ಸಾಗರ: ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯ್ತಿ ಸದಸ್ಯನೋರ್ವ ನಕಲಿ ದಾಖಲೆಗಳ ಮೂಲಕ ಸರ್ಕಾರದ ಹಲವಾರು ಯೋಜನೆಗಳ ಫಲಾನುಭವಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ರಾಪಂ ಸದಸ್ಯ ಎಚ್.ಶಿವಪ್ಪ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ನಕಲು ಮಾಡಿ ಸ್ವಯಂ ಉದ್ಯೋಗ ಯೋಜನೆಯ ಫಲಾನುಭವಿಯಾಗಿದ್ದಾನೆ. ಅಂಗವಿಕಲ ದೃಢೀಕರಣ ಪತ್ರದ ಮೂಲಕ ವಾಹನ ಚಾಲನಾ ಪರವಾನಗಿ ಪತ್ರ ಪಡೆದು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 4.34 ಲಕ್ಷ ರೂ. ವಾಹನ ಸಹಾಯಧನ ಪಡೆದಿದ್ದಾನೆ. ಅಂಗವಿಕಲ ಮಾಸಿಕ ವೇತನವನ್ನೂ ಪಡೆಯುತ್ತಿದ್ದಾನೆ.
ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿಯನ್ನು ನಕಲು ಮಾಡಿ ಸಾಗರ ನಗರಸಭೆಯಲ್ಲಿ ಅಂಬೇಡ್ಕರ್ ವಸತಿ ಯೋಜನೆಯಡಿ ಸೌಲಭ್ಯ ಪಡೆದಿದ್ದಾನೆ. ಅಲ್ಲದೆ ಪತ್ನಿ ಸುನಿತಾ ಕೂಡ ವಂಚನೆಯಲ್ಲಿ ಭಾಗವಾಗಿದ್ದು, ಹೊಸಂತೆಯಲ್ಲಿ ಆಕೆಯ ಹೆಸರಿನಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಮನೆ ಪಡೆದುಕೊಂಡಿದ್ದಾನೆ.
ಆದರೆ ಪಂಚಾಯ್ತಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ತಾನು ಐದನೇ ತರಗತಿವರೆಗೆ ಓದಿರುವುದಾಗಿ ಘೋಷಿಸಿಕೊಂಡಿದ್ದಾನೆ ಎಂದು ಆರೋಪಿಸಿ ಹಿರೇಬಿಲಗುಂಜಿಯ ಮಾಜಿ ಅಧ್ಯಕ್ಷರೂ ಆದ ಕೃಷ್ಣಮೂರ್ತಿ ದೂರು ಸಲ್ಲಿಸಿದ್ದಾರೆ. ಐಪಿಸಿ 465, 468, 471, 420, 34ರಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗೆ ಬಂಧನ ಭೀತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಗಡ್ಚಿರೋಲಿಯಲ್ಲಿ ಭಾರೀ ಕಾಳಗ : ಒಂದೇ ದಿನ 26 ನಕ್ಸಲರ ಹತ್ಯೆ!