ಬೆಂಗಳೂರು: ಮಾಸ್ಕ್ ಹಾಕದೇ ಓಡಾಡುವವರನ್ನು ತಡೆದು ಮಾರ್ಷಲ್ ಗಳು ದಂಡ ವಿಧಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೆ ಜಯನಗರ ಒಂದನೇ ಬ್ಲಾಕ್‌ನಲ್ಲಿ ಯುವಕನೋರ್ವ ತಾನೇ ಮಾರ್ಷಲ್ ಎಂದು ಹೇಳಿಕೊಂಡು ಸಾರ್ವಜನಿಕರಿಂದ ದಂಡ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಿರಣ್ (19) ಎಂಬಾತನೇ ಈ ನಕಲಿ ವ್ಯಕ್ತ ಮಾರ್ಷಲ್. ಈತ ಜಯನಗರ ಒಂದನೇ ಬ್ಲಾಕ್‌ನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ.
ಸರಿಯಾಗಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಓಡಾಡುತ್ತಿದ್ದವರಿಂದ ಹಣ ಸಂಗ್ರಹ ಮಾಡುತ್ತಿದ್ದ ಆರೋಪದ ಮೇಲೆ ಮಾರ್ಷಲ್‌ಗಳು ಕಿರಣ್ ನನ್ನು ತಿಲಕ್ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಪಿಎಫ್ಐ ಬಾಲ ಬಿಚ್ಚಿದರೆ ಬಾಲನೂ ಕಟ್, ತಲೆನೂ ಕಟ್: ಸಿ.ಟಿ.ರವಿ
ಈ ಸಂಬಂಧ ಪ್ರತಿಕ್ರಿಯಿಸಿದ ಚೀಫ್ ಮಾರ್ಷಲ್ ರಾಜ್ಬೀರ್ ಸಿಂಗ್ ಅವರು, ಕಿರಣ್ ಎಂಬ ವ್ಯಕ್ತಿ ತಾನು ಬಿಬಿಎಂಪಿ ಮಾರ್ಷಲ್ ಎಂದು ಹೇಳಿಕೊಂಡು ಹಣ ವಸೂಲಿ ಮಾಡಲು ಮುಂದಾಗಿದ್ದ, ಇತನ ಬಳಿ ವೈರಲ್‌ಲೆಸ್ ವಾಕಿಟಾಕಿ ಹಾಗೂ ಬಿಬಿಎಂಪಿ ಎಂದು ಹೆಸರಿರುವ ಫೈಲ್ ಇತ್ತು. ಈ ವ್ಯಕ್ತಿಯನ್ನು ತಿಲಕ್ ನಗರ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದರು.
ಮಾರ್ಷಲ್ ಸಮವಸ್ತ್ರ ಧರಿಸದೆ ಹಾಗೂ ಐಡಿ ಕಾರ್ಡ್ ಇಲ್ಲದೆ ಇರುವ ಯಾವುದೇ ವ್ಯಕ್ತಿ ದಂಡ ಸಂಗ್ರಹ ಮಾಡುತ್ತಿರುವುದು ಬೆಳಕಿಗೆ ಬಂದರೆ, ಹಣ ನೀಡದೆ ನೇರವಾಗಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಬೇಕು ಎಂದು ಮನವಿ ಮಾಡಿದರು.