ಕೆ.ಆರ್.ನಗರ: ಲೋಕಸಭಾ ಚುನಾವಣೆ ಮುಗಿದ ಅನಂತರ ರಾಜ್ಯ ಸರಕಾರ ಪತನವಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದು, ಅದು ಈಡೇ ರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ಶನಿವಾರ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರ ನಡೆದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದಿಂದ 136 ಮಂದಿ ಶಾಸಕರು ಆಯ್ಕೆಯಾಗಿದ್ದು, ನಮ್ಮೆಲ್ಲರ ಒಗ್ಗಟ್ಟು ಮತ್ತು ರಾಜ್ಯದ ಜನತೆಯ ಆಶೀರ್ವಾದ ಇರುವವರೆಗೂ ನಮ್ಮನ್ನು ಯಾರು ಏನು ಮಾಡಲು ಸಾಧ್ಯವಿಲ್ಲ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದವರಿಗೆ ನನ್ನನ್ನೂ ಸೇರಿದಂತೆ ಒಕ್ಕಲಿಗರನ್ನು ಕಂಡರೆ ಆಗುವುದಿಲ್ಲ. ಅದರಲ್ಲಿಯೂ ಒಕ್ಕಲಿಗ ಸಮಾಜದವರು ಅಧಿಕಾರದಲ್ಲಿದ್ದರೆ ಹೊಟ್ಟೆ ಉರಿದುಕೊಂಡು, ಬಾಯಿ ಬಡಿದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನವರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಲ್ಲ ಕಡೆಯು ತಮ್ಮ ಕುಟುಂಬದವರನ್ನೇ ಕಣಕ್ಕಿಳಿಸಿದ್ದು, ಕೋಲಾರ ಲೋಕಸಭಾ ಕ್ಷೇತ್ರ ಮೀಸಲಾಗದಿದ್ದರೆ ಅಲ್ಲಿಯೂ ತಮ್ಮವರನ್ನೇ ನಿಲ್ಲಿಸುತ್ತಿದ್ದರು. ಅಧಿಕಾರದ ಆಸೆಗಾಗಿ ತಮ್ಮ ಅಳಿಯನಿಗೂ ಬಿಜೆಪಿಯಿಂದ ಟಿಕೆಟ್ ಕೊಡಿಸಿದ್ದಾರೆ ಎಂದರು.
ಅಳುವುದಕ್ಕೆ ಸಭೆ
ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಕೊನೆಯ ದಿನ ಕಣ್ಣೀರು ಹಾಕುವ ಮೂಲಕ ಅಳುವುದಕ್ಕೆ ಸಭೆ ಇಟ್ಟುಕೊಂಡಿದ್ದಾರೆ. ಅಳುವುದು ಅವರ ಕೊನೆಯ ಅಸ್ತ್ರವಾಗಿದ್ದು, ಅದನ್ನು ಯಾರೂ ನಂಬಬೇಡಿ. ಕೋಮುವಾದಿ ಪಕ್ಷದ ಜತೆ ಸೇರಿರುವ ನೀವು (ಜೆಡಿಎಸ್) ಜಾತ್ಯತೀತರಲ್ಲ.
ಸಿದ್ದರಾಮಯ್ಯ ಮುಖ್ಯಮಂತ್ರಿ