Advertisement

ವಿಫ‌ಲ ಕಾರ್ಯಾಚರಣೆ:ಪೆರ್ಣಂಕಿಲದಲ್ಲಿ ಹೆಣ್ಣು ಚಿರತೆ ಸಾವು

12:30 AM Feb 16, 2019 | Team Udayavani |

ಮಣಿಪಾಲ: ಉಡುಪಿ ತಾಲೂಕಿನ ಪೆರ್ಣಂಕಿಲ ಸಮೀಪದ ಅಂಗಾರಕಟ್ಟೆ ಕೇನೆಕುಂಜದಲ್ಲಿ ಯಾರೋ ಇಟ್ಟಿದ್ದ ಉರುಳಿಗೆ 4 ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಸಿಲುಕಿದ್ದು, ಉರುಳು ಬಿಡಿಸಿ ಬಲೆಯಲ್ಲಿ  ಸೆರೆ ಹಿಡಿಯುವಷ್ಟರಲ್ಲಿ ಸಾವನ್ನಪ್ಪಿದ ಘಟನೆ ಫೆ. 15ರಂದು ಸಂಭವಿಸಿದೆ. 

Advertisement

ಉರುಳಿನಲ್ಲಿ ಚಿರತೆ ಸಿಲುಕಿರುವ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಬೆಳಗ್ಗೆ ಮಾಹಿತಿ ನೀಡಿದ್ದು ಅವರು ಖಾಸಗಿ ವಾಹನದಲ್ಲಿ ಬೋನನ್ನು ತರಿಸಿಕೊಂಡು ಸ್ಥಳಕ್ಕಾಗಮಿಸಿದರು. 

ಅರಿವಳಿಕೆ ಇಲ್ಲದೆ ಸಮಸ್ಯೆ
ಚಿರತೆಯ ಸೊಂಟ ಉರುಳಿಗೆ ಸಿಲುಕಿದ್ದು ಅರಿವಳಿಕೆ ತಜ್ಞರು ಲಭ್ಯರಿಲ್ಲದ ಕಾರಣ ಬಲೆ ಬೀಸಿ ಚಿರತೆಯನ್ನು ಹಿಡಿದು ಉರುಳು ಬಿಡಿಸಬೇಕಾದ ಅನಿವಾರ್ಯತೆ ಅರಣ್ಯಾಧಿಕಾರಿಗಳದ್ದು. ಅರಣ್ಯಾಧಿಕಾರಿಗಳು ಅರ್ಧ ಗಂಟೆಗೂ ಹೆಚ್ಚು ಕಾಲ ಚಿರತೆಯನ್ನು ಹಿಡಿಯುವ ಪ್ರಯತ್ನ ಮಾಡಿದರೂ ಉರುಳಿನ ಬಿಗಿತ ಹಾಗೂ ಅರಿವಳಿಕೆ ಇಲ್ಲದೆ ಚಿರತೆ ಕೊಸರಾಡುತ್ತಿದ್ದುದರಿಂದ ಸೋತು ಸ್ಥಳದಲ್ಲೇ ಸಾವನ್ನಪ್ಪಿತು. ಗುರುವಾರ ರಾತ್ರಿ ಚಿರತೆ ಉರುಳಿಗೆ ಬಿದ್ದಿರುವ ಸಾಧ್ಯತೆ ಇದ್ದು ಕೊಸರಾಡುತ್ತಿದ್ದುದರಿಂದ ಅದಕ್ಕೆ ಘಾಸಿ ಉಂಟಾಗಿರುವ ಸಾಧ್ಯತೆಯೂ ಇದೆ. 

ಅರಣ್ಯಾಧಿಕಾರಿಗಳು ಚಿರತೆಯ ಶವವನ್ನು ಕೊಂಡೊಯ್ದಿದ್ದು ಮರಣೋತ್ತರ ಪರೀಕ್ಷೆ ಬಳಿಕ ಸುಡಲಿದ್ದಾರೆ ಎಂದು ತಿಳಿದು ಬಂದಿದೆ. 

ಬೋನು ಇಡಲು ಮನವಿ ಮಾಡಿದ್ದರು
ಪರಿಸರದ ನಾಯಿಗಳು ಚಿರತೆಗೆ ಆಹಾರವಾಗುತ್ತಿರುವ ಬಗ್ಗೆ ಸ್ಥಳೀಯರು ತಿಂಗಳ ಹಿಂದೆಯೇ ಅರಣ್ಯ ಇಲಾಖೆ ಗಮನಕ್ಕೆ ತಂದು ಬೋನು ಇರಿಸಲು ಮನವಿ ಮಾಡಿದ್ದರು. ಆದರೆ ಬೋನು ಇರಿಸಿರಲಿಲ್ಲ. ಈಗ ಹಂದಿ ಹಿಡಿಯಲು ಯಾರೋ ಮಾಡಿರಬಹುದಾದ ಉರುಳಿನಲ್ಲಿ ಚಿರತೆ ಸಿಲುಕಿದ್ದು ಸಾವನ್ನಪ್ಪುವಂತಾಗಿದೆ. ಕಾಡಿನಲ್ಲಿ ಆಹಾರವಿಲ್ಲದೆ ಚಿರತೆಗಳು ಊರಿಗೆ ಬಂದು ನಾಯಿಗಳನ್ನು ತಿನ್ನುತ್ತಿರುವ ಘಟನೆಗಳು ಈ ಪರಿಸರದಲ್ಲಿ ಆಗಾಗ ನಡೆಯುತ್ತಿರುತ್ತವೆ.  

Advertisement

ಜಿಲ್ಲೆಯಲ್ಲಿ ಅರಿವಳಿಕೆ ತಜ್ಞರಿಲ್ಲ
ಉಡುಪಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ದಾಳಿ ನಡೆಸಿದಾಗ, ಉರುಳಿನಲ್ಲಿ ಸಿಲುಕಿದಾಗ ಅಥವಾ ಮನೆ, ಕಟ್ಟಡಗಳನ್ನು ಹೊಕ್ಕಿದಾಗ ಅವುಗಳನ್ನು ಸೆರೆ ಹಿಡಿಯುವುದಕ್ಕೆ ಅರಿವಳಿಕೆ ನೀಡಿ ಪ್ರಜ್ಞೆ ತಪ್ಪಿಸಲು ಉಡುಪಿ ಜಿಲ್ಲೆಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ತಜ್ಞ ಪಶು ವೈದ್ಯರೇ ಇಲ್ಲ. ಅಗತ್ಯವಿದ್ದಾಗ ಮಂಗಳೂರಿನ ಪಿಲಿಕುಳ ಅಥವಾ ಶಿವಮೊಗ್ಗದಿಂದ ತಜ್ಞರನ್ನು ಕರೆಸಿಕೊಳ್ಳಬೇಕಾಗುತ್ತದೆ. ಅಲ್ಲಿಂದ ವೈದ್ಯರು ಬರುವಷ್ಟರಲ್ಲಿ ಇಲ್ಲಿ ಪರಿಸ್ಥಿತಿ ಕೈ ಮೀರಿರುತ್ತದೆ. ಜಿಲ್ಲೆಯಲ್ಲಿ ಒಬ್ಬರಾದರೂ ತಜ್ಞ ಪಶು ವೈದ್ಯರನ್ನು ಈ ನಿಟ್ಟಿನಲ್ಲಿ ತರಬೇತಿ ನೀಡಿ ನೇಲೆಸಲು ಅಧಿಕೃತರು ಸಂಪೂರ್ಣ ವಿಫ‌ಲರಾಗಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ. 

ಪಿಲಿಕುಳ ಹಾಗೂ ಶಿವಮೊಗ್ಗದಲ್ಲಿ ಅರಿವಳಿಕೆ ನೀಡಲು ತಜ್ಞ ಪಶುವೈದ್ಯರನ್ನು ನಿಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಅಲ್ಲಿಂದ ವೈದ್ಯರನ್ನು ಕರೆಸಲಾಗುತ್ತದೆ. 
– ಲೋತ್‌ ಜಿ.,ಎಸಿಎಫ್,ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next