ವಿಧಾನಸಭೆ : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಬಿಜೆಪಿ ಶಾಸಕರೇ ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪ ಹೊರಿಸಿದ್ದು, ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ನಾನು ಸರ್ಕಾರಿ ಸವಲತ್ತು ಪಡೆದಿರುವುದನ್ನು ಸಾಬೀತು ಪಡಿಸಿದರೆ ಗಲ್ಲಿಗೇರಲು ಸಿದ್ದ ಎಂದು ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಎಂ.ಪಿ.ರೇಣುಕಾಚಾರ್ಯ ತಮ್ಮ ಪುತ್ರಿ ಹೆಸರಿನಲ್ಲಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ನಿನ್ನೆ ಆರೋಪಿಸಿದ್ದರು.
ಬುಧವಾರ ಶೂನ್ಯವೇಳೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಈ ವಿಚಾರ ಕೈಗೆತ್ತಿಕೊಂಡರು. ರೇಣುಕಾಚಾರ್ಯ ಮೇಲೆ ಕ್ರಮ ತೆಗೆದುಕೊಳ್ಳುವುದು ಅವಶ್ಯಕತೆ ಇದೆ. ಯಾರೇ ಕಳ್ಳ ಸರ್ಟಿಫಿಕೇಟ್ ತೆಗೆದುಕೊಂಡರೂ ಅದು ಅಪರಾಧ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾದಿಸಿದರು.
ನಾನು ಏನು ಸೌಲಭ್ಯ ತೆಗೆದುಕೊಂಡಿಲ್ಲ. ತೆಗೆದುಕೊಂಡ್ರೆ ನೇಣು ಹಾಕಿಕೊಳ್ಳುತ್ತೇನೆ. ಆರೋಪ ಸಾಬೀತಾದರೆ ನಾನು ಗಲ್ಲಿಗೇರಲು ಸಿದ್ದನಿದ್ದೇನೆ ಎಂದು ರೇಣುಕಾಚಾರ್ಯ ತಿರುಗೇಟು ನೀಡಿದರು.
ನಿಯಮ ೬೯ ರ ಅನ್ವಯ ಮಂಗಳವಾರ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕರು ಬೇಡ ಜಂಗಮ ಎಂದು ಲಿಂಗಾಯಿತ ಜಂಗಮರು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.