Advertisement

ಸುಳ್ಳು ವದಂತಿ; ಅಮಾಯಕರ ಫ‌ಜೀತಿ!

03:15 PM May 18, 2018 | |

ಬಳ್ಳಾರಿ: ಜಿಲ್ಲೆಯ ಜನರ ನಿದ್ದೆಗೆಡಿಸಿರುವ ಚಿಕ್ಕ ಮಕ್ಕಳನ್ನು ಅಪಹರಿಸುವ (ಪಾರ್ಥಿ)ಗ್ಯಾಂಗ್‌ ನಗರಕ್ಕೆ ಆಗಮಿಸಿದೆ ಎಂಬ ಸುಳ್ಳು ವದಂತಿ ಅಮಾಯಕರ ಮೇಲೆ ಹಲ್ಲೆಗೆ ದಾರಿಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ತುಣುಕುಗಳನ್ನು ವೀಕ್ಷಿಸಿ ಭಯ ಭೀತರಾಗುತ್ತಿರುವ ಜನರು ಅನುಮಾನಾಸ್ಪದವಾಗಿ ಕಾಣುವ ಅಮಾಯಕ ಮಹಿಳೆಯರೆಂದು ನೋಡದೆ ಹಿಗ್ಗಾಮುಗ್ಗಾ ಥಳಿಸಿ, ಹಲ್ಲೆಗೆ ಮುಂದಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Advertisement

ನೆರೆಯ ಆಂಧ್ರ ಪ್ರದೇಶದ ಕರ್ನೂಲ್‌, ಅನಂತಪುರ, ರಾಜ್ಯದ ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಕ್ಕಳನ್ನು ಅಪಹರಿಸುವ (ಪಾರ್ಥಿ ಗ್ಯಾಂಗ್‌) ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ವದಂತಿ ಕಳೆದ ಒಂದು ವಾರದಿಂದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರೊಂದಿಗೆ ಚಿಕ್ಕ ಮಕ್ಕಳ ದೇಹದ ಕೆಲ ಭಾಗಗಳನ್ನು ಕತ್ತಿಯಿಂದ ಕಡಿದು ಕ್ರೂರವಾಗಿ ನಡೆದುಕೊಳ್ಳುವ ಕೆಲವು ವೀಡಿಯೋ ತುಣುಕುಗಳು ಸಹ ಹರಿದಾಡುತ್ತಿವೆ. ಈ ವೀಡಿಯೋಗಳನ್ನು ವೀಕ್ಷಿಸಿ ಭಯಭೀತರಾಗಿರುವ ಜಿಲ್ಲೆಯ ಜನರು ತಮ್ಮ ತಮ್ಮ
ಏರಿಯಾ, ಓಣಿಗಳಲ್ಲಿ ಮಹಿಳೆಯರು ಸೇರಿದಂತೆ ಯಾರೇ ತಿರುಗಾಡಿದರೂ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಅಲ್ಲಿ ಮಕ್ಕಳ ಕಿವಿ ಕುಯ್ದಿದ್ದಾರೆ, ಇಲ್ಲಿ ಮಕ್ಕಳನ್ನು ಅಪಹರಿಸಲು ಯತ್ನಿಸಿದ್ದಾರೆ ಎಂಬ ಗಾಳಿಸುದ್ದಿ ನಂಬುತ್ತಿರುವ ಜನರು ಕೆಲವೆಡೆ ಅನುಮಾನಾಸ್ಪದ ವ್ಯಕ್ತಿಗಳೆಂದು ಶಂಕಿಸಿ, ಅವರನ್ನು ಹಿಂಬಾಲಿಸಿ ಹಲ್ಲೆ ನಡೆಸಿರುವ ಘಟನೆಗಳು ವಿವಿಧೆಡೆ ನಡೆದಿದ್ದು, ಇದಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ.

ಇಂಥಹ ಸುಳ್ಳು ಸುದ್ದಿ ನಂಬಿದ ತಾಲೂಕಿನ ಸಂಗನಕಲ್ಲು, ಶಿಡಿಗಿನಮೊಳ, ಮೋಕಾ, ಕಕ್ಕಬೇವಿನಹಳ್ಳಿ, ಪಿಡಿಹಳ್ಳಿ ಸೇರಿದಂತೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮಗಳ ಜನರು ಗೊಂಬೆ ಸೇರಿ ಇತರೆ ವಸ್ತುಗಳನ್ನು ಮಾರಾಟಕ್ಕೆಂದು ಆಗಮಿಸುವವರ ಮೇಲೆ ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಇವರು ಮಕ್ಕಳ ಅಪಹರಣಕಾರರಲ್ಲ ಎಂದು ತಿಳಿಸಿದ್ದರೂ ಈ ಹಲ್ಲೆಗಳು ನಿಲ್ಲುತ್ತಿಲ್ಲ. ಕಳೆದ ಮಂಗಳವಾರ ರಾತ್ರಿ ನಗರದ ಬೀರಪ್ಪಗುಡಿ ಬಳಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆದಿದೆ. ಬುಧವಾರ ನಗರದ ಕುರಿಕಮೇಲಾ ಬಳಿ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ.

ಮಧ್ಯ ಪ್ರವೇಶಿಸಿದ ಪೊಲೀಸರು ಅವರನ್ನು ತಮ್ಮ ಬಾಡಿಗೆ ಮನೆಗೆ ಕರೆದೊಯ್ದು ವಿಚಾರಣೆ ನಡೆಸಿ, ಅಲ್ಲಿಂದ ಸ್ಥಳಾಂತರಿಸಿ ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ನಗರದ ಕೋಟೆ ಪ್ರದೇಶದ ಮೇದಾರ ಓಣಿ ಬಳಿಯೂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ. ಇನ್ನು ಈ ಸುಳ್ಳು ವದಂತಿ ಸುದ್ದಿ ಹೊಸಪೇಟೆಗೂ ಹಬ್ಬಿದ್ದು, ಅಲ್ಲಿಯೂ ಜನರು ಭಯಭೀತರಾಗಿದ್ದಾರೆ. ಇಂಥ ಸುಳ್ಳು ವದಂತಿಯಿಂದಾಗಿ ಪೋಷಕರು ಮಕ್ಕಳನ್ನು ಒಬ್ಬಂಟಿಯಾಗಿ ಹೊರಗಡೆ ಕಳುಹಿಸಲು, ರಾತ್ರಿ ಹೊತ್ತಲ್ಲಿ ಮನೆಯಂಗಳದ ಆವರಣದಲ್ಲಿ ಮಲಗಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳ ಮೇಲೆ ತೀವ್ರ ನಿಗಾವಹಿಸುತ್ತಿರುವ ಪೋಷಕರು, ಗ್ರಾಮಸ್ಥರು ರಾತ್ರಿವಿಡೀ ನಿದ್ದೆ ಮಾಡದೆ ಎಚ್ಚರವಾಗಿದ್ದು, ಕಳ್ಳರನ್ನು ಪತ್ತೆಹಚ್ಚಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ವಾಟ್ಸ್‌ ಆ್ಯಪ್‌ನಲ್ಲಿ ಯುವಕರು ತೀವ್ರ ಚರ್ಚೆ ನಡೆಸಲು ಆರಂಭಿಸಿದ್ದಾರೆ. ಗ್ರಾಮಕ್ಕೆ ಬರುವ ಬೀಕ್ಷುಕರ ಮೇಲೆ ಹೆಚ್ಚಿನ ನಿಗಾವಹಿಸಿದ್ದು, ಗ್ರಾಮಕ್ಕೆ ಭಿಕ್ಷುಕರು ಸಹ ಬರಲು ಹಿಂದೇಟು ಹಾಕಿದ್ದಾರೆ.

ಆಂಧ್ರ ಮಹಿಳೆಯರಿಗೆ ಥಳಿತ: ತಾಲೂಕಿನ ಸಂಗನಕಲ್ಲು ಗ್ರಾಮಕ್ಕೆ ಇತ್ತೀಚೆಗೆ ಆಗಮಿಸಿದ್ದ ಆಂಧ್ರ ಮೂಲದ ನಿವಾಸಿಗಳ ಮೇಲೆ ಶಂಕೆ ವ್ಯಕ್ತಪಡಿಸಿ ಇಬ್ಬರು ಮಹಿಳೆಯರನ್ನು ಥಳಿಸಿ, ದಿಗ್ಭಂಧನ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಮಹಿಳೆಯರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ, ಇವರು ರಂಜಾನ್‌ ಹಬ್ಬದ ನಿಮಿತ್ತ ಭಿಕ್ಷೆ ಬೇಡಲು ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಇವರೊಂದಿಗೆ ನಗರದ ಹವಂಭಾವಿ ಪ್ರದೇಶದಲ್ಲಿ ಕಳೆದ 10 ದಿನಗಳಿಂದ 25 ಜನ ವಾಸವಿದ್ದು, ಭಿಕ್ಷಾಟನೆಯೊಂದಿಗೆ ಪ್ಲಾಸ್ಟಿಕ್‌ ಗೊಂಬೆಗಳ ಮಾರಾಟಕ್ಕೆ ಆಗಮಿಸಿದ್ದಾರೆ. ಸುಳ್ಳು ವದಂತಿಗೆ ಕಿವಿಗೊಡಬಾರದೆಂದು ತಿಳಿವಳಿಕೆ ಮೂಡಿಸಿದ್ದಾರೆ

Advertisement

ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಬಗ್ಗೆ ಸುಳ್ಳು ವದಂತಿ ಹರಡಿದೆ. ಆಂಧ್ರದಿಂದ ಬಂದಿರುವ ಮಕ್ಕಳ ಕಳ್ಳರು, ಬಳ್ಳಾರಿ
ಗ್ರಾಮೀಣ, ಸಿರುಗುಪ್ಪ ತಾಲೂಕಿನಲ್ಲಿ ಹರಡಿಕೊಂಡಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಕುರಿತು ಆಂಧ್ರ ಪೊಲೀಸರೊಂದಿಗೆ ನಿರಂತರ ಸಂಪರ್ಕ ಹೊಂದಲಾಗಿದೆ. ಈ ಮುನ್ನ ಆಂಧ್ರದ
ಕರ್ನೂಲ್‌ನಲ್ಲಿ ಇಂಥ ಸುದ್ದಿ ಹಬ್ಬಿಸಲಾಗಿದ್ದು, ಇದೀಗ ಜಿಲ್ಲೆಗೆ ಹರಡಿದೆ. ಜನರು ದಿಗ್ಭಂಧನ ಮಾಡಿದ್ದ ವ್ಯಕ್ತಿಗಳನ್ನು ವಿಚಾರಿಸಲಾಗಿದ್ದು, ಇದೆಲ್ಲ ಸುಳ್ಳು ವದಂತಿ. ಜನರು ಕಿವಿಗೊಡಬಾರದು. 
ಅರುಣ್‌ ರಂಗರಾಜನ್‌, ಎಸ್ಪಿ, ಬಳ್ಳಾರಿ

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next