ಮಹಾಲಿಂಗಪುರ: ಪಟ್ಟಣದ ಬಸವನಗರ ರಸ್ತೆಯಲ್ಲಿನ ಆರ್ ಎಂ ಪಿ ವೈದ್ಯರ ರಾಜ್ಯಾಧ್ಯಕ್ಷನ ದವಾಖಾನೆ ಸಹಿತ 8 ಆಸ್ಪತ್ರೆಗಳನ್ನು ತಪಾಸಣೆ ನಡೆಸಿದ ಮುಧೋಳ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ ಮಲಘಾಣ ಹಾಗೂ ಅವರ ಸಿಬ್ಬಂದಿಯು 4 ಆಸ್ಪತ್ರೆಗಳನ್ನು ಸೀಜ್ ಮಾಡಿದ್ದಾರೆ. ಮುಧೋಳ ತಾಲೂಕಿನಾದ್ಯಂತ ಕಳೆದ 4-5 ದಿನಗಳಿಂದ ವಿವಿಧ ಗ್ರಾಮ ಮತ್ತು ಪಟ್ಟಣಗಳಲ್ಲಿ ನಕಲಿ
ವೈದ್ಯರ ಮೇಲೆ ದಾಳಿ ಮಾಡಿ, ಅನಧಿಕೃತ ದವಾಖಾನೆಗಳನ್ನು ಸೀಜ್ ಮಾಡಿ ಮುಂದಿನ ಕ್ರಮಕ್ಕಾಗಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ನಕಲಿ ವೈದ್ಯರ ಚಿಕಿತ್ಸೆಯಿಂದ ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ರೋಗಿಗಳ ಪ್ರಾಣಕ್ಕೂ ಕುತ್ತು ಬಂದಿರುವ ಕಾರಣ ಮುಧೋಳ ತಾಲೂಕಿನಾದ್ಯಂತ ನಕಲಿ ವೈದ್ಯರನ್ನು ಹುಡುಕಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಹಲವೆಡೆ ದಾಳಿ : ಮುಧೋಳ ತಾಲೂಕಿನಾದ್ಯಂತ ಸುಮಾರು 40 ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಲೋಕಾಪುರ 2, ಹಲಗಲಿ 1, ಮುಧೋಳ 1, ರನ್ನ ಬೆಳಗಲಿ 1, ಮಹಾಲಿಂಗಪುರ ಪಟ್ಟಣದಲ್ಲಿ ಆರ್ ಎಂ ಪಿ ವೈದ್ಯರ ರಾಜ್ಯಾಧ್ಯಕ್ಷ ಎಂ ಎಸ್. ಕದ್ದಿಮನಿ, ಕೆಂಗೇರಿಮಡ್ಡಿ ಬಡಾವಣೆಯ ಶಂಕರ ಹುಕ್ಕೇರಿ ಮತ್ತು ಇನ್ನೊಂದು ಕಡೆ ಮಹಿಳೆಯ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿಸಿದರು. ಲಂಚದ ಆಮಿಷ ಒಡ್ಡಿದ್ದ ನಕಲಿ ವೈದ್ಯರು : ನಕಲಿ ಆಸ್ಪತ್ರೆಯ ದಾಳಿಯಾದ ನಂತರ ನಕಲಿ ವೈದ್ಯರು ಟಿಎಚ್ ಓ ಅವರಿಗೆ ಹಣದ ಆಮೀಷ ಒಡ್ಡಿದ್ದರು, ಆದರೆ ಯಾವುದೇ ಆಮಿಷಗಳಿಗೆ ಒಳಗಾಗದೇ ನಕಲಿ ವೈದ್ಯರ ಮೇಲೆ ದಾಳಿ ನಡೆಸಿ ಸೀಜ್ ಮಾಡಿ ವರದಿಯನ್ನು ಡಿಎಚ್ಓ ಅವರಿಗೆ ಕಳಿಸಲಾಗಿದೆ.
ಅರ್ಹತೆ : ಎಂಬಿಬಿಎಸ್, ಬಿಎಎಂಎಸ್, ಬಿಎಚ್ ಎಂಎಸ್ ಪದವಿ ಹೊಂದಿರದ ಹಾಗೂ ರಾಜ್ಯ ಮಾನ್ಯತೆ ಪಡೆದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಕರ್ನಾಟಕ ಪ್ರಾಯವೇಟ್ ಮೆಡಿಕಲ್ ಎಸ್ಟಿಮೈ (ಕೆಪಿಎಂಇ)ನಿಂದ ಲೈಸೆನ್ಸ್ ಹೊಂದಿರಬೇಕು. ಇದರ ಹೊರತಾಗಿ ಮಾಡುವ ಎಲ್ಲಾ ಆರೋಗ್ಯ ಚಿಕಿತ್ಸೆ ಕಾನೂನು ಬಾಹಿರವಾಗುತ್ತದೆ ಎಂದು ಮುಧೋಳ ಟಿಎಚ್ಓ ವೆಂಕಟೇಶ ಮಲಘಾಣ ತಿಳಿಸಿದ್ದಾರೆ.