Advertisement

ಮಂಗಳೂರು: ಜಾಗ ಖರೀದಿ ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ; ಇಬ್ಬರ ಬಂಧನ

09:03 PM May 06, 2022 | Team Udayavani |

ಮಂಗಳೂರು: ವೃದ್ಧರೋರ್ವರ ಜಾಗ ಮಾರಾಟಕ್ಕೆ ಸಂಬಂಧಿಸಿ ನಕಲಿ ದಾಖಲೆ ಸೃಷ್ಟಿಸಿ 60 ಲ.ರೂ.ಗೂ ಅಧಿಕ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಉಡುಪಿಯ ಅಶೋಕ ಕುಮಾರ್‌(47) ಮತ್ತು ರೇಷ್ಮಾ ವಾಸುದೇವ್‌ ನಾಯಕ್‌ (36) ಎಂಬವರನ್ನು ಬಂಧಿಸಿದ್ದಾರೆ.

Advertisement

ಬೆಂಗಳೂರು ಮೂಲದ, ಪ್ರಸ್ತುತ ಬಜಪೆ ಬಳಿ ವಾಸವಿರುವ ಕ್ರಿಸ್ಟಿನ್‌ ಎಡ್ವಿನ್‌ ಜೋಸೆಫ್ ಗೋನ್ಸಾಲ್ವಿಸ್‌(84) ವಂಚನೆಗೊಳಗಾದವರು. ಅವರು ಉಡುಪಿ ಜಿಲ್ಲೆಯ ಮೂಡುತೋನ್ಸೆ ಗ್ರಾಮದಲ್ಲಿ 77 ಸೆಂಟ್ಸ್‌ ಜಾಗ ಹೊಂದಿದ್ದು ಅದನ್ನು ಮಾರಾಟ ಮಾಡಲು ಇಚ್ಛಿಸಿದ್ದರು. ಅದನ್ನು ತಮ್ಮ ಪರಿಚಯದ ರಾಮ ಪೂಜಾರಿ ಎಂಬವರಿಗೆ ಹೇಳಿದ್ದರು.

ಅಶೋಕ್‌ ಕುಮಾರ್‌ ಮತ್ತು ರೇಷ್ಮಾ ನಾಯಕ್‌ ಜಾಗ ಖರೀದಿಸಲು ಆಸಕ್ತಿ ಹೊಂದಿರುವ ಬಗ್ಗೆ ರಾಮ ಪೂಜಾರಿ ತಿಳಿಸಿದ್ದರು. ಅನಂತರ ಕರಾರು ಪತ್ರ ಮಾಡಲಾಗಿತ್ತು. ಆ ಸಂದರ್ಭ ಮುಂಗಡವಾಗಿ ಚೆಕ್‌ ಮೂಲಕ 30 ಲ.ರೂ.ಗಳನ್ನು ನೀಡಿದ್ದು ಉಳಿದ ಹಣವನ್ನು 6 ತಿಂಗಳೊಳಗೆ ನೀಡಿ ಕ್ರಯಪತ್ರ ರಿಜಿಸ್ಟರ್‌ ಮಾಡಿಕೊಳ್ಳುವುದಾಗಿ ತಿಳಿಸಿದ್ದರು.

ಅನಂತರ ಖರೀದಿದಾರರು ಹಣದ ಕೊರತೆ ಇರುವುದರಿಂದ ಮೊದಲು 40 ಸೆಂಟ್ಸ್‌ ನೋಂದಣಿ ಮಾಡಿಸಿ ಹಣ ನೀಡಿ, ಉಳಿದ 37 ಸೆಂಟ್ಸ್‌ ಅನಂತರ ನೋಂದಣಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಅವರು ವಂಚಿಸಿ ಎಲ್ಲ 77 ಸೆಂಟ್ಸ್‌ಗೆ ಕ್ರಯಪತ್ರ ಮಾಡಿಸಿದ್ದರು. ಅದಕ್ಕೆ ಪೂರಕವಾಗಿ ವಿವಿಧ ದಾಖಲೆಪತ್ರಗಳನ್ನು ನಕಲಿಯಾಗಿ ಮಾಡಿರುವುದು ಗೊತ್ತಾಗಿದೆ.

ಅಲ್ಲದೆ ಅವರು ನೀಡಿದ ಚೆಕ್‌ ಕೂಡ ಬೌನ್ಸ್‌ ಆಗಿರುವ ಬಗ್ಗೆ ಕ್ರಿಸ್ಟಿನ್‌ ಎಡ್ವಿನ್‌ ಅವರು ಮಂಗಳೂರಿನ ಸೈಬರ್‌ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next