Advertisement

ಪೊಲೀಸ್‌ ಯುನಿಫಾರ್ಮ್ ಹಾಕಿ ಜನರಿಗೆ ಟೋಪಿ: ಸಿನಿಮಾ ಪ್ರೇರಣೆ, ಪ್ರೇಯಸಿಗಾಗಿ ಕೃತ್ಯ

03:14 PM Mar 15, 2023 | Team Udayavani |

ಬೆಂಗಳೂರು: ಸಿನಿಮಾಗಳ ಪ್ರೇರಣೆ ಹಾಗೂ ಐಷಾರಾಮಿ ಜೀವನಕ್ಕಾಗಿ ಐಪಿಎಸ್‌ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂ. ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್‌ ಅಧಿಕಾರಿಯೊಬ್ಬ ತಲಘಟ್ಟಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಚಂದ್ರಾಲೇಔಟ್‌ನ ಮಾರುತಿನಗರ ನಿವಾಸಿ ಆರ್‌.ಶ್ರೀನಿವಾಸ್‌ (34) ಎಂಬಾತನನ್ನು ಬಂಧಿ ಸಲಾಗಿದೆ.

ವೆಂಕಟನಾರಾ ಯಣ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವೆಂಕಟನಾರಾಯಣ್‌ಗೆ 1.75 ಕೋಟಿ ರೂ. ಪಡೆದು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು. ಬಿಎಸ್ಸಿ ಓದಿರುವ ಶ್ರೀನಿವಾಸ್‌ಗೆ ಕೆಂಪೇಗೌಡ, ಸಿಂಗಂ ಸೇರಿ ಪೊಲೀಸ್‌ ಅಧಿಕಾರಿ ಪ್ರಧಾನ ಸಿನಿಮಾಗಳ ನೋಡುತ್ತಿದ್ದ. ಅವುಗಳಿಂದ ಪ್ರೇರಣೆಗೊಂಡು ತಾನೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಐಪಿಎಸ್‌ ಅಧಿಕಾರಿಯಾಗಿದ್ದೇನೆ ಎಂದು ಸಾರ್ವಜನಿಕರಲ್ಲಿ ಹೇಳಿಕೊಳ್ಳುತ್ತಿದ್ದ. ಆತನನ್ನು ನಂಬಿದ ಹತ್ತಾರು ಮಂದಿ ಆರೋಪಿ ಜತೆ ಪೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೆ, ಕೆಲ ವಿಚಾರಗಳ ಕುರಿತು ಕುಂದು-ಕೊರತೆ ಸಭೆ ಕೂಡ ನಡೆಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮ ಹಾಗೂ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಮ ಗಳಿಗೆ ಅತಿಥಿಯಾಗಿ ಹೋಗುತ್ತಿದ್ದ ಎಂದು ಪೊಲೀಸರು ಹೇಳಿದರು.

1.75 ಕೋಟಿ ರೂ. ವಂಚನೆ: ತಲಘಟ್ಟಪುರ ನಿವಾಸಿ ಹಾಗೂ ದೂರುದಾರ ವೆಂಕಟನಾರಾ ಯಣ್‌ಗೆ ಸ್ನೇಹಿತ ವೆಂಕಟರಮಣ್ಣಪ್ಪ ಎಂಬುವರ ಮೂಲಕ ಶ್ರೀನಿವಾಸ್‌ ಪರಿಚಯವಾಗಿದ್ದಾನೆ. ಈ ವೇಳೆ ತಾನೊಬ್ಬ ಐಪಿಎಸ್‌ ಪೊಲೀಸ್‌ ಅಧಿಕಾರಿಯಾಗಿದ್ದು, ಮೈಸೂರಿನಲ್ಲಿ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸದ್ಯದಲ್ಲಿ ಬೆಂಗಳೂರಿಗೆ ಡಿಸಿಪಿಯಾಗಿ ಬಡ್ತಿ ಪಡೆದು ಬರುತ್ತೇನೆ ಎಂದು ನಂಬಿಸಿದ್ದಾನೆ. ಅಲ್ಲದೆ, ಮೈಸೂರಿನಲ್ಲಿ ಒಂದು ಪ್ರಾಪರ್ಟಿಯ ಕೇಸ್‌ ಡೀಲ್‌ ಮಾಡು ತ್ತಿದ್ದು, ಈ ಕೇಸ್‌ನಲ್ಲಿ 450 ಕೋಟಿ ರೂ. ಡೀಲ್‌ ಇದ್ದು, ಅದರಲ್ಲಿ 250 ಕೋಟಿ ರೂ. ಬರುತ್ತದೆ. ಹೀಗಾಗಿ ತನಗೆ 2.5 ಕೋಟಿ ರೂ. ಅಗತ್ಯವಿದೆ ಎಂದು, ಮುಂಗಡ 49 ಲಕ್ಷ ರೂ. ಪಡೆದು, ಡಿಸೆಂಬರ್‌ನಲ್ಲಿ ವಾಪಸ್‌ ನೀಡಿದ್ದಾನೆ.

ಅನಂತರ ಹೆಚ್ಚುವರಿ ಹಣ ಕೇಳಿದಾಗ, ಜಯನಗರದ ಸುಖ್‌ಸಾಗರ್‌ ಹೋಟೆಲ್‌ ಮಾಲೀಕ ಅಭಿಷೇಕ್‌ ಪೂಜಾರಿ ಅವರಿಂದ 1.20 ಕೋಟಿ ರೂ. ಹಾಗೂ ಸ್ನೇಹಿತರೊಬ್ಬರಿಂದ 56 ಲಕ್ಷ ರೂ. ಕೊಡಿಸಿದ್ದಾರೆ. ಆದರೆ, ಆರೋಪಿ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದೇ ವೇಳೆ ಆತನ ಬಗ್ಗೆ ವಿಚಾರಿಸಿದಾಗ ಶ್ರೀನಿವಾಸ್‌ ನಕಲಿ ಪೊಲೀಸ್‌ ಅಧಿಕಾರಿ ಎಂಬುದು ಗೊತ್ತಾ ಗಿದೆ. ಹೀಗಾಗಿ ವೆಂಕಟನಾರಾಯಣ್‌ ತಲಘಟ್ಟ ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ‌

Advertisement

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈತನ ವಿರುದ್ಧ 2010ರಲ್ಲಿ ವಿಜಯನರ ಠಾಣೆಯಲ್ಲಿ ಕಾರುಗಳ ಕಳವು ಪ್ರಕರಣ ದಾಖಲಾಗಿದ್ದು, ಜೈಲಿಗೂ ಹೋಗಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಗನ್‌ ಯಾಕಿಲ್ಲ?: ಈತನ ವರ್ತನೆ ಕಂಡ ಕೆಲ ಸಾರ್ವಜನಿಕರು “ನಿಮ್ಮ ಬಳಿ ಗನ್‌ ಯಾಕಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಆಗ ತಾನೂ ಪ್ರೊಬೇಷನರಿಯಲ್ಲಿದ್ದು, ಗನ್‌ ಕೊಟ್ಟಿಲ್ಲ. ತರಬೇತಿ ಮುಗಿದ ಬಳಿಕ ಗನ್‌ ಹಾಗೂ ಇತರೆ ಸೌಲಭ್ಯಗಳು ದೊರೆಯಲಿದೆ ಎಂದು ಹೇಳಿ ನಂಬಿಸಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಿನಿಮಾ ಪ್ರೇರಣೆ, ಪ್ರೇಯಸಿಗಾಗಿ ಕೃತ್ಯ : ಆರೋಪಿಯ ವಿಚಾರಣೆಯಲ್ಲಿ ಸಿನಿಮಾಗಳಲ್ಲಿ ಬರುವ ಪೊಲೀಸ್‌ ಅಧಿಕಾರಿಗಳ ಪಾತ್ರವನ್ನು ನೋಡಿ, ಅದರಿಂದ ಪ್ರೇರಣೆಗೊಂಡಿದ್ದಾನೆ. ಅದನ್ನೇ ಅನುಸರಿಸಿ ಸುಲಭವಾಗಿ ಹಣ ಸಂಪಾದಿಸಲು ಸಂಚು ರೂಪಿಸಿದ್ದಾನೆ. ಹೀಗಾಗಿ ಐಪಿಎಸ್‌ ಅಧಿಕಾರಿಯ ಸಮವಸ್ತ್ರ ಹೊಲಿಸಿ, ಸಾರ್ವಜನಿಕರಲ್ಲಿ ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ನಕಲಿ ಗುರುತಿನ ಚೀಟಿಗಳನ್ನು ತೋರಿಸಿ ನಂಬಿಸಿದ್ದಾನೆ. ಹೀಗಾಗಿ ಕೆಲವರಿಂದ ಕೇಸ್‌ಗಳ ಡೀಲ್‌ ಮಾಡುತ್ತೇನೆ ಎಂದು ಕೋಟ್ಯಂತರ ರೂ. ಪಡೆದು ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ಇನ್ನು ಆರೋಪಿ ರಮ್ಯಾ ಎಂಬಾಕೆಯನ್ನು ಪ್ರೀತಿಸುತ್ತಿದ್ದು, ಆಕೆಗೂ ತಾನೂ ಐಪಿಎಸ್‌ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಆಕೆ ಬಳಿಯೂ ಹಣ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಜತೆಗೆ ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ಹಣದಲ್ಲಿ ಪ್ರೇಯಸಿ ಜತೆ ಮೋಜು-ಮಸ್ತಿ ವ್ಯಯಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ಮಹಿಳಾ ಇನ್‌ಸ್ಪೆಕ್ಟರ್‌ ಜತೆ ಫೋಟೋ : ಇನ್ನು ಸಾರ್ವಜನಿಕರ ಕಾರ್ಯಕ್ರಮದಲ್ಲಿ ಮಹಿಳಾ ಇನ್‌ಸ್ಪೆಕ್ಟರ್‌ ಜತೆಯೂ ಆರೋಪಿ ಫೋಟೋ ತೆಗೆಸಿಕೊಂಡಿದ್ದಾನೆ. ಆದರೆ, ಆ ಮಹಿಳಾ ಪಿಐಗೆ ಈತನ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈತನ ಬಂಧನ ಬಳಿಕ ಅವರೇ ಅಚ್ಚರಿಗೊಳಗಾಗಿದ್ದಾರೆ. ಮತ್ತೂಂದೆಡೆ ಈ ಪ್ರಕರಣದಲ್ಲಿ ಯಾವುದೇ ಪೊಲೀಸ್‌ ಅಧಿಕಾರಿ-ಸಿಬ್ಬಂದಿ ಕೈವಾಡ ಇಲ್ಲ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next