ಚೆನ್ನೈ: ರನ್ ಬೆನ್ನತ್ತುವ ವೇಳೆ ನಮ್ಮ ಕಳಪೆ ಹೋರಾಟ ಮತ್ತು ಉತ್ತಮ ಜತೆಯಾಟದ ಆಟ ನಿರ್ಮಿಸುವಲ್ಲಿ ವೈಫಲ್ಯ ಅನುಭವಿಸಿರುವುದು ತಂಡದ ಸೋಲಿಗೆ ಕಾರಣವಾಗಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮ ಹೇಳಿದರು. ಇದು ಹೆಚ್ಚು ರನ್ನಿನ ಸವಾಲು (269) ಎಂಬುದೆಂದು ದ್ವಿತೀಯ ಅವಧಿಯಲ್ಲಿ ವಿಕೆಟ್ ಸ್ವಲ್ಪ ಸವಾಲಾಗಿತ್ತು. ನಾವು ಉತ್ತಮವಾಗಿ ಬ್ಯಾಟ್ ಮಾಡಿದ್ದೇವೆ ಎಂದು ಭಾವಿಸುವುದಿಲ್ಲ. ಪಂದ್ಯ ಗೆಲ್ಲುವಲ್ಲಿ ಉತ್ತಮ ಜತೆಯಾಟದ ಆಟ ನಿರ್ಣಾಯಕವಾಗಿತ್ತು. ಆದರೆ ಇದನ್ನು ಮಾಡಲು ನಾವು ವಿಫಲರಾಗಿದ್ದೇವೆ ಎಂದು ರೋಹಿತ್ ಹೇಳಿದರು.
ನಾವು ಔಟಾದ ವಿಧಾನವನ್ನು ಗಮನಿಸಬೇಕಾಗಿದೆ. ಆಟಗಾರರೆಲ್ಲರೂ ಆಳವಾಗಿ ಬ್ಯಾಟಿಂಗ್ ನಡೆಸುವುದು ಅತೀ ಮುಖ್ಯವಾಗಿದೆ. ಆದರೂ ಗೆಲುವಿಗಾಗಿ ನಾವೆಲ್ಲರೂ ಕೈಲಾದಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ನಮ್ಮ ನಿರ್ವಹಣೆ ಉತ್ತಮವಾಗಿದೆ. ಕಳೆದ ಜನವರಿಯಿಂದ ನಾವು 9 ಪಂದ್ಯಗಳಲ್ಲಿ ಜಯ ಸಾಧಿಸಿದ್ದೇವೆ, ಇದು ಮುಂಬರುವ ವಿಶ್ವಕಪ್‌ಗೆ ತಂಡದ ಸಿದ್ಧತೆಯನ್ನು ತೋರಿಸುತ್ತದೆ ಎಂದು ರೋಹಿತ್ ತಿಳಿಸಿದರು.
ನಾವು ಎಲ್ಲಿ ಸುಧಾರಿಸಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದು ಸಾಮೂಹಿಕ ವೈಫಲ್ಯ, ಈ ಸರಣಿಯಿಂದ ನಾವು ಕಲಿಯಲು ಸಾಕಷ್ಟು ವಿಷಯಗಳಿವೆ. ಆಸ್ಟ್ರೇಲಿಯ ಉತ್ತಮ ನಿರ್ವಹಣೆ ನೀಡಿದೆ. ಸ್ಪಿನ್ನರ್‌ಗಳು ನಮ್ಮ ಮೇಲೆ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾದರು. ಅವರ ಸೀಮರ್‌ಗಳು ಕೂಡ ಉತ್ತಮ ದಾಳಿ ಸಂಘಟಿಸಿದ್ದರು ಎಂದು ರೋಹಿತ್ ವಿವರಿಸಿದರು.