Advertisement

Fake: ಸುಳ್ಳು, ದ್ವೇಷದ ಸುದ್ದಿಗಳು ನಾಡಿನ ಜಿಡಿಪಿಗೆ ಮಾರಕ: ಸಿಎಂ ಸಿದ್ದರಾಮಯ್ಯ

08:30 PM Oct 21, 2023 | Team Udayavani |

ಬೆಂಗಳೂರು: ಸುಳ್ಳು ಸುದ್ದಿ ಹರಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರಿಗೆ ಸೂಚಿಸಿದರು.

Advertisement

ಮೈಸೂರು ರಸ್ತೆಯ ಹುತಾತ್ಮರ ಉದ್ಯಾನವನದಲ್ಲಿ ಪೊಲೀಸ್‌ ಸಂಸ್ಮರಣ ದಿನದ ಅಂಗವಾಗಿ ಶನಿವಾರ ಹುತಾತ್ಮರಿಗೆ ಪುಷ್ಪಚಕ್ರ ಅರ್ಪಿಸಿ ನಮನ ಸಲ್ಲಿಸಿ ಮಾತನಾಡಿದ ಅವರು, ಸುಳ್ಳು ಸುದ್ದಿಗಳು, ಅಶಾಂತಿ ಸೃಷ್ಟಿಸುವ ಸುಳ್ಳುಗಳನ್ನು, ದ್ವೇಷ ಹರಡುವ ಸುಳ್ಳುಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಸರ್ವರನ್ನೂ ಸಮಾನವಾಗಿ ಕಾಣುವ ಮತ್ತು ಸಮಾನವಾಗಿ ನಡೆಸಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್‌ ವ್ಯವಸ್ಥೆ ಮೇಲಿದೆ. ಆದ್ದರಿಂದ ಸುಳ್ಳು ಸುದ್ದಿ ಹರಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸುಳ್ಳು ಮತ್ತು ದ್ವೇಷದ ಸುದ್ದಿಗಳು ನಾಡಿನ ಜಿಡಿಪಿಗೆ ಮಾರಕ. ಅಶಾಂತಿಯ ಪರಿಣಾಮವಾಗಿ ಜನರ ತಲಾ ಆದಾಯಕ್ಕೂ ಧಕ್ಕೆಯಾಗುತ್ತದೆ. ಆದ್ದರಿಂದ ಸುಳ್ಳು ಸುದ್ದಿ ಹರಡುವ ಜಾಲ ತಾಣಗಳು ಮತ್ತು ಅವನ್ನು ನಿರ್ವಹಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿಎಂ ಸೂಚಿಸಿದರು.

ಸೈಬರ್‌ ಅಪರಾಧ ತಡೆಹಿಡಿಯಬೇಕು
ತಂತ್ರಜ್ಞಾನ ಬೆಳೆದಂತೆ ಪೊಲೀಸ್‌ ವ್ಯವಸ್ಥೆ ಹೊಸ ಹೊಸ ಸವಾಲುಗಳಿಗೆ ಮುಖಾಮುಖೀ ಆಗುತ್ತದೆ. ಸೈಬರ್‌ ತಂತ್ರಜ್ಞಾನದ ಜತೆಗೇ ಸೈಬರ್‌ ಅಪರಾಧಗಳೂ ಹೆಚ್ಚಾಗುತ್ತಿವೆ. ಇದನ್ನು ಪರಿಣಾಮಕಾರಿಯಾಗಿ ತಡೆ ಹಿಡಿಯಬೇಕು ಎನ್ನುವ ಸೂಚನೆ ನೀಡಿದರು.

ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ರಕ್ಷಣೆ ಕೊಡುವ ಅಗತ್ಯವಿದೆ. ಸುಗಮ ಸಂಚಾರ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಹೀಗಾಗಿ ಹೆಚ್ಚುವರಿ ಪೊಲೀಸ್‌ ಹುದ್ದೆ ಸೃಷ್ಟಿಸಿದ್ದೇವೆ. ಹೆಚ್ಚುವರಿ ಮಹಿಳಾ ಮತ್ತು ಸಂಚಾರ ಠಾಣೆಗಳನ್ನು ಆರಂಭಿಸಿದ್ದೇವೆ ಎಂದು ಸಿಎಂ ಹೇಳಿದರು.

Advertisement

ಕಟ್ಟು ನಿಟ್ಟಾಗಿ ಕಾನೂನು ಸುವ್ಯವಸ್ಥೆ ನಿರ್ವಹಿಸಿ
ಪೊಲೀಸ್‌ ವ್ಯವಸ್ಥೆ ರಾಜ್ಯದ, ಸರ್ಕಾರದ ಘನತೆಯನ್ನು ಹೆಚ್ಚಿಸುವಂತೆ ಕೆಲಸ ಮಾಡುತ್ತದೆ. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಗೆ ನೇರ ಸಂಬಂಧವಿದೆ. ಯಾವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿರುತ್ತದೋ ಅಲ್ಲಿಗೆ ಬಂಡವಾಳ ಹೆಚ್ಚಾಗಿ ಬರುತ್ತದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಿ, ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ. ಇದರ ಪರಿಣಾಮ ನಾಡಿನ ಜನರ ತಲಾ ಆದಾಯದ ಪ್ರಮಾಣವೂ ಹೆಚ್ಚಾಗುತ್ತದೆ. ಹೀಗಾಗಿ ನಾಡಿನ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್‌ ಇಲಾಖೆ ಕಟ್ಟು ನಿಟ್ಟಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಮೋಹನ್‌ ಸೇರಿ ಪೊಲೀಸ್‌ ಇಲಾಖೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು. ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಹುತಾತ್ಮರಾದ ಎಲ್ಲಾ ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸ್ಮರಿಸಿ ನಮನ ಸಲ್ಲಿಸಲಾಯಿತು.

ಹುತಾತ್ಮರ ಕುಟುಂಬಕ್ಕೆ ಸಹಕಾರ
ಕರ್ನಾಟಕದಲ್ಲಿ ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಈ ವರ್ಷದ ಆಗಸ್ಟ್‌ ವರೆಗೆ 16 ಜನ ಹಾಗೂ ದೇಶದಲ್ಲಿ 180 ಜನ ರಕ್ಷಣಾ ಸಿಬ್ಬಂದಿ ಹುತ್ಮಾತರಾಗಿದ್ದಾರೆ. ಅವರೆಲ್ಲರನ್ನೂ ಸ್ಮರಿಸಿ ನಮನ ಸಲ್ಲಿಸಲಾಗಿದೆ. ಹುತಾತ್ಮರಾದ ಪೊಲೀಸ್‌ ಸಿಬ್ಬಂದಿ ಕುಟುಂಬದವರಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ಸಿಎಂ ಹೇಳಿದರು.

ವಸತಿ ಗೃಹ ನಿರ್ಮಾಣಕ್ಕೆ 450 ಕೋಟಿ ರೂ.
ಪೊಲೀಸರಿಗೆ ಹೊಸ ವಾಹನ ಖರೀದಿಗೆ 100 ಕೋಟಿ ರೂ. ನೀಡಲಾಗುವುದು. 2,125 ಪೊಲೀಸ್‌ ವಸತಿ ಗೃಹಗಳನ್ನು ನಿರ್ಮಿಸಲು 450 ಕೋಟಿ ರೂ. ಕೊಡಲಾಗುವುದು. ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳ ಆರೋಗ್ಯ ಭಾಗ್ಯಕ್ಕಾಗಿ 100 ಕೋಟಿ ರೂ. ಒದಗಿಸಲಾಗಿದೆ. ನಿವೃತ್ತ ಸಿಬ್ಬಂದಿಯ ಆರೋಗ್ಯ, ಚಿಕಿತ್ಸೆಗಾಗಿ ನಿಶ್ಚಿತ ಠೇವಣಿ ಇಡಲಾಗಿದೆ. ಪೊಲೀಸ್‌ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ 7 ಜಿಲ್ಲೆಗಳಲ್ಲಿ 7 ಪೊಲೀಸ್‌ ಪಬ್ಲಿಕ್‌ ಶಾಲೆ ಆರಂಭಿಸಲಾಗುತ್ತಿದೆ. ಇವುಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಪೊಲೀಸ್‌ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next