ಬೆಂಗಳೂರು: ಸಂಕಷ್ಟಕ್ಕೆ ಸಿಲುಕಿರುವ ಮೈಸೂರಿನ ಫ್ಯಾಲ್ಕನ್ ಟೈರ್ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಪ್ರಸ್ತಾವ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಂಗಳವಾರ ಫ್ಯಾಲ್ಕನ್ ಟೈರ್ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ ಪ್ರತಿನಿಧಿಗಳು, ಕಾರ್ಖಾನೆಯನ್ನು ಪುನಾರಂಭಿಸಿದರೆ
ತಾಂತ್ರಿಕ ಪರಿಣತಿ ಹೊಂದಿರುವ ಸುಮಾರು 3,700 ಕಾರ್ಮಿಕರು ಕಾರ್ಯ ನಿರ್ವಹಿಸಲು ಆಸಕ್ತಿ ತೋರಿದ್ದಾರೆ. ಕಾರ್ಖಾನೆ ಆರಂಭಿಸಲು ಸುಮಾರು 120 ಕೋಟಿ ರೂ. ಬ್ಯಾಂಕ್ ಖಾತರಿ ಹಾಗೂ 150 ಕೋಟಿ ರೂ. ದುಡಿಯುವ ಬಂಡವಾಳ ಬೇಕಿದೆ. ಕಾರ್ಖಾನೆಗೆ ವ್ಯವಸ್ಥಾಪಕ ಮಂಡಳಿ
ಸ್ಥಾಪಿಸುವ ಬಗ್ಗೆಯೂ ಪರಿಶೀಲಿಸಬಹು ದಾಗಿದೆ ಎಂದು ವಿವರಿಸಿದರು.
ಬಳಿಕ ಮಾತನಾಡಿದ ಕುಮಾರಸ್ವಾಮಿ, ಕಾರ್ಖಾನೆ ಪುನರಾರಂಭಿಸಲು ಸುಮಾರು 3,700 ಕಾರ್ಮಿಕರು ಆಸಕ್ತಿ ತೋರಿರುವು ದು ಪ್ರಶಂಸನೀಯ. ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಸಚಿವರಾದ ಕೆ.ಜೆ.ಜಾರ್ಜ್, ಜಿ.ಟಿ.ದೇವೇಗೌಡ, ಎಚ್.ಡಿ.ರೇವಣ್ಣ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಫ್ಯಾಲ್ಕನ್ ಟೈರ್ ಕಾರ್ಖಾನೆ ಪ್ರತಿನಿಧಿಗಳು ಉಪಸ್ಥಿತರಿದ್ದರು.