Advertisement

ನಕಲಿ ರಸಗೊಬ್ಬರ ಮಾರಾಟ: ಐವರ ವಿಚಾರಣೆ

02:45 PM Jul 19, 2022 | Team Udayavani |

ಗಂಗಾವತಿ: ನೆರೆಯ ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ನಡೆದ ನಕಲಿ ರಸಗೊಬ್ಬರ ಮಾರಾಟ ಪ್ರಕರಣಕ್ಕೆ ಸಂಬಂ ಧಿಸಿದಂತೆ ತಾಲೂಕಿನ ಬಸಾಪಟ್ಟಣ ಗ್ರಾಮದ ಚನ್ನಮಲ್ಲಿಕಾರ್ಜುನ ಅಗ್ರೋ ಏಜೆನ್ಸಿ ಮಾಲೀಕ ಪೀರಸಾಬ್‌ ಸೇರಿ ಐವರನ್ನು ಗೋಗಿ ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Advertisement

ಶಹಪುರ ತಾಲೂಕಿನ ಗೋಗಿ ಹೋಬಳಿಯ ಹೊಸ್ಕೇರಾ ಗ್ರಾಮದಲ್ಲಿ ಡಿಎಪಿ ಜೈ ಕಿಸಾನ್‌ ಹೆಸರಿನ ಬ್ಯಾಗ್‌ಗಳಲ್ಲಿ ಮರಳು (ಉಸುಗು) ಮಿಶ್ರಿತ ರಸಗೊಬ್ಬರ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಗೋಗಿ ಪೊಲೀಸ್‌ ಠಾಣೆಯಲ್ಲಿ ರೈತರು ಪ್ರಕರಣ ದಾಖಲಿಸಿದ್ದು, ಪೊಲೀಸ್‌ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ್ದು ಗೋಗಿ ಗ್ರಾಮದಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡಿದ ಕುರಿತು ಅಲ್ಲಿಯ ಡೀಲರ್‌ ಯಡ್ರಾಮಿಯ ವ್ಯಾಪಾರಿ ಹೆಸರು ಹೇಳಿದ್ದಾರೆ. ಯಡ್ರಾಮಿಯ ಡೀಲರ್‌ ಸಿಂದಗಿ ವ್ಯಾಪಾರಿಯ ಹೆಸರು ಹೇಳಿದ್ದು ಸಿಂದಗಿ ಡೀಲರ್‌ನ್ನು ವಿಚಾರಿಸಿದಾಗ ಗಂಗಾವತಿಯ ಬಸಾಪಟ್ಟಣದ ಪೀರಸಾಬ್‌ ಎಂಬುವವರಿಂದ ರಸಗೊಬ್ಬರ ಖರೀದಿಸಿ ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ತನಿಖೆ ಕೈಗೊಂಡಿರುವ ಗೋಗಿ ಠಾಣೆಯ ಪೋಲಿಸರು ರವಿವಾರ ಸಂಜೆ ಗಂಗಾವತಿಯ ಬಸಾಪಟ್ಟಣಕ್ಕೆ ಆಗಮಿಸಿ ಚನ್ನಮಲ್ಲಿಕಾರ್ಜುನ ಆಗ್ರೋ ಏಜೇನ್ಸಿ ಮಾಲೀಕ ಪೀರಸಾಬ್‌, ಗೋಗಿ ಹೊಸ್ಕೇರಾ ಗ್ರಾಮದ ಬೀರಲಿಂಗಪ್ಪ, ಮಲ್ಲಪ್ಪ ನಾಗನಟಗಿ, ಪರಮಾನಂದ ಸಿಂದಗಿ, ಭೀಮಸಿಂಗ್‌ ರಾಠೊಡ್‌ ಎಂಬುವರನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ.

ಪ್ರಕರಣ ಕುರಿತು “ಉದಯವಾಣಿ’ ಜತೆ ಗೋಗಿ ಪೊಲೀಸ್‌ ಠಾಣೆಯ ಪಿಎಸ್‌ಐ ಅಯ್ಯಪ್ಪ ಮಾತನಾಡಿ, ನಕಲಿ ರಸಗೊಬ್ಬರ ಖರೀದಿಸಿದ ರೈತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಜತೆಗೂಡಿ ವ್ಯಾಪಕ ತನಿಖೆ ನಡೆಸಲಾಗುತ್ತಿದೆ. ಗೋಗಿ, ಯಡ್ರಾಮಿ, ಸಿಂದಗಿ ಹಾಗೂ ಗಂಗಾವತಿಯ ಬಸಾಪಟ್ಟಣದಲ್ಲಿ ತನಿಖೆ ನಡೆಯುತ್ತಿದೆ. ರೈತರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗೋಗಿ ಹೋಬಳಿಯ ಹೊಸ್ಕೇರಾ ಗ್ರಾಮದಲ್ಲಿ ನಕಲಿ ರಸಗೊಬ್ಬರ ಮಾರಾಟದ ಕುರಿತು ರೈತರ ದೂರಿನ ಹಿನ್ನೆಲೆಯಲ್ಲಿ ಗೋಗಿ ಠಾಣೆಯ ಪೊಲೀಸರಿಗೆ ಕೃಷಿ ಇಲಾಖೆಯಿಂದ ಕೇಸ್‌ ದಾಖಲು ಮಾಡಲಾಗಿದೆ. ವಿವಿಧ ಸ್ಥಳಗಳಲ್ಲಿ 130 ಬ್ಯಾಗ್‌ ನಕಲಿ ರಸಗೊಬ್ಬರ ಸೀಜ್‌ ಮಾಡಲಾಗಿದೆ. ನಕಲಿ ಗೊಬ್ಬರ ಮಾರಾಟ ದಂಧೆ ಯಾದಗಿರಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಗಂಗಾವತಿ ಪ್ರದೇಶದಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುವವರು ಅಧಿ ಕ ಸಂಖ್ಯೆಯಲ್ಲಿರುವ ಕುರಿತು ಸಂಶಯವಿದ್ದು, ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ. ಕಳೆದ ವರ್ಷವೂ ಗಂಗಾವತಿ ಮುಂತಾದ ಕಡೆಯಿಂದ ಡೀಲರ್‌ಗಳು ರಸಗೊಬ್ಬರ ತಂದು ಯಾದಗಿರಿ ಜಿಲ್ಲೆಯಲ್ಲಿ ಮಾರಾಟ ಮಾಡಿರುವ ಕುರಿತು ರೈತರು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. –ಸುನೀಲಕುಮಾರ, ಸಹಾಯಕ ಕೃಷಿ ಅಧಿಕಾರಿ ಶಹಪುರ

Advertisement

Udayavani is now on Telegram. Click here to join our channel and stay updated with the latest news.

Next