ಬೆಂಗಳೂರು: ಕೆಲ ವರ್ಷಗಳ ಹಿಂದೆ ಭಾರೀ ಸುದ್ದಿಯಾಗಿದ್ದ ಬಿಎಂಟಿಸಿ ನಕಲಿ ವಿದ್ಯಾರ್ಥಿ ಪಾಸ್ ಹಾವಳಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, “ಬಿಎಂಟಿಸಿ ಬಸ್ ಪಾಸ್’ ನಕಲಿ ಮಾಡಿ ವಂಚಿಸಿದ್ದಾನೆ ಎಂದು ಆರೋಪಿಸಿ ತನ್ನ ಪತ್ನಿಯ ಸಹೋದರನ ವಿರುದ್ಧ, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರು ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟೀಚರ್ಸ್ ಕಾಲೋನಿ ನಿವಾಸಿ ಕೆ.ಪ್ರಶಾಂತ್ ಎಂಬುವರು ದೂರು ನೀಡಿದ್ದು, 2011ರಲ್ಲಿ ಪಿಇಎಸ್ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಾಂಗ ಮಾಡುತ್ತಿದ್ದ ತನ್ನ ಭಾವಮೈದುನ ಶ್ರೀಕಾಂತ್ ಎಂಬಾತ ನಕಲಿ ದಾಖಲೆಗಳನ್ನು ನೀಡಿ ಶುಭಾ ಎಂಬುವವರಿಗೆ ವಿದ್ಯಾರ್ಥಿ ಬಸ್ ಮಾಡಿಸಿಕೊಟ್ಟಿದ್ದ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಜಯನಗರದ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸಮಾಡುತ್ತಿದ್ದಾಗ ನಮ್ಮ ಮನೆ ಕೆಲಸಕ್ಕೆ ಹೊಸಕೋಟೆಯಿಂದ ಬರುತ್ತಿದ್ದ ಶುಭಾ ಎಂಬಾಕೆಗೆ ಸಹಾಯ ಮಾಡುವ ಸಲುವಾಗಿ ಶ್ರೀಕಾಂತ್ ಈ ವಂಚನೆ ಮಾಡಿದ್ದಾನೆ. ಆತನ, ಸ್ನೇಹಿತ ಕೆ.ಅರುಣ ಎಂಬಾತನ ಹೆಸರಿನಲ್ಲಿ ದಾಖಲೆ ನೀಡಿ ಬಳಿಕ ವಿದ್ಯಾರ್ಥಿ ಪಾಸ್‌ಗೆ ಶುಭಾಳ ಫೋಟೋ ಅಂಟಿಸಿ ಕಾನೂನು ಬಾಹಿರವಾಗಿ ವಿದ್ಯಾರ್ಥಿ ಪಾಸ್ ಪಡೆದುಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಇದೇ ರೀತಿಯ ಪಾಸ್‌ನ್ನು ಶುಭಾ ಬಳಸಿದ್ದಾರೆ. ಹೀಗಾಗಿ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಿದ್ದಾರೆ.
ಬಿಎಂಟಿಸಿ ನಕಲಿ ವಿದ್ಯಾರ್ಥಿ ಪಾಸ್ ಪಡೆದು ವಂಚಿಸಿದ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ. ಎಷ್ಟು ವರ್ಷಗಳ ಕಾಲ ಈ ರೀತಿ ವಂಚನೆ ಎಸಗಿದ್ದಾರೆ? ಇದರ ಹಿಂದೆ ಬೇರೆ ಯಾರಾರ ಕೈವಾಡವಾದರೂ ಇದೆಯೇ ಎಂಬ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕ ಗೊತ್ತಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.