Advertisement
ಫೇಸ್‌ಬುಕ್ ಗೆಳತಿ ಸ್ವಾತಿಗೌಡ ಹೆಸರಿನಲ್ಲಿ ಹಣ ಪಡೆದು ವಂಚಿಸಿದ ಬಗ್ಗೆ ಜೆಡಿಎಸ್ ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಲ್.ಶ್ರೀನಿವಾಸ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಹರಿಣಿ ಎಂಬ ಯುವತಿ ಸೇರಿ ಮೂವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Related Articles
Advertisement
ಜಾಗ ಖರೀದಿ ಬಗ್ಗೆ ಆಕೆಯ ತಂದೆ ಎಂದು ಹೇಳಿಕೊಂಡು ದೂರವಾಣಿಯಲ್ಲಿ ವ್ಯಕ್ತಿಯೊಬ್ಬರ ಜತೆ ಮಾತನಾಡಿಸಿದಾಗ ಶ್ರೀನಿವಾಸ್ ಕೂಡ ನಂಬಿದ್ದಾರೆ. ಇದಾದ ಬಳಿಕ ಇಬ್ಬರೂ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಮಾತನಾಡಿದ್ದು, ಸ್ನೇಹ ಬೆಳೆದಿದೆ. ಶ್ರೀನಿವಾಸ್ ಕೂಡ ಕೆಲವು ಕಡೆ ಜಾಗ ಖರೀದಿಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಣ ಪಡೆದು ವಂಚಿಸಿದ್ದು ಹೇಗೆ?: ಆ.28ರಂದು ಶ್ರೀನಿವಾಸ್‌ಗೆ ಕರೆ ಮಾಡಿದ ಹರಿಣಿ, ತನಗೆ ಅರ್ಜೆಂಟಾಗಿ 3 ಲಕ್ಷ ರೂ. ಹಣ ಬೇಕಿದೆ. ಜಾಗ ಖರೀದಿ ವೇಳೆ ವಾಪಾಸ್ ನೀಡುತ್ತೇನೆ ಎಂದ ನಂಬಿಸಿದ್ದಾಳೆ. ಇದಕ್ಕೊಪ್ಪಿದ ಶ್ರೀನಿವಾಸ್, ಸ್ನೇಹಿತನ ಅಣ್ಣ ಎಂದು ಹೇಳಿ ಕಳುಹಿಸಿದ್ದ ವ್ಯಕ್ತಿ ಕೈಗೆ 2.70 ಲಕ್ಷ ರೂ. ಕೊಟ್ಟು ಕಳುಹಿಸಿದ್ದಾರೆ.
ಇದಾದ ಬಳಿಕವೂ ಇಬ್ಬರ ನಡುವೆ ಸ್ನೇಹ ಮುಂದುವರಿದಿದ್ದು ಸೆ.8ರಂದು ಕರೆ ಮಾಡಿ ಆಂದ್ರಳ್ಳಿಯ ಬಳಿ 4 ಎಕರೆ ಜಮೀನು ಖರೀದಿಗೆ ಬಂದಿದ್ದು, ಮಾಲೀಕರಿಗೆ ಅಡ್ವಾನ್ಸ್ ನೀಡಲು 25 ಲಕ್ಷ ಬೇಕಿದೆ. 10 ಲಕ್ಷ ರೂ. ಬೇಕಾಗಿದೆ ಎಂದು ಹೇಳಿದ್ದಾಳೆ. ಮೈಸೂರಿನಿಂದ ನನ್ನ ತಂದೆ 2 ಕೋಟಿ ರೂ. ತರುತ್ತಿದ್ದಾರೆ. ಅವರು ಬಂದ ಬಳಿಕ ವಾಪಾಸ್ ನಾನೇ ತಂದು ಕೊಡುತ್ತೇನೆ ಎಂದು ನಂಬಿಸಿದ್ದಾಳೆ. ಇದನ್ನೂ ನಂಬಿದ್ದ ಶ್ರೀನಿವಾಸ್ ಆಕೆಯ ಮ್ಯಾನೇಜರ್ ಎಂದು ಹೇಳಿ ಕಳಿಸಿದ ವ್ಯಕ್ತಿಗೆ 7 ಲಕ್ಷ ರೂ. ನೀಡಿ ಕಳುಹಿಸಿದ್ದಾರೆ.
ಹರಿಣಿ ಸಿಕ್ಕಿಬಿದ್ದಿದ್ದು ಹೇಗೆ?: ಹಣ ಬೇಕೆಂದು ಕೇಳುತ್ತಿದ್ದ ಆರೋಪಿ ಹರಿಣಿ ನೀವೆ ಬಂದು ಹಣ ತೆಗೆದುಕೊಂಡು ಹೋಗಿ ಎಂದರೆ ಕೇಳುತ್ತಿರಲಿಲ್ಲ. ಮತ್ತೂಮ್ಮೆ ಬೆಂಗಳೂರಿಗೆ ಬಂದಾಗ ಭೇಟಿಯಾಗುತ್ತೇನೆ ಎಂದು ಸಬೂಬು ಹೇಳುತ್ತಿದ್ದಳು. ಹೀಗಾಗಿಯೇ 2 ಬಾರಿ ಹಣ ಪಡೆದಾಗಲೂ ಬೇರೊಬ್ಬರನ್ನು ಕಳಿಸಿದ್ದಳು. ಎರಡನೇ ಬಾರಿ ಹಣ ಪಡೆದ ನಂತರ ಕೆಲವು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಹರಿಣಿ, ಸೆ.24ರಂದು ಪುನಃ ಹಣ ಕೇಳಿದ್ದಳು.
ಆಗ ವಂಚನೆ ಬಗ್ಗೆ ಎಚ್ಚೆತ್ತುಕೊಂಡ ಶ್ರೀನಿವಾಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿ ಆಕೆಯನ್ನು ಹಣ ತೆಗೆದುಕೊಂಡು ಹೋಗುವಂತೆ ಬರಲು ತಿಳಿಸಿದಾಗ ಕೆಂಗುಂಟೆ ಸರ್ಕಲ್ ಬಳಿ ಬಂದಿದ್ದಳು. ಈ ವೇಳೆ ಪೊಲೀಸ್ ಸಿಬ್ಬಂದಿ ಆಕೆಯನ್ನು ಬಂಧಿಸಿದ್ದಾರೆ. ಬಳಿಕ ಆಕೆ ನೀಡಿದ ಮಾಹಿತಿ ನೀಡಿದ ಮೇರೆಗೆ ವಂಚನೆಗೆ ಸಹಕರಿಸುತ್ತಿದ್ದ ರವಿ, (40) ಪ್ರಕಾಶ್ ಎಂಬುವವರನ್ನೂ ಬಂಧಿಸಿ, 4.50 ಲಕ್ಷ ರೂ. ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪೊಲೀಸರಿಗೆ ಮಾಹಿತಿ ನೀಡಬಹುದು!: ಆರೋಪಿ ಹರಿಣಿ ಕೃತ್ಯಕ್ಕೆ ಸಂಬಂಧಿಕರಾದ ರವಿ ಹಾಗೂ ಪ್ರಕಾಶ್ ನೆರವಾಗಿದ್ದಾರೆ. ಈ ತಂಡ ಹಲವರಿಗೆ ವಂಚಿಸಿರುವ ಸಾಧ್ಯತೆಯಿದ್ದು, ಇವರ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ಇದೇ ರೀತಿ ಬೇರೆ ಯಾರಾದರೂ ಈ ಆರೋಪಿಗಳಿಂದ ವಂಚನೆಗೆ ಒಳಗಾಗಿದ್ದರೆ ದೂರು ನೀಡಬಹುದು ಎಂದು ಜ್ಞಾನಭಾರತಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.