Advertisement

ತಗ್ಗಿತು ಮಳೆ-ಜೋರಾಯ್ತು ಗಾಳಿ

11:48 AM Jul 16, 2018 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಅಬ್ಬರ ಭಾನುವಾರ ಸ್ವಲ್ಪ ಕಡಿಮೆಯಾಗಿದೆ. ಆದರೆ ಬೀಸುತ್ತಿರುವ ಭಾರೀ ಗಾಳಿಯಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ.

Advertisement

ಜಿಲ್ಲೆಯ ಮಲೆನಾಡು ಭಾಗಗಳಾದ ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ಮತ್ತು ಮೂಡಿಗೆರೆ ತಾಲೂಕುಗಳಲ್ಲಿ ಭಾನುವಾರ ಬೆಳಗಿನಿಂದ ಮಳೆ ಬಿಡುವು ನೀಡಿದೆ. ಆದರೆ ನಿರಂತರ ಬೀಸುತ್ತಿರುವ ಗಾಳಿಯಿಂದಾಗಿ ಹಲವೆಡೆ ವಿದ್ಯುತ್‌ ಕಂಬಗಳು, ಮರಗಳು ರಸ್ತೆಗುರುಳಿ ಸಮಸ್ಯೆ ಸೃಷ್ಟಿಸಿದೆ.

ಚಿಕ್ಕಮಗಳೂರು ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಇತಿಹಾಸ ಪ್ರಸಿದ್ಧ ಪರಮೇಶ್ವರ ದೇವಾಲಯದ ಮೇಲ್ಛಾವಣಿ ಕುಸಿದು ಬಿದ್ದಿದೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯವು ಶಿಥಿಲಗೊಂಡಿತ್ತು. ಕಳೆದ ಹಲವು ವರ್ಷಗಳಿಂದ ಗ್ರಾಮಸ್ತರು ದೇವಾಲಯದ ದುರಸ್ತಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಇದರತ್ತ ಗಮನಹರಿಸಿರಲಿಲ್ಲ. ಈ ಬಾರಿ ಸುರಿದ ಭಾರೀ ಮಳೆಯಿಂದ ದೇವಾಲಯದ ಮೇಲ್ಛಾವಣಿ ಕೊನೆಗೂ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ದೇವರ ವಿಗ್ರಹಗಳಿಗೆ ಯಾವುದೇ ತೊಂದರೆಯಾಗಿಲ್ಲ.

ಭಾರೀ ಗಾಳಿಯಿಂದಾಗಿ ತಾಲೂಕಿನ ಭಕ್ತರಹಳ್ಳಿ ಬಳಿ 6ಕ್ಕೂ ಹೆಚ್ಚು ಮರಗಳು ರಸ್ತೆಗೆ ಉರುಳಿಬಿದ್ದು, ಚಿಕ್ಕಮಗಳೂರು-ತರೀಕೆರೆ ಮಾರ್ಗದಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರೇ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಾಲೂಕಿನ ಆಲ್ದೂರು ಸಮೀಪ ಭಾನುವಾರ ಮಧ್ಯಾಹ್ನ ಭಾರೀ ಗಾತ್ರದ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಸಂಚಾರ ಸ್ಥಗಿತಗೊಂಡಿತ್ತು.
 
ಗಾಳಿಯಿಂದಾಗಿ ನಗರದ ವಿಜಯಪುರ ಬಡಾವಣೆಯಲ್ಲಿ ದೊಡ್ಡ ಮರವೊಂದು ಬುಡಸಹಿತ ಉರುಳಿದ್ದು ಪಕ್ಕದಲ್ಲಿಯೇ ಇದ್ದ ಮನೆಗೆ ಒರಗಿ ನಿಂತುಕೊಂಡಿತ್ತು. ಮರ ಪೂರ್ಣ ಪ್ರಮಾಣದಲ್ಲಿ ಬಿದ್ದಿದ್ದರೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಮರ ವಾಲಿದ್ದನ್ನು ಗಮನಿಸಿದ ಸಾರ್ವಜನಿಕರು ಮರವನ್ನು ಪಕ್ಕಕ್ಕೆ ಎಳೆದು ಬೀಳಿಸಿದರು. ತೊಗರಿಹಂಕಲ್‌ ವೃತ್ತದಲ್ಲಿಯೂ ಮರವೊಂದು ಬಿದ್ದಿತ್ತು. ಭಾರೀ ಗಾಳಿಯಿಂದ ನಗರದ ಹಲವೆಡೆ ಹಾಕಲಾಗಿದ್ದ ದೊಡ್ಡ ದೊಡ್ಡ ಜಾಹೀರಾತು ಫಲಕಗಳು ಸಂಪೂರ್ಣ ಹರಿದು ಹೋಗಿವೆ. ನಗರದ ವಿವಿಧೆಡೆಗಳಲ್ಲಿ ಭಾನುವಾರ ಬೆಳಗಿನಿಂದಲೂ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಸಂಜೆಯಾದರೂ ವಿದ್ಯುತ್‌ ಸಂಪರ್ಕ ನೀಡಿರಲಿಲ್ಲ.

ಶೃಂಗೇರಿ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆಯಾದರೂ ಭಾರೀ ಗಾಳಿ ಬೀಸುತ್ತಿದೆ. ತಾಲೂಕಿನ ವಿವಿಧೆಡೆಗಳಲ್ಲಿ ಭಾರೀ ಗಾತ್ರದ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಶೃಂಗೇರಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ವಿದ್ಯುತ್‌ ಕಂಬಗಳು ಬಿದ್ದಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆಯಿಂದಲೂ ವಿದ್ಯುತ್‌ ಕಡಿತಗೊಂಡಿದ್ದು, ಸಾರ್ವಜನಿಕರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.

Advertisement

ಮೊದಲ ಬಾರಿ 24 ಗಂಟೆ ಮುಳುಗಿದ ಹೆಬ್ಟಾಳೆ: ಮೂಡಿಗೆರೆ ತಾಲೂಕಿನಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಮುಳುಗಿದ್ದ ಹೆಬ್ಟಾಳೆ ಸೇತುವೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನದಿ ನೀರು ಕಡಿಮೆಯಾಗಿದ್ದು, ರಸ್ತೆ ಸಂಚಾರಕ್ಕೆ ತೆರೆದುಕೊಂಡಿದೆ. ಪ್ರಸ್ತುತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಹೆಬ್ಟಾಳೆ ಸೇತುವೆ ನೀರಿನಲ್ಲಿ 24 ಗಂಟೆಗೂ ಹೆಚ್ಚು ಕಾಲ ಮುಳುಗಿತ್ತು. 

ಮೂಡಿಗೆರೆ ತಾಲೂಕಿನ ಆನೆಗುಂಡಿ ಭೂತಪ್ಪ ದೇವಾಲಯದ ಬಳಿ ಭಾರೀ ಗಾತ್ರದ ಮರವೊಂದು ಬಿದ್ದು, ಕೂವೆ ಹಾಗೂ ಆನೆಗುಂದ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿತ್ತು. ಗೋಣಿಬೀಡು ಹೋಬಳಿಯ ಮರೆಬೈಲ್‌ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿರುವುದಲ್ಲದೆ, ಮಹಿಳೆಯೊಬ್ಬರಿಗೆ ಗಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next