Advertisement
ರಾಜ್ಯದ ಇತಿಹಾಸದಲ್ಲಿ ಯಾವುದೇ ಮೈತ್ರಿ ಸರ್ಕಾರಗಳು ಐದು ವರ್ಷದ ಅವಧಿ ಪೂರ್ಣ ಗೊಳಿಸಿದ ಉದಾಹರಣೆ ಇಲ್ಲ. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಮತದಾರರು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದ ಹಿನ್ನೆಲೆಯಲ್ಲಿ, ಜಾತ್ಯತೀತ ಪಕ್ಷಗಳೆಂದು ಹೇಳಿಕೊಳ್ಳುವ ಕಾಂಗ್ರೆಸ್, ಜೆಡಿಎಸ್ ಒಪ್ಪಂದದ ಮೇರೆಗೆ ರಚಿತವಾದ ಸಮ್ಮಿಶ್ರ ಸರ್ಕಾರ(ಸಾಂದರ್ಭಿಕ ಶಿಶು) 13 ತಿಂಗಳ ಅಂಬೆಗಾಲಿಡುವ ಸಂದರ್ಭದಲ್ಲೇ ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದೆ.ಕಳೆದ ಬಾರಿ ಐದು ವರ್ಷ ಅವಧಿ ಪೂರ್ಣಗೊಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಕೇವಲ 84 ಹಾಗೂ ವಿರೋಧ ಪಕ್ಷದಲ್ಲಿದ್ದ ಬಿಜೆಪಿಗೆ 104 ಮತ್ತು ಜೆಡಿಎಸ್‌ಗೆ 37 ಸ್ಥಾನಗಳನ್ನು ನೀಡುವ ಮೂಲಕ ರಾಜ್ಯದ ಮತದಾರರು ಅಸ್ಪಷ್ಟ ತೀರ್ಪು ನೀಡಿದ್ದರು. ಇದರ ಫಲವಾಗಿ ಅಧಿಕಾರಕ್ಕೆ ಬಂದಿದ್ದೇ ಮೈತ್ರಿ ಸರ್ಕಾರ. ಆದರೆ, ಈ ಮೈತ್ರಿ ಕಳೆದ ಒಂದು ವರ್ಷದಿಂದ ಕುಂಟುತ್ತ, ತೆವಳುತ್ತ ಹೇಗೋ ಸಾಗಿ ಬಂದಿದೆ. ಇದೀಗ “ಒಲ್ಲದ ಗಂಡನೊಂದಿಗೆ ಬಾಳು ನಡೆಸಲು ಸಾಧ್ಯವಿಲ್ಲ’ ಎಂಬಂತೆ ಜೆಡಿಎಸ್‌ಗೆ ಮುಖ್ಯಮಂತ್ರಿ ಪಟ್ಟ (ವರಿಷ್ಠರ ಸೂಚನೆ ಮೇರೆಗೆ) ನೀಡಿದ ಕಾಂಗ್ರೆಸ್‌ನ ಕೆಲವು ಶಾಸಕರು ಬಂಡಾಯದ ಬಾವುಟವನ್ನು ಬಲವಾಗಿಯೇ ಹಾರಿಸಿದ್ದಾರೆ. ಮಾತ್ರವಲ್ಲ, ಸಮ್ಮಿಶ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ನಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಯಾವುದೇ ಯೋಜನೆ, ಅನುದಾನ ನೀಡುತ್ತಿಲ್ಲ ಎಂಬ ಆರೋಪಗಳನ್ನು ಅತೃಪ್ತ ಶಾಸಕರು ಮಾಡಿದ್ದಾರೆ.
Related Articles
ಅಷ್ಟಕ್ಕೂ ಮೈತ್ರಿ ಸರ್ಕಾರ ರಚನೆ ಉದ್ದೇಶ ಈಡೇರಿದೆಯೇ ಎಂಬುದರ ಬಗ್ಗೆಯೂ ಗಂಭೀರ ಚಿಂತನೆ ಅಗತ್ಯ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವುದೇ ಮೈತ್ರಿ ಪಕ್ಷಗಳ ಪರಮ ಗುರಿಯಾಗಿತ್ತು. ಆದರೆ, ಆದದ್ದೇನು? ಆಡಳಿತಾರೂಢ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಕೇವಲ ಒಂದೊಂದು ಸ್ಥಾನ ಪಡೆಯುವ ಮೂಲಕ ಹೀನಾಯ ಸ್ಥಿತಿಗೆ ತಳ್ಳಲ್ಪಟ್ಟಿವೆ. ಇದು ಮೈತ್ರಿ ಪಕ್ಷಗಳಲ್ಲಿರುವ ಸಮನ್ವಯತೆ ಕೊರತೆಯನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. ಚುನಾವಣೆ ವೇಳೆ ಯಾರೊಬ್ಬರೂ ಮೈತ್ರಿ ಧರ್ಮ ಪಾಲನೆ ಮಾಡಲಿಲ್ಲ ಎಂಬ ಮಾತು ಕೇಳಿಬಂದಿವೆ. ಇನ್ನು ಆಡಳಿತ ವ್ಯವಸ್ಥೆಯೂ ಇದಕ್ಕೆ ಹೊರತಾಗಿಲ್ಲ ಎಂದೂ ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಉಭಯ ಪಕ್ಷಗಳು ರಾಜ್ಯದಲ್ಲಿ ಯಾವುದೇ ಅಲೆ ಇದ್ದರೂ ಸರಿ ಕನಿಷ್ಟ ನಾಲ್ಕಾರು ಸ್ಥಾನಗಳನ್ನಾದರೂ ಪಡೆಯ ಬಹುದಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ನಡೆದದ್ದೇ ಬೇರೆ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ನಡೆದುಕೊಂಡಿದ್ದರಿಂದಲೇ ಈ ರೀತಿಯ ಫಲಿತಾಂಶ ಬಂದಿತು ಎಂಬ ಮಾತುಗಳೂ ಕೇಳಿಬಂದಿವೆ.
Advertisement
ಮೈತ್ರಿಯ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲವು ಶಾಸಕರು ದಿಢೀರ್ ರಾಜೀನಾಮೆ ನೀಡಿದ್ದರಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಕಾಂಗ್ರೆಸ್ ಮುಖಂಡರು ತಮ್ಮ ಶಾಸಕರ ಮನವೊಲಿಸಲು ಎಷ್ಟೇ ಕಸರತ್ತು ನಡೆಸಿದರೂ ಫಲ ಸಿಗುತ್ತಿಲ್ಲ. ಇನ್ನು, ಜೆಡಿಎಸ್ ಮುಖಂಡರಂತೂ ರಾಜೀನಾಮೆ ನೀಡಿದ ತಮ್ಮ ಪಕ್ಷದ ಶಾಸಕರ ಉಸಾಬರಿಯೇ ಬೇಡ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.
ಇದು ಒಂದು ಹಂತವಾದರೆ, ಒಂದು ವರ್ಷ ನಡೆದುಕೊಂಡು ಬಂದ ಹಾಗೂ ಹತ್ತಾರು ಕಾರ್ಯ ಕ್ರಮಗಳನ್ನು ಜಾರಿಗೊಳಿಸಿದ ಮೈತ್ರಿ ಸರ್ಕಾರಕ್ಕೆ ಬರಸಿಡಿಲಿನಂತೆ ಬಂದೆರಗಿದ ಈ ಆಪತ್ತು ಶಮನ ಆದೀತೇ ಎಂಬ ಪ್ರಶ್ನೆಯೂ ಎದುರಾಗಿದೆ. ಆದರೆ, ಅತೃಪ್ತ ಶಾಸಕರು ಮುಂಬೈನಲ್ಲಿ ಬಿಡಾರ ಹೂಡಿರುವುದರಿಂದ ಎಲ್ಲವೂ ಕಷ್ಟಸಾಧ್ಯದ ಮಾತಾಗಿ ಪರಿಣಮಿಸಿದೆ. ಏಕೆಂದರೆ, ಅವರೊಂದಿಗೆ ಮಾತನಾಡಿ ಮನವೊಲಿಸುವ ಯಾವುದೇ ಪ್ರಯತ್ನಗಳು ಕೈಗೂಡುವ ಸಾಧ್ಯತೆಗಳು ಕ್ಷೀಣಿಸಿದಂತೆ ಭಾಸವಾಗುತ್ತಿವೆ. ಕಾಂಗ್ರೆಸ್‌ನ ಹಿರಿಯ ಸಚಿವರೊಬ್ಬರು ಮುಂಬೈಗೆ ಹೋಗಿ ಎಷ್ಟೇ ಪ್ರಯತ್ನ ಪಟ್ಟರೂ, ಅತೃಪ್ತರ ಜತೆ ಮಾತುಕತೆ ನಡೆಸುವುದು ಇರಲಿ, ಅವರನ್ನು ಭೇಟಿ ಮಾಡಲು ಸಹ ಸಾಧ್ಯವಾಗದೇ ಬರಿಗೈಯಲ್ಲಿಯೇ ವಾಪಸಾಗಿರುವುದು ವಸ್ತುಸ್ಥಿತಿಗೆ ಹಿಡಿದ ಕೈಗನ್ನಡಿ.
ಕಾಂಗ್ರೆಸ್‌ಗೆ ಸೇರಿದ ಹಿರಿಯ ಸಚಿವರೊಬ್ಬರು ಮುಖ್ಯಮಂತ್ರಿಗಳ ಮೇಲೆಯೇ ನೇರ ಆರೋಪ ಮಾಡಿರುವುದು ಪರಿಸ್ಥಿತಿಯ ದಿಕ್ಸೂಚಿ. ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳಿಂದ ಯಾವುದೇ ಜನಪರ ಯೊಜನೆಗಳು ಜಾರಿಯಾಗಿಲ್ಲ. ಕುಮಾರಸ್ವಾಮಿ ಸಾಂವಿಧಾನಿಕ ಮುಖ್ಯಮಂತ್ರಿಯಾದರೆ, ಅವರ ಕುಟುಂಬದಲ್ಲಿ ಮೂವರು ಸಿಎಂ ಇದ್ದಾರೆ ಎಂದು ಹೇಳುವ ಮೂಲಕ ಮೈತ್ರಿಯಲ್ಲಿನ ಬೇಗುದಿಯನ್ನು ಹೊರಹಾಕಿದ್ದಾರೆ. ಇದು ಮೈತ್ರಿ ಧರ್ಮಕ್ಕೆ ಬಹುದೊಡ್ಡ ಹೊಡೆತ.
ಸಂಪುಟದ ಸಚಿವರೊಬ್ಬರು ತಾವೇ ಒಪ್ಪಿಕೊಂಡ ಮುಖ್ಯಮಂತ್ರಿಗಳ ಮೇಲೆ ಈ ರೀತಿ ಗಂಭೀರ ಆರೋಪ ಮಾಡುವುದು ಸರ್ಕಾರದ ವಿಶ್ವಾಸಾರ್ಹತೆಗೆ ಖಂಡಿತ ಧಕ್ಕೆ ತರುತ್ತದೆ. ಅಲ್ಲದೇ, ಇದು ಮೈತ್ರಿ ಸಂಪುಟದಲ್ಲಿಯೇ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ನಿದರ್ಶನವೂ ಆಗಿದೆ. “ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬುದನ್ನು ಅರಿತು ನಡೆದಿದ್ದರೆ ಮೈತ್ರಿ ಸರ್ಕಾರಕ್ಕೆ ಪ್ರಾಯಶಃ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲವೇನೋ. ಆದರೆ, ಈಗ ಎಲ್ಲವೂ ಅಯೋಮಯವಾಗಿ ಗೋಚರಿಸುತ್ತಿದೆ.
ಅಶೋಕ ಸ. ಬೆಳಗಲಿ (ಕುದರಿ)