ಹುಬ್ಬಳ್ಳಿ: ನಿವೃತ್ತ ಸೈನಿಕರ ನೇತೃತ್ವದ ತಂಡವೊಂದು ನಕಲಿ ಕಂಪನಿ ಸೃಷ್ಟಿಸಿ ಹಣ ತೊಡಗಿಸಿದರೆ ದ್ವಿಗುಣ ಲಾಭಾಂಶ ಕೊಡುವುದಾಗಿ ನಂಬಿಸಿ ಸೈನಿಕರು ಮತ್ತು ಮಾಜಿ ಸೈನಿಕರಿಗೆ ಅಂದಾಜು 40 ಕೋಟಿ ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡು ಮೂಲದ ಹಾಗೂ ಮದ್ರಾಸ್ ರೆಜಿಮೆಂಟ್‌ನಲ್ಲಿ ಹೆಡ್ ಗುಮಾಸ್ತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಕೆ. ಮಣಿ ಹಾಗೂ ಚಾಮರಾಜನಗರದ ಎಂ. ಮಂಜುನಾಥ, ತಮಿಳುನಾಡಿನ ನೀಲಗಿರಿ ಜಿಲ್ಲೆಯ ತಮೀಲ್ ಝೂಲ್ ಇರ್ಷಾದ್, ಜಾನ್ಸನ್ ಮುತ್ತು ಎಂಬುವರೆ ಮೋಸ ಮಾಡಿದ್ದಾರೆಂದು ವಂಚನೆಗೊಳಗಾದ ಸೈನಿಕರು ಮತ್ತು ಮಾಜಿ ಸೈನಿಕರು ಆರೋಪಿಸಿದ್ದಾರೆ.
ಪ್ರತಿಷ್ಠಿತ ಖಾಸಗಿ ಸಿಮೆಂಟ್ ಕಂಪನಿಯಲ್ಲಿ ದೊಡ್ಡ ಬಿಲ್ಡರ್ಸ್‌ಗಳಿದ್ದಾರೆ. ನೀವು ಹಣ ಹೂಡಿಕೆ ಮಾಡಿದರೆ ಯಾವುದೇ ಮೋಸವಾಗುವುದಿಲ್ಲ. ನಿಮ್ಮ ಹೂಡಿಕೆಯ ಹಣಕ್ಕೆ ಚೆಕ್ ಹಾಗೂ ಬಾಂಡ್ ನೀಡಲಾಗುವುದು. ಹಣ ವಾಪಸ್ ಬೇಕೆಂದರೆ 20 ದಿನ ಮೊದಲೇ ತಿಳಿಸಿದರೆ ನೀಡಲಾಗುವುದು. ಪ್ರತಿ ತಿಂಗಳು ಲಾಭಾಂಶ ನೀಡಲಾಗುವುದು ಎಂದು ನಂಬಿಸಿದ್ದರು. ಕರ್ನಾಟಕದ 226 ಸೈನಿಕರಿಗೆ 27 ಕೋಟಿ ರೂ. ಹಾಗೂ ಇತರೆ ರಾಜ್ಯಗಳ 300ಕ್ಕೂ ಅಧಿಕ ಸೈನಿಕರಿಂದ 13 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ವಂಚನೆಗೊಳಗಾದ ಶಿವಪುತ್ರಪ್ಪ ಕಡ್ಲಿ, ಮೆಹಬೂಬಸಾಬ ಬಾವಣ್ಣವರ ಸೇರಿದಂತೆ ಇನ್ನಿತರರು ದೂರಿದ್ದಾರೆ.
2017ರಲ್ಲಿ ನಕಲಿ ಕಂಪನಿ ತೆರೆದಿರುವ ವಂಚಕರು ಆರಂಭದಲ್ಲಿ ಹೂಡಿಕೆದಾರರಿಗೆ ತಿಂಗಳ ಅವಧಿಯೊಳಗಾಗಿ ಲಾಭದ ಹಣ ನೀಡಿದ್ದರು. ನಂತರದ ದಿನಗಳಲ್ಲಿ ಹೂಡಿಕೆದಾರರಿಗೆ ಲಾಭಾಂಶ ನೀಡದೆ ವಂಚಿಸಿ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ತಮಿಳುನಾಡಿನ ಊಟಿ ಮತ್ತು ಕೊಯಿಮತ್ತೂರನಲ್ಲಿಪ್ರಕರಣ ದಾಖಲಿಸಲಾಗಿದೆ. ಆದರೆ ಇದುವರೆಗೂ ವಂಚಕರು ಪತ್ತೆಯಾಗಿಲ್ಲ. ನಮ್ಮ ಹಣ ವಾಪಸ್ ಕೊಡಿಸಿಲ್ಲವೆಂದು ವಂಚನೆಗೊಳಗಾದರು ದೂರಿದ್ದಾರೆ. ಈ ಕುರಿತು ನಗರದ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.