ಬೆಂಗಳೂರು: ಕನ್ನಡ ಮಾಧ್ಯಮದಲ್ಲಿ ಓದಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎರಡೆರಡು ಬಾರಿ ಅನುತ್ತೀರ್ಣಗೊಂಡರೂ ಎದೆ ಗುಂದದೆ ವ್ಯಾಸಂಗ ಮುಂದುವರಿಸಿ, ದೇಶದ ಕಠಿಣ ಮತ್ತು ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡುವ ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು 644ನೇ ರ್‍ಯಾಂಕ್ ಪಡೆದಿರುವ ಶಾಂತಪ್ಪ ಕುರುಬರ ಅವರ ಕಥೆ ರೋಮಾಂಚನಕಾರಿಯಾದದ್ದು!
ಕಡು ಬಡತನದಿಂದ ಬಳ್ಳಾರಿಯಿಂದ ಬೆಂಗ ಳೂರಿಗೆ ಬಂದು ಜೀವನ ರೂಪಿಸಿಕೊಂಡಿರುವ ಶಾಂತಪ್ಪ, ದ್ವಿತೀಯ ಪಿಯುಸಿಯಲ್ಲಿ 2 ಬಾರಿ ಅನುತ್ತೀರ್ಣರಾದವರು. ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಉತ್ತೀರ್ಣ ರಾಗಿ ಪಿಎಸ್‌ಐ ಆಗಿ 7 ವರ್ಷ ಸೇವೆ ಸಲ್ಲಿಸಿದ್ದಾರೆ. ಈಗ ಯುಪಿಎಸ್ಸಿಯಲ್ಲಿ ಯಾವುದೇ ಕೋಚಿಂಗ್ ಪಡೆಯದೇ 644ನೇ ರ್‍ಯಾಂಕ್ ಪಡೆದು ಆಯ್ಕೆ ಆಗುವ ಮೂಲಕ ಪ್ರೇರಣಾದಾಯಿ ಆಗಿದ್ದಾರೆ.
ಭಂಡತನದಿಂದ ಓದಿದ್ದಕ್ಕೆ ಜಯ ಸಿಕ್ಕಿದೆ: ಈ ಕುರಿತು ಮಾತನಾಡಿದ ಅವರು, ದ್ವಿತೀಯ ಪಿಯುಸಿ ಅನು ತ್ತೀರ್ಣರಾಗಿ ಇಲ್ಲಿಯವರೆಗೂ ಬಂದಿದ್ದೇನೆ ಎಂಬುದೇ ಖುಷಿ ವಿಚಾರ. ಯಾವುದೇ ತರಬೇತಿ ಪಡೆಯದೆ, ಮನೆಯಲ್ಲಿಯೇ ಕುಳಿತು ಓದಿದ್ದೇನೆ. ಇದಕ್ಕೆ ಹಿರಿಯ ಅಧಿಕಾರಿಗಳ ಸಹಕಾರ ಕೂಡ ದೊರೆ ತಿದೆ. ಭಂಡತನದಿಂದ ಓದಿದ್ದಕ್ಕೆ ಕೊನೆಗೂ ಜಯ ಸಿಕ್ಕಿದೆ. ನನ್ನ ರ್‍ಯಾಂಕಿಂಗ್ ಅನ್ನು ಉತ್ತಮ ಪಡಿಸಲು ಪ್ರಯತ್ನಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಸಾಧನೆಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪ್ರೇರಣೆ. ಅವರಲ್ಲಿನ ಸೇವಾ ಮನೋ ಭಾವ, ಪ್ರಾಮಾಣಿಕತೆ ನನ್ನನ್ನು ಹೆಚ್ಚು ಓದುವಂತೆ ಮಾಡಿತು. ಹೀಗಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಶಾಂತಪ್ಪ ಹೇಳುತ್ತಾರೆ.
ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ:
ಬಳ್ಳಾರಿ ಜಿಲ್ಲೆ ಕುರಗೋಡು ತಾಲೂಕಿನಲ್ಲಿ ಹುಟ್ಟಿದ ಶಾಂತಪ್ಪ, ಹುಟ್ಟಿದ ವರ್ಷದೊಳಗೆ ತಂದೆಯನ್ನು ಕಳೆದುಕೊಂಡರು. ತಾಯಿ ಕೂಲಿ ಮಾಡುತ್ತಿದ್ದರು. ಸರ್ಕಾರಿ ಶಾಲೆ ಸೇರಿ ವಿದ್ಯಾಭ್ಯಾಸ ಮುಂದುವರಿಸಿದ ಶಾಂತಪ್ಪ ಅವರಿಗೆ ಸರ್ಕಾರಿ ಸೇವೆ ಸೇರುವ ಗುರಿ ಇತ್ತು. ಆದರೆ, ಪಿಯುಸಿಯಲ್ಲಿ ಎರಡು ಬಾರಿ ಫೇಲ್ ಆದರು. ಆದರೂ ಓದು ಮುಂದುವರಿಸಿ ಪದವಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆರಂಭಿಸಿದರು. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 2015ರಲ್ಲಿ ಪಾಸ್ ಆಗಿ ಪಿಎಸ್‌ಐಯಾಗಿ ನೇಮಕಗೊಂಡರು. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಮಾಜಮುಖಿ ಪೊಲೀಸ್: ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರಿಗಾಗಿ 10 ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಿದ್ದಾರೆ. ಈ ಮಾರ್ಗದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ತಾಯಿ ಶೌಚಾಲಯಕ್ಕೆ ಹೋಗಬೇಕು ಎಂದಿದ್ದರು. ಆಗ ಹತ್ತಿರದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಶೌಚಕ್ಕೆ ಹೋಗಲು ತೊಂದರೆಯಾಗಿತ್ತು. ಇದರಿಂದ ತಮ್ಮ ತಾಯಿಗಾದ ಕಷ್ಟ ಯಾರಿಗೂ ಆಗಬಾರದು ಎಂದು ಸಾರ್ವಜನಿಕರಿಗೆ ನೆರವಾಗಲು ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಿದ್ದಾರೆ.