Advertisement

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

11:17 PM Sep 18, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 5 ವರ್ಷ ಅವಧಿ ಪೂರ್ಣಗೊಳಿಸುವುದು ಅನುಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಮೋದಿ ನೇತೃತ್ವದ ಸರಕಾರವು ಜೆಡಿಯು ಮತ್ತು ಟಿಡಿಪಿ ನೆರವಿನಿಂದ ನಡೆಯುತ್ತಿದೆ. ಅವರು ಹೊರಬಂದರೆ ಮುಗಿಯಿತು. ನನಗಿರುವ ಮಾಹಿತಿ ಪ್ರಕಾರ ಈಗಿರುವ ಕೇಂದ್ರ ಸರಕಾರ 5 ವರ್ಷಗಳ ಅವಧಿ ಪೂರ್ಣಗೊಳಿಸುತ್ತದೆ ಅಂತ ಅನಿಸುತ್ತಿಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದರು.

136 ಸ್ಥಾನಗಳನ್ನು ಹೊಂದಿರುವ ನಮ್ಮ ಸರಕಾರ ನಾಳೆಗೆ ಬಿದ್ದುಹೋಗುತ್ತದೆ, ನಾಡಿದ್ದು ಬೀಳುತ್ತದೆ ಅಂತ ವಿಪಕ್ಷಗಳು ಹೇಳುತ್ತವೆ. ಆದರೆ, ಮೋದಿ ನೇತೃತ್ವದ ಕೇಂದ್ರ ಸರಕಾರವೇ ತನ್ನ ಅವಧಿ ಪೂರ್ಣಗೊಳಿಸುವುದು ಅನುಮಾನ ಎಂದರು.
ಈ ನಡುವೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ವರ್ಚಸ್ಸು ಮತ್ತು ಬೆಳವಣಿಗೆ ಸಹಿಸಲಾಗದ ಬಿಜೆಪಿಯು ರಾಜಕೀಯವಾಗಿ ಮುಗಿಸಲು ಕುತಂತ್ರ ನಡೆಸುತ್ತಿದೆ. ಅದಕ್ಕೆ ಇತ್ತೀಚೆಗೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳು ಹಾಗೂ ಅದರ ಸುತ್ತಲಿನ ಬೆಳವಣಿಗೆಗಳೇ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಉತ್ತರ ಪ್ರದೇಶದ ಬಿಜೆಪಿಯ ಓರ್ವ ಶಾಸಕ, ರಾಹುಲ್‌ ಗಾಂಧಿ ಅವರನ್ನು ನಂಬರ್‌ ಒನ್‌ ಭಯೋತ್ಪಾದಕ ಎನ್ನುತ್ತಾರೆ. ಮಹಾರಾಷ್ಟ್ರದ ಮತ್ತೋರ್ವ ಬಿಜೆಪಿ ಶಾಸಕ, ರಾಹುಲ್‌ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ ಅಂತಾರೆ. ಇನ್ನೊಬ್ಬರು ಕೊಲೆ ಬೆದರಿಕೆ ಹಾಕುತ್ತಾರೆ. ಇದೆಲ್ಲವನ್ನೂ ನೋಡಿದರೆ, ರಾಹುಲ್‌ ಗಾಂಧಿ ಅವರಿಗೆ ಜೀವ ಬೆದರಿಕೆ ಇದೆ ಅನ್ನುವುದು ಸ್ಪಷ್ಟವಾಗುತ್ತದೆ. ಕೂಡಲೇ ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಒತ್ತಾಯಿಸಿದರು.

ಯತ್ನಾಳ್‌ ಇಟ್ಟುಕೊಂಡಿದ್ದೇ ಬೊಗಳಿಸಲು
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರನ್ನು ಬಿಜೆಪಿ ಇಟ್ಟುಕೊಂಡಿರುವುದೇ ಬೊಗಳಿಸಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

Advertisement

ಬಿಜೆಪಿಯು ಬೇಕಾಬಿಟ್ಟಿ ಸುಳ್ಳು ಆರೋಪಗಳನ್ನು ಮಾಡಲಿಕ್ಕಾಗಿಯೇ ಇಂತಹ ಕೆಲವರನ್ನು ಪಕ್ಷದಲ್ಲಿ ಇಟ್ಟುಕೊಂಡಿದೆ. ಹಿಂದೆ ಯತ್ನಾಳ್‌, ಯಡಿಯೂರಪ್ಪ ಮತ್ತು ಬಿ. ವೈ. ವಿಜಯೇಂದ್ರ ವಿರುದ್ಧ 20 ಸಾವಿರ ಕೋಟಿ ರೂ. ಆರೋಪ ಮಾಡಿದ್ದರು. ಅದರ ಅನಂತರವೂ ಅನೇಕ ಸಲ ಹೇಳಿಕೆ ನೀಡಿದ್ದಾರೆ. ಪಕ್ಷ (ಬಿಜೆಪಿ) ಏನಾದರೂ ಕ್ರಮ ಕೈಗೊಂಡಿತೇ? ಕೇಂದ್ರ ಮಾಜಿ ಸಚಿವ ಅನಂತಕುಮಾರ್‌ ಹೆಗಡೆ ಸಂವಿಧಾನ ಬದಲಾಯಿಸುವುದಾಗಿ ಹೇಳಿದರು. ಅವರ ವಿರುದ್ಧ ಏನಾದರೂ ಕ್ರಮ ಆಯಿತಾ?’ ಎಂದು ಪ್ರಶ್ನೆಯೊಂದಕ್ಕೆ ಕೇಳಿದರು.

ಮುನಿರತ್ನ ವಿರುದ್ಧ ಕಾನೂನು ಪ್ರಕಾರ ಕ್ರಮ
ಶಾಸಕ ಮುನಿರತ್ನ ಪ್ರಕರಣದಲ್ಲಿ ಪೊಲೀಸರು ತಮ್ಮ ವಿವೇಚನೆ ಮೇರೆಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪಿಎಸ್‌ಐ ಪರಶುರಾಮ ಸಾವಿನ ವಿಚಾರದಲ್ಲಿ ಕೇಳಿಬಂದ ಶಾಸಕ ಚನ್ನಾರೆಡ್ಡಿ ಪಾಟೀಲ ತನ್ನೂರು ಪ್ರಕರಣದೊಂದಿಗೆ ಶಾಸಕ ಮುನಿರತ್ನ ಪ್ರಕರಣವನ್ನು ಹೋಲಿಕೆ ಮಾಡುವುದು ಸರಿ ಅಲ್ಲ. ಆ ಪ್ರಕರಣದಲ್ಲಿ ಎಲ್ಲಿಯೂ ಪರಶುರಾಮ, ಶಾಸಕನ ಹೆಸರು ಹೇಳಿದ್ದಾರೆಯೇ? ಇಲ್ಲ, ಹೀಗಿರುವಾಗ ಪ್ರಕರಣವನ್ನು ಮುನಿರತ್ನ ಪ್ರಕರಣಕ್ಕೆ ಹೋಲಿಕೆ ಮಾಡಲು ಬರುವುದಿಲ್ಲ ಎಂದು ಹೇಳಿದರು.

ಈ ಮಧ್ಯೆ ಒಕ್ಕಲಿಗ ಮುಖಂಡರು ನನ್ನನ್ನು ಭೇಟಿ ಮಾಡಿ, ಒಕ್ಕಲಿಗ ಮತ್ತು ಪರಿಶಿಷ್ಟ ಜಾತಿ ಬಗ್ಗೆ ಹೀನಾಯವಾಗಿ ಮಾತನಾಡಿರುವ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ಆಗಲಿದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next