ಬಳ್ಳಾರಿ: ರಾಷ್ಟ್ರೀಯ ತನಿಖಾದಳ(NIA) ಖೋಟಾ ನೋಟು ಮುದ್ರಿಸುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೇಶದ ವಿವಿಧೆಡೆ ನಡೆಸಿರುವ ದಾಳಿಯಲ್ಲಿ ಬಳ್ಳಾರಿ ನಗರದ ರಾಮಾಂಜನೇಯ ನಗರದ ನಿವಾಸಿಯೊಬ್ಬನನ್ನು ಸಹ ಬಂಧಿಸಲಾಗಿದ್ದು, ಈ ಕುರಿತು ಜಿಲ್ಲಾ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಖಚಿತ ಪಡಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳವು ದೇಶದ ನಾಲ್ಕು ಕಡೆ ಖೋಟಾ ನೋಟು ಮುದ್ರಣಕ್ಕೆ ಸಂಬಂಧ ಪಟ್ಟಂತೆ ಶನಿವಾರ ದಾಳಿ ನಡೆಸಿದೆ. ಪ್ರಕರಣದಲ್ಲಿ ಆರೋಪಿ ಮಹೇಂದ್ರ ಎಂಬಾತ ಬಳ್ಳಾರಿಯ ರಾಮಾಂಜಿನೇಯ ನಗರ ನಿವಾಸಿ, ಆಗಿದ್ದು ಆತನಿಂದ ಮುದ್ರಣ ಯಂತ್ರ ಮತ್ತು 500 ನೋಟಿನ ಮಾದರಿಗಳನ್ನು ವಶಪಡಿಸಿಕೊಂಡಿದ್ದಾಗಿ ಎಸ್‌ಪಿ ರಂಜಿತ್ ಕುಮಾರ್ ಅವರು ತಮ್ಮ ಚಿಕ್ಕ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಹೊರಡಿಸಿರುವ ಪ್ರಕಟಣೆಯಂತೆ ದೇಶದ ನಾಲ್ಕು ಕಡೆ ಖೋಟಾ ನೋಟು ಮುದ್ರಣ ಸಂಬಂಧ ನಾಲ್ವರನ್ನು ಬಂಧಿಸಿದೆ. ಈ ಪೈಕಿ ಮಹೇಂದ್ರ ಎಂಬ ಆರೋಪಿಯು ಬಳ್ಳಾರಿ ಜಿಲ್ಲೆಗೆ ಸೇರಿದವನು ಎಂಬ ಒಂದು ಸಾಲಿನ ಮಾಹಿತಿಯನ್ನು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿತ್ತು. ಈ ಕುರಿತು ಮಾಹಿತಿ ಪಡೆಯಲು ಪದೇ ಪದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸಲಾಯಿತಾದರೂ, ಯಾವುದೇ ಪ್ರಯೋಜನವಾಗಿಲ್ಲ. ಸಂಜೆ 7.30ರ ಸುಮಾರಿಗೆ ಈ ಒಂದು ಸಾಲಿನ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಬೈಲ್ ಸಂದೇಶದಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಇಂದು ಪೊಲೀಸ್ ಕ್ರೀಡಾಕೂಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಬ್ಯುಸಿ ಆಗಿದ್ದಾರೆ ಎಂಬ ಒಂದು ಸಾಲಿನ ಮಾಹಿತಿಯನ್ನು ದೂರವಾಣಿಗೆ ಸಿಕ್ಕ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಇನ್ನೂ ಖುದ್ದು ಭೇಟಿ ಮಾಡಿದವರಿಗೆ ಈ ಕುರಿತು ನನಗೆ ಮಾಹಿತಿ ಇಲ್ಲ ಎಂದಷ್ಟೇ ಹೇಳುತ್ತಿದ್ದರು. ಕೊನೆಗೆ ಪತ್ರಕರ್ತರು ನಿರಂತರ ಬೆನ್ನು ಬಿದ್ದ ಪರಿಣಾಮ ಈ ಕುರಿತು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೂಲಗಳ ಪ್ರಕಾರ ಕಳೆದ ನವೆಂಬರ್‌ನಲ್ಲಿ ಬಳ್ಳಾರಿಯಲ್ಲಿಯೇ ದಾಖಲಾದ ದೂರಿನ ಸಂಖ್ಯೆ ಆರ್‌ಸಿ-02/2023/ಎನ್‌ಐಎ/ಬಿಎಲ್‌ಆರ್ ಪ್ರಕಾರವೇ ಎನ್‌ಐಇ ಅಧಿಕಾರಿಗಳ ತಂಡ ದಾಳಿ ನಡೆಸಿದೆ.