ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಮಿಯ್ಯರು ಸಮಾಜ ಮಂದಿರ ಕುಂಟಿಬೈಲಿನ(155) ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಕಾಂಗ್ರೆಸ್‌ನ ಮಿಯ್ಯರು ಗ್ರಾಮ ಸಮಿತಿ ಅಧ್ಯಕ್ಷ ತಾರಾನಾಥ ಕೋಟ್ಯಾನ್ ಅವರು ಮತಗಟ್ಟೆಯ ಅಧಿಕಾರಿಗೆ (ಪ್ರಿಸೈಡಿಂಗ್ ಆಫೀಸರ್) ದೂರು ನೀಡಿದ್ದಾರೆ.
ಸಂಜೆ ವೇಳೆಗೆ ನಕಲಿ ಮತದಾನ ಮಾಡಲು ಧೀರಜ್ ಎಂಬ ಅಪ್ತಾಪ್ತ ವಯಸ್ಸನಿಗೆ ಮತ ಹಾಕಲು ಅವಕಾಶ ಕಲ್ಪಿಸಲಾಗಿದೆ. ಅವನು ಬೂತ್ ಒಳಗೆ ಹೋದಾಗ ಅಲ್ಲಿದ್ದ ನಮ್ಮ ಪಕ್ಷದ ಪೋಲಿಂಗ್ ಏಜೆಂಟ್ ಮತದಾನದ ಅಧಿಕಾರಿಗೆ ಆತ ಮತದಾರ ಅಲ್ಲ ಎಂದು ತಿಳಿಸಿದ್ದರು. ಆದರೂ ಗುರುತಿನ ಚೀಟಿ ಇದೆ ಮುಖ ಹೋಲಿಕೆ ಆಗುತ್ತದೆ ಎಂದು ಮತ ಹಾಕಲು ಅವಕಾಶ ಕಲ್ಪಿಸಿದ್ದರು ಎಂದು ತಾರಾನಾಥ ಹಾಗೂ ಗ್ರಾಮಸ್ಥ ಶಬೀರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಆತ ನಿರ್ಗಮಿಸುವಾಗ ತಡೆದು ನಿಲ್ಲಿಸಿ ನೋಡಿದಾಗ ಹುಡುಗನ ಬೆರಳಿಗೆ ಶಾಯಿ ಹಾಕಿರುವುದು ಕಂಡುಬಂತು. ಅತನ ಕಿಸೆಯಲ್ಲಿ ಸುಹಾಸ್ ಶೆಟ್ಟಿ ಎಂಬವನ ಐಡಿ ಇತ್ತು. ಅದಕ್ಕಿಂತ ಮೊದಲು ಹೋದವರಿಗೆ ಬಿಎಲ್‌ಒ ಪ್ರಿಸೈಡಿಂಗ್ ಆಫೀಸರ್ ಕೊಟ್ಟ ಚೀಟಿಯೇ ಬೇಕೆಂದಿದ್ದರು. ಆದರೆ ಈ ಹುಡುಗನಿಗೆ ಪಕ್ಷ ನೀಡಿದ ಚೀಟಿಯ ಆಧಾರದ ಮೇಲೆ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ನಕಲಿ ಮತದಾನಣ ಖಚಿತವಾದ ಮೇಲೆ ಅವನನ್ನು ಹಿಡಿದು ಮತಗಟ್ಟೆ ಅಧಿಕಾರಿಗೆ ಒಪ್ಪಿಸಿದ್ದೇವೆ. ನಾವು ಪೋಲಿಂಗ್ ಏಜೆಂಟ್ ಅಲ್ಲದ ಕಾರಣ ನಮಗೆ ಒಳಗೆ ಹೋಗಲು ಅವಕಾಶ ಇರಲಿಲ್ಲ ಎಂದರು ಶಬೀರ್.
ಪೊಲೀಸ್ ಅಧಿಕಾರಿಗಳಿಂದ ದಬ್ಟಾಳಿಕೆ
ನಮ್ಮ ಬೇಡಿಕೆಗೆ ಬೆಲೆ ಕೊಡದೇ ಪೊಲೀಸ್ ಅಧಿಕಾರಿಗಳು ದಬ್ಟಾಳಿಕೆ ನಡೆಸಿದ್ದಾರೆ. ಅಧಿಕಾರಿಗಳು, ಪೊಲೀಸರು ಎಲ್ಲರೂ ನಕಲಿ ಮತದಾನ ಮಾಡಿದವರ ಬೆಂಬಲಕ್ಕೆ ನಿಂತಿದ್ದಾರೆ. ಅಕ್ರಮ ನಡೆದಿಲ್ಲ ಎಂದು ದೇವರ ಮುಂದೆ ಬಂದು ಪ್ರಮಾಣ ಮಾಡಿ ಹೇಳಲಿ ಎಂದು ತಾರಾನಾಥ ಕೋಟ್ಯಾನ್ ಆಗ್ರಹಿಸಿದರು.