯಾಯಾಲದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಂದಾಗಿದ್ದಾರೆ. ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 18 ಚೆಕ್ ಬೌನ್ಸ್ ಪ್ರಕರಣಗಳು, 24 ಅಮಲ್ಜಾರಿ ಪ್ರಕರಣಗಳು, 2 ಮೂಲ ದಾವಾ ಪ್ರಕರಣಗಳು, 2 ಕ್ರಿಮಿನಲ್ ಮಿಸಿಲೆನಿಯಸ್ ಪ್ರಕರಣಗಳು, 68 ಪಿಟ್ಟಿ ಹಾಗೂ ಐಪಿಸಿ ಪ್ರಕರಣಗಳು ರಾಜಿಯಾಗಿದ್ದು, ಈ ಪ್ರಕರಣಗಳಿಂದ 63,66,084 ರೂ. ವಸೂಲಿಯಾಗಿವೆ.
150 ವ್ಯಾಜ್ಯ ಪೂರ್ವ ಪ್ರಕರಣಗಳು ರಾಜಿಯಾಗಿದ್ದು, ಇವುಗಳಿಂದ 16,85,456 ರೂ. ವಸೂಲಿಯಾಗಿದೆ. ಶನಿವಾರ ಜರುಗಿದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 264 ಪ್ರಕರಣಗಳು ರಾಜಿ ಸಂಧಾನದಿಂದ ಇತ್ಯರ್ಥಗೊಂಡು 80,51,540 ರೂ. ವಸೂಲಿಯಾಗಿದೆ.
ತಾಲೂಕಿನ ಮೈನಳ್ಳಿ ಗ್ರಾಮದ ರೇಷ್ಮಾ ಶಿಂಧೆ ಹಾಗೂ ಪುಂಡಲಿಕ ಶಿಂಧೆ ದಂಪತಿ ಮಧ್ಯ ವೈಮನಸ್ಸು ಉಂಟಾಗಿ 2019ರಲ್ಲಿ ವಿವಾಹ ವಿಚ್ಛೇದನಕ್ಕೆ ರೇಷ್ಮಾ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವಾಗ ಜೂ. 25ರಂದು ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಬೃಹತ್ ಲೋಕ ಅದಾಲತ್‌ನಲ್ಲಿ ಎರಡು ಕಡೆಯ ವಕೀಲರು ದಂಪತಿಗೆ ಮನವರಿಕೆ ಮಾಡಿಸಿ ರಾಜಿ ಮಾಡುವುದರ ಮೂಲಕ ದಂಪತಿಯನ್ನು ಮೂರು ವರ್ಷಗಳ ನಂತರ ಒಂದು ಮಾಡಿದ್ದಾರೆ.
ಸಂಧಾನಕರಾಗಿ ನ್ಯಾಯಾಧೀಶ ಕೇಶವ ಕೆ. ಹಾಗೂ ವಕೀಲರಾದ ಗುಡ್ಡಪ್ಪ ಕಾತೂರ, ಎನ್.ಎ. ನಿಂಬಾಯಿ, ಎಸ್.ಟಿ. ಸಮ್ಮಸಗ್ಗಿ, ಬಿ.ಎಫ್. ಪೂಜಾರ, ಎಂ.ಎ. ನಂದಿಗಟ್ಟಿ, ಆರ್.ಎನ್. ಹೆಗಡೆ, ನಟರಾಜ ಕಾತೂರ ಕೆ.ಆರ್. ಹಂಚಿನಮನಿ, ರಾಜು ಹಂಚಿನಮನಿ, ನಾರಾಯಣ ಸಣ್ಣಳ್ಳಿಮನಿ, ಮಂಜುನಾಥ ರೇವಣಕರ, ಕಲ್ಮೇಶ ಭೋವಿ, ಗೋಪಾಲ್ ಆಲದಕಟ್ಟಿ, ವಿಶ್ವನಾಥ ಪವಾಡಶೆಟ್ಟರ ಸೇರಿದಂತೆ ಮುಂತಾದವರು ಇದ್ದರು.
ಮಾ. 22ರಂದು ನಡೆದ ಲೋಕ ಅದಾಲತ್ ನಲ್ಲಿ 689 ಪ್ರಕರಣಗಳಲ್ಲಿ 232 ಪ್ರಕರಣಗಳು ಇತ್ಯರ್ಥಗೊಂಡು ಈ ಪ್ರಕರಣಗಳಲ್ಲಿ 21,10,808 ರೂ. ವಸೂಲಾತಿ ಮಾಡಲಾಗಿತ್ತು. 497 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 23 ಪ್ರಕರಣಗಳು ಇತ್ಯರ್ಥಗೊಂಡು ಈ ಪ್ರಕರಣಗಳಲ್ಲಿ ಒಟ್ಟು 8,34,500 ರೂ. ವಸೂಲಾತಿ ಮಾಡಲಾಗಿತ್ತು.