ಮಂಗಳೂರು: ಫೈಸಲ್ ನಗರದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಕಂಕನಾಡಿ ನಗರ ಠಾಣೆ ಪೊಲೀಸರು 10 ಲೋಡ್ ಮರಳು, ಒಂದು ಜೆಸಿಬಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ಒಟ್ಟು 3.70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕಿ ಜ್ಯೋತಿ ಎನ್.ಎ. ಅವರು ರಾತ್ರಿ ರೌಂಡ್ಸ್‌ನಲ್ಲಿದ್ದ ವೇಳೆ ಗುರುವಾರ ಮುಂಜಾನೆ 3 ಗಂಟೆ ವೇಳೆಗೆ ಫೈಸಲ್ ನಗರದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 3.20ಕ್ಕೆ ಸಿಬಂದಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಸ್ಥಳದಲ್ಲಿ 2 ಯುನಿಟ್‌ನ 5 ಲೋಡ್ ಮರಳು ದಾಸ್ತಾನು ಇರಿಸಿದ್ದು ಪತ್ತೆಯಾಗಿದ್ದು, ಜೆಸಿಬಿಯೂ ಕಂಡುಬಂದಿದೆ. ಜೆಸಿಬಿಯನ್ನು ಚಾಲಕ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ನದಿ ಕಿನಾರೆಯಿಂದ ಸುಮಾರು 500 ಮೀ. ದೂರದಲ್ಲಿ ಖಾಲಿ ಜಾಗದಲ್ಲಿ ಮತ್ತೆ 5 ಲೋಡ್ ಮರಳು ದಾಸ್ತಾನು ಇರಿಸಿರುವುದು ಪತ್ತೆಯಾಗಿದೆ.
ನದಿಯಿಂದ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ಅಧಿಕೃತ ಪರವಾನಿಗೆ ಪಡೆಯದೆ ಸರಕಾರಕ್ಕೆ ರಾಜಧನ ಪಾವತಿಸದೆ ಅಕ್ರಮವಾಗಿ ಯಾವುದೋ ವಾಹನದಲ್ಲಿ ತುಂಬಿಸಿಕೊಂಡು ಹೋಗಲು ಯತ್ನಿಸಿರುವುದು ಕಂಡುಬಂದಿದೆ ಎಂದು ಉಪ ನಿರೀಕ್ಷಕಿಯವರು ದೂರಿನಲ್ಲಿ ತಿಳಿಸಿದ್ದಾರೆ. ಸ್ವಾಧೀನಪಡಿಸಿಕೊಂಡ ಜೆಸಿಬಿಯ ಅಂದಾಜು ಮೌಲ್ಯ 3 ಲಕ್ಷ ರೂ. ಆಗಿದ್ದು, ಮರಳಿನ ಅಂದಾಜು ಮೌಲ್ಯ 70 ಸಾವಿರ ರೂ. ಆಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಹುಣಸೂರು: ಹುಲಿ ದಾಳಿಗೆ ಮೇಕೆ ಬಲಿ… ಗ್ರಾಮಸ್ಥರಲ್ಲಿ ಆತಂಕ