Advertisement

ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ

05:08 PM Jan 17, 2022 | Team Udayavani |

ಮುಳಬಾಗಿಲು: ನಗರಸಭೆಯ 5 ಕಿ.ಮೀ. ವ್ಯಾಪ್ತಿಯ 47 ಗ್ರಾಮಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರು ಜಮೀನು ಸಕ್ರಮಗೊಳಿಸುವುದನ್ನು ಸರ್ಕಾರ ನಿರ್ಬಂಧಿಸಿದೆ.

Advertisement

ಆದರೂ, ಕಂದಾಯ ಇಲಾಖೆಯಲ್ಲಿನ ಕೆಲವು ನೌಕರರು ಭೂ ಮಾಫಿಯಾದೊಂದಿಗೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಮೀನು ಪರಭಾರೆ ಮಾಡುತ್ತಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 9ನೇ ಪ್ರಕರಣದಲ್ಲಿ ಅಗತ್ಯಪಡಿಸಿದಂತೆ ಸರ್ಕಾರ 15/12/14ರಂತೆ ಮುಳಬಾಗಿಲು ಪುರಸಭೆ ಪ್ರದೇಶವನ್ನು ಸಣ್ಣ ನಗರಸಭೆ ಪ್ರದೇಶವೆಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿದ್ಧಿಕ್‌ಪಾಷ ಘೋಷಣೆ ಮಾಡಿದ್ದರು.

30/01/2021ರಂತೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಉಪಬಂಧಗಳ ಅಡಿಯಲ್ಲಿ ಬರುವ ನಗರ ಪೌರಸಭೆ (ಸಿಎಂಸಿ) ವ್ಯಾಪ್ತಿಯ 5 ಕಿ.ಮೀ. ವ್ಯಾಪ್ತಿಯ ನಿರ್ಬಂಧಿತ ಅಂತರದಲ್ಲಿ ಸರ್ಕಾರದ ವಿವಿಧ ಕಲ್ಯಾಣ, ಮೂಲಭೂತ ಸೌಕರ್ಯದ ಯೋಜನೆಗಳಿಗಾಗಿ ಸರ್ಕಾರಿ ಜಮೀನಿನ ತೀವ್ರ ಕೊರತೆಯಿದ್ದು, ವಸತಿ, ಸ್ಮಶಾನ ಭೂಮಿಯಂತಹ ಸಾರ್ವಜನಿಕ ಉದ್ದೇಶಗಳಿಗೆ ಖಾಸಗೀ ಯವರಿಂದ ಜಮೀನು ಖರೀದಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನನ್ನು ಅನಧೀಕೃತ ಸಾಗುವಳಿಯ ಸಕ್ರಮ ಗೊಳಿಸುವುದನ್ನು ನಿರ್ಬಂಧಿಸಿ, ಕಂದಾಯ ಇಲಾಖೆ (ಭೂ ಮಂಜೂರಾತಿ -1) ಸರ್ಕಾರದ ಅಧೀನಕಾರ್ಯದರ್ಶಿ ಸಿ.ಬಲರಾಂ ಆದೇಶಿಸಿದ್ದಾರೆ.

ಅರ್ಜಿ ಸಲ್ಲಿಸಲು ಅವಕಾಶ ಇಲ್ಲ: ಮುಳಬಾಗಿಲು ನಗರಸಭೆ 5 ಕಿ.ಮೀ. ವ್ಯಾಪ್ತಿಯಲ್ಲಿನ ಕಸಬಾ ಹೋಬಳಿ ಚಾಮರೆಡ್ಡಿಹಳ್ಳಿ, ಜಿ.ವಡ್ಡಹಳ್ಳಿ, ಗುಮ್ಲಾಪುರ, ಕವತನಹಳ್ಳಿ, ಪಿ.ಗಂಗಾಪುರ, ಕೊತ್ತೂರು, ಕಸವಿರೆಡ್ಡಿ ಹಳ್ಳಿ, ನರಸೀಪುರದಿನ್ನೆ, ದೊಡ್ಡಬಂಡಹಳ್ಳಿ, ಕುಂಬಾರ ಹಳ್ಳಿ, ಚಿಕ್ಕಬಂಡಹಳ್ಳಿ, ಜಂಗಾಲಹಳ್ಳಿ, ಅಲ್ಲಾಲಸಂದ್ರ, ಕಪ್ಪಲಮಡಗು, ಮನ್ನೇನಹಳ್ಳಿ, ದಾರೇನಹಳ್ಳಿ, ಸೊನ್ನ ವಾಡಿ, ಮಂಚಿಗಾನಹಳ್ಳಿ, ಖಾದ್ರೀಪುರ, ತುರುಕರಹಳ್ಳಿ, ಲಿಂಗಾಪುರ, ಸೋಮೇಶ್ವರಪಾಳ್ಯ, ಕದರೀಪುರ, ಸಿದ್ದಘಟ್ಟ, ಚಲುವನಾಯಕನಹಳ್ಳಿ, ದುಗ್ಗಸಂದ್ರ, ಮಾರಂಡಹಳ್ಳಿ, ಹೊಸಹಳ್ಳಿ, ಸೀಗೇನಹಳ್ಳಿ, ತೊರಡಿ, ಕುರುಬರಹಳ್ಳಿ, ಆವಣಿ ಹೋಬಳಿ ಮಲ್ಲಕಚ್ಚನಹಳ್ಳಿ, ಶೆಟ್ಟಿಬಣಕನಹಳ್ಳಿ, ಅಸಲಿ ಅತ್ತಿಕುಂಟೆ,  ಜಮ್ಮನಹಳ್ಳಿ, ದೊಡ್ಡಮಾದೇನಹಳ್ಳಿ, ವಿ.ಗುಟ್ಟಹಳ್ಳಿ, ಚಿಕ್ಕಮಾದೇನ ಹಳ್ಳಿ, ಅನಂತಪುರ, ಕುಮುದೇನಹಳ್ಳಿ, ವರದಗಾನ ಹಳ್ಳಿ, ದುಗ್ಗಸಂದ್ರ ಹೋಬಳಿ ದೊಡ್ಡಗುರ್ಕಿ, ಎಚ್‌. ಗೊಲ್ಲಹಳ್ಳಿ, ರಚ್ಚಬಂಡಹಳ್ಳಿ, ಕೆ.ಜಿ.ಲಕ್ಷ್ಮೀಸಾಗರ, ಜಂಗಮಕನ್ನಸಂದ್ರ, ಕುರುಡುಮಲೆ ಗ್ರಾಮಗಳರೈತರು ಸರ್ಕಾರಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ನಿರ್ಬಂಧಿಸಲಾಗಿದೆ.

Advertisement

ಪ್ರಯೋಜನವಾಗಿಲ್ಲ: ಕಳೆದ 2019ರ ಜನವರಿಯಲ್ಲಿ ನಗರಸಭೆ 5 ಕಿ.ಮೀ. ವ್ಯಾಪ್ತಿಯಲ್ಲಿನ 47 ಗ್ರಾಮಗಳ ರೈತರು ಅನಧೀಕೃತ ಸರ್ಕಾರಿ ಜಮೀನನ್ನು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ ಸಕ್ರಮಗೊಳಿಸಲು ಭೂ ಮಂಜೂರಾತಿಗಾಗಿ (ದರಕಾಸ್ತು) ಅರ್ಜಿ 57 ಸಲ್ಲಿಸಲು ಅವಕಾಶ ಇಲ್ಲ ಎಂದು ಸರ್ಕಾರದ ಆದೇಶದಂತೆ ತಹಶೀಲ್ದಾರ್‌ ಬಿ. ಎನ್‌.ಪ್ರವೀಣ್‌ ಸೂಚಿಸಿದ್ದರಿಂದ ರೊಚ್ಚಿಗೆದ್ದ ಸಾವಿರಾರು ರೈತರು ಭೂ ಮಂಜೂರಾತಿಯಿಂದ ವಂಚಿತರಾಗಿ ಹಲವು ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಕಂದಾಯ ಇಲಾಖೆ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಭೂ ಮಾಫಿಯಾದೊಂದಿಗೆ ಶಾಮೀಲಾಗಿ ವಿಠಲಾಪುರ, ನರಸಿಂಹತೀರ್ಥ, ನೂಗಲಬಂಡೆ ಸೇರಿ ಸುತ್ತಮುತ್ತಲಿನ ಮುಳಬಾಗಿಲು ರೂರಲ್‌ ಸರ್ವೆ ನಂಬರ್‌ಗಳಲ್ಲಿನ ಕೋಟ್ಯಂತರ ರೂ. ಮೌಲ್ಯದ ಜಮೀನಿಗೆ ನಕಲಿದಾಖಲೆ ಸೃಷ್ಟಿಸಿ ಪರಭಾರೆ ಮಾಡುತ್ತಿದ್ದರೂಜಿಲ್ಲಾಡಳಿತ ತನಿಖೆ ಮಾಡಿ ಕ್ರಮ ಕೈಗೊಳ್ಳದೇ ಇರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕಂದಾಯ ಇಲಾಖೆಯಲ್ಲಿನ ಕೆಲವರುಭೂ ಮಾಫಿಯಾದೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳ ಸೃಷ್ಟಿಸಿ ನರಸಿಂಹ ತೀರ್ಥ, ನೂಗಲಬಂಡೆ ಪ್ರದೇಶಗಳಲ್ಲಿ ಕೋಟ್ಯಂತರ ಮೌಲ್ಯದ ಜಮೀನು ಮಾರಾಟ ಮಾಡುತ್ತಿದ್ದಾರೆ. ನೂತನ ತಹಶೀಲ್ದಾರ್‌ ಶೋಭಿತಾ ಅವರು ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. -ಕೀಲುಹೊಳಲಿ ಸತೀಶ್‌, ಪರಶುರಾಮಸೇನೆ ಸಂಸ್ಥಾಪಕ ಅಧ್ಯಕ್ಷ

ಮುಳಬಾಗಿಲು ತಾಲೂಕಿಗೆ ಇತ್ತೀಚಿಗೆ ತಹಶೀಲ್ದಾರ್‌ ಆಗಿ ಬಂದಿದ್ದೇನೆ. ಈ ಕುರಿತು ಪರಿಶೀಲಿಸುತ್ತೇನೆ. ಇನ್ನು ಮುಂದೆ ನಕಲಿ ದಾಖಲೆಗಳ ಸೃಷ್ಟಿಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಯಾರೇ ಅಂತಹಕೃತ್ಯಕ್ಕೆ ಸಹಕರಿಸಿದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. -ಶೋಭಿತಾ, ಮುಳಬಾಗಿಲು ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next