Advertisement

ನಕಲಿ ನೋಟು ನೀಡಿ  ಸಾರ್ವಜನಿಕರಿಗೆ ಮೋಸ

12:01 PM Oct 07, 2017 | |

ಕೋಟ: ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಅಂಗಡಿ ಹಾಗೂ ಮೀನು  ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ನಟಿಸಿ ಐನೂರು ರೂ ಮುಖ ಬೆಲೆಯ ಹಲವು ನಕಲಿ ನೋಟುಗಳನ್ನು  ಚಲಾವಣೆ ಮಾಡಿ  ಸಾರ್ವಜನಿಕರಿಗೆ ಮೋಸ ಮಾಡಿದ  ಘಟನೆ ಗುರುವಾರ ಸಾಸ್ತಾನ ಮೀನು ಮಾರುಕಟ್ಟೆ ಸಮೀಪ ಸಂಭವಿಸಿದೆ.

Advertisement

ಬೆಳಗ್ಗೆ 9 ಗಂಟೆ ಸುಮಾರಿಗೆ ಬಿಳಿ ಬಣ್ಣದ ಕಾರಿನಲ್ಲಿ  ಬಂದಿದ್ದ  ಅಪರಿಚಿತ ವ್ಯಕ್ತಿಯೋರ್ವ ಇಲ್ಲಿನ ಅಂಗಡಿಯೊಂದಕ್ಕೆ  ಭೇಟಿ ನೀಡಿ ಸ್ವಲ್ಪ ಸಾಮಾನು ಖರೀದಿ ಮಾಡಿ ನಕಲಿ ನೋಟನ್ನು  ನೀಡಿ ಚಿಲ್ಲರೆ ಪಡೆದ, ಅನಂತರ ಮೀನು ಮಾರುಕಟ್ಟೆಗೆ ತೆರಳಿ ಮೀನು ವ್ಯಾಪಾರ ನಡೆಸಿ ನಾಲ್ಕೈದು ಮಂದಿಗೆ ಈ ನೋಟನ್ನು ನೀಡಿದ್ದಾನೆ ಹಾಗೂ ಸುಮಾರು ಎರಡು ಗಂಟೆಗಳ ಕಾಲ ಇದೇ ಪರಿಸರದಲ್ಲಿ ಓಡಾಡುತ್ತಿದ್ದ ಎನ್ನಲಾಗಿದೆ. 

 ಸಂಜೆ ವೇಳೆ ಅಂಗಡಿಯವರು ಬೇರೆ ಗಿರಾಕಿಗಳಿಗೆ ಈ  ನೋಟು ನೀಡಿದಾಗ ನಕಲಿ ಎಂಬ ಸಂಶಯ ವ್ಯಕ್ತವಾಗಿದ್ದು, ಅನಂತರ  ಪರಿಶೀಲಿಸಿದಾಗ ಅವುಗಳು ಕಲರ್‌ ಝೆರಾಕ್ಸ್‌  ಮಾಡಿದ ಕಾಗದಗಳು ಎಂದು  ತಿಳಿದು ಬಂತು ಆಗ ಎಲ್ಲರೂ ಮೋಸ ಹೋಗಿರುವುದು ತಿಳಿಯಿತು.  ನೋಟನ್ನು  ಸ್ವಲ್ಪವೂ ಅನುಮಾನ ಬಾರದಂತೆ  ಝೆರಾಕ್ಸ್‌  ಮಾಡಿ ಕಟ್ಟಿಂಗ್‌ ಮಾಡಲಾಗಿತ್ತು.

ಮಹಿಳೆಯರೇ ಟಾರ್ಗೆಟ್‌: ಅಂಗಡಿ, ಮೀನು ಮಾರುಕಟ್ಟೆ ಎಲ್ಲ ಕಡೆಗಳಲ್ಲಿ ಮಹಿಳೆಯರ ಬಳಿಯೇ ಈತ ವ್ಯವಹಾರ ನಡೆಸಿದ್ದು, ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಮೋಸಗೊಳಿಸಿದ್ದಾನೆ ಎಂದು ತಿಳಿದು ಬಂದಿದೆ.

ಪೊಲೀಸರಿಂದ ತನಿಖೆ : ಸಾರ್ವಜನಿಕರು ಸಂಜೆ ವೇಳೆ ಕೋಟ ಪೊಲೀಸರಿಗೆ  ವಿಷಯ ತಿಳಿಸಿದ್ದು,  ಅವರು ಸ್ಥಳಕ್ಕೆ ಭೇಟಿ ನೀಡಿ ನೋಟುಗಳನ್ನು ವಶಕ್ಕೆ ಪಡೆದು ನಕಲಿ ಎಂದು ದೃಢಪಡಿಸಿದ್ದಾರೆ ಹಾಗೂ ಆರೋಪಿಯನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡದ್ದಾರೆ.

Advertisement

ಪ್ರಯೋಜನಕ್ಕಿರದ ಸಿ.ಸಿ. ಕೆಮರಾಗಳು
ಆರೋಪಿಯನ್ನು ಪತ್ತೆ ಹಚ್ಚುವ ಸಲುವಾಗಿ ಇಲ್ಲಿನ ಕೆಲವು ಅಂಗಡಿಗಳ ಸಿ.ಸಿ.ಕೆಮರಾಗಳನ್ನು ಪರಿಶೀಲನೆ ನಡೆಸಲಾಯಿತು.  ರಸ್ತೆ ಪಕ್ಕದಲ್ಲಿರುವ ಕಟ್ಟಡದ ಸಿ.ಸಿ. ಕೆಮರಾಗಳನ್ನು  ಅಂಗಡಿ ಬಾಗಿಲ ತನಕ ಮಾತ್ರ ಕವರ್‌ ಆಗುವಂತೆ ವ್ಯವಸ್ಥೆ ಮಾಡಿರುವುದರಿಂದ ಆರೋಪಿಯ ಚಹರೆ ಪತ್ತೆ ಹಚ್ಚಲು ಕಷ್ಟವಾಗಿದೆ. 

ಒಂದು ವೇಳೆ ಕೆಮರಾ ರಸ್ತೆ ಕವರ್‌ ಆಗುವಂತಿದ್ದರೆ  ಆರೋಪಿಯ ಕುರಿತು ಸುಳಿವು ಸುಲಭವಾಗಿ ದೊರೆಯುತ್ತಿತ್ತು ಎನ್ನಲಾಗಿದೆ. ಆದ್ದರಿಂದ ಎಲ್ಲ ಕಡೆ ರಸ್ತೆ ಆಸು-ಪಾಸಿನಲ್ಲಿರುವ ಸಿ.ಸಿ.ಕೆಮರಾಗಳನ್ನು ರಸ್ತೆಯ ಚಿತ್ರಣ ಕವರ್‌ ಆಗುವಂತೆ ವ್ಯವಸ್ಥೆ ಮಾಡಿದರೆ ಇಂತಹ ತುರ್ತು ಸಂದರ್ಭದಲ್ಲಿ ಸಹಾಯವಾಗುತ್ತದೆ ಎಂಬ ಅಭಿ ಪ್ರಾಯ  ಸಾರ್ವಜನಿಕರಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next