Advertisement

ಆರ್‌ಟಿಇ ಪರೀಕ್ಷಾರ್ಥ ಅರ್ಜಿ ಸ್ವೀಕಾರ ಮೊದಲ ದಿನವೇ ಫೇಲ್‌

03:45 AM Feb 20, 2017 | Harsha Rao |

ಬೆಂಗಳೂರು: ರಾಜ್ಯದಲ್ಲಿ 2017-18ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೀಟುಗಳ ಪ್ರವೇಶಕ್ಕೆ ಶಿಕ್ಷಣ ಇಲಾಖೆ ಆರಂಭಿಸಿರುವ ಪರೀಕ್ಷಾರ್ಥ ಅರ್ಜಿ ಸ್ವೀಕಾರ ಪ್ರಕ್ರಿಯೆ ಮೊದಲ ದಿನವೇ ವಿಫ‌ಲವಾಗಿದೆ.

Advertisement

ಪರೀಕ್ಷಾರ್ಥ ಅರ್ಜಿ ಸಲ್ಲಿಕೆಗೆ ಇಲಾಖೆ ಶನಿವಾರ ರಾತ್ರಿಯಿಂದ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಭಾನುವಾರ ನೂರಾರು
ಪೋಷಕರು ಸಮೀಪದ ಕಂಪ್ಯೂಟರ್‌ ಕೇಂದ್ರಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಯಾವೊಬ್ಬ ಪೋಷಕರೂ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಆನ್‌ಲೈನ್‌ ಪ್ರಯತ್ನದಲ್ಲಿ ಅರ್ಜಿ ತೆರೆದುಕೊಳ್ಳುವುದೇ ದುಸ್ತರವಾಗಿದೆ. ಆಧಾರ್‌ ಬಯೋಮೆಟ್ರಿಕ್‌ ಮೂಲಕ ಅಥವಾ ಪೋಷಕರ ಮೊಬೈಲ್‌ಗೆ ಬರುವ ಒನ್‌ ಟೈಂ ಪಾಸ್‌ವರ್ಡ್‌ (ಒಟಿಪಿ) ಬಳಸಿ ಅರ್ಜಿ ಸಲ್ಲಿಸಬಹುದೆಂದು ಇಲಾಖೆ ಹೇಳಿದೆ. ಆದರೆ, ಆಧಾರ್‌ ನಮೂದಿಸುವಿಕೆ, ಬಯೋಮೆಟ್ರಿಕ್‌ ಎಂಟ್ರಿ, ಒಟಿಪಿ ಎಂಟ್ರಿ
ಹಂತದಲ್ಲೇ ಹಲವು ತಾಂತ್ರಿಕ ಸಮಸ್ಯೆಗಳು ಉಂಟಾಗಿ ಅರ್ಜಿಯೇ ತೆರೆದುಕೊಳ್ಳುತ್ತಿಲ್ಲವೆಂದು ಪೋಷಕರು ದೂರಿದ್ದಾರೆ.

ಪೋಷಕರು ನಮೂದಿಸಿದ ಮಗುವಿನ ಆಧಾರ್‌ ಸಂಖ್ಯೆ ಸರಿ ಇದ್ದರೂ, ಇದು ಅಸಿಂಧು ಆಧಾರ್‌ ಸಂಖ್ಯೆ. ನಿಮ್ಮ
ಆಧಾರ್‌ ಸಂಖ್ಯೆ ತಾಳೆಯಾಗುತ್ತಿಲ್ಲವೆಂಬ ಪ್ರತಿಕ್ರಿಯೆ ಬರುತ್ತಿದೆ. ಕೆಲವು ಸಲ ಆಧಾರ್‌ ಸ್ವೀಕಾರವಾಗುತ್ತದೆಯಾದರೂ ನಂತರ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿದರೆ “ಒಟಿಪಿ ಕೆವೈಸಿ ಇಂಟರ್ನಲ್‌ ಎರರ್‌ ಇನ್‌ ಯುವರ್‌ ಸರ್ವಿಸ್‌’
ಎಂಬ ಉತ್ತರ ಬರುತ್ತಿದೆ. ಒಮ್ಮೊಮ್ಮೆ ಆಧಾರ್‌ ನಮೂದಾದ ಮೇಲೆ ಎಷ್ಟು ಹೊತ್ತು ಕಾದರೂ ಮೊಬೈಲ್‌ಗೆ ಒಟಿಪಿ ಸಂಖ್ಯೆಯ ಸಂದೇಶವೇ ಬರುವುದಿಲ್ಲ ಎಂದು ರಾಜಾಜಿನಗರ ನಿವಾಸಿ ಚಂದ್ರಮೌಳೇಶ್ವರ ದೂರಿದ್ದಾರೆ.

ನೂರಾರು ರೂ. ದಂಡ : ಈ ಮಧ್ಯೆ ಕೆಲ ಪೋಷಕರು ಪರೀಕ್ಷಾರ್ಥ ಅರ್ಜಿ ಸಲ್ಲಿಕೆಗಾಗಿಯೇ ದಿನವಿಡೀ ಕಂಪ್ಯೂಟರ್‌ ಕೇಂದ್ರಗಳಲ್ಲಿ ಪ್ರಯತ್ನ ನಡೆಸಿದ ಪರಿಣಾಮ ಮೊದಲ ದಿನವೇ ಅನಗತ್ಯವಾಗಿ ನೂರಾರು ರೂ. ಕಳೆದುಕೊಂಡಿದ್ದಾರೆ. 

ಪ್ರತಿಭಟನೆಗೆ ಸಿದ್ಧತೆ
ಈ ಬಾರಿಯ ಆರ್‌ಟಿಇ ಪ್ರವೇಶ ಪ್ರಕ್ರಿಯೆ ಈಗಾಗಲೇ 2 ತಿಂಗಳು ತಡವಾಗಿದ್ದರೂ, ಇನ್ನೂ ಪ್ರಾಯೋಗಿಕ ಅರ್ಜಿ ಸ್ವೀಕಾರದಲ್ಲೇ ತೊಡಗಿರುವ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲು ಪೋಷಕರು ತಯಾರಾಗುತ್ತಿದ್ದಾರೆ. ಒಂದೆರಡು
ದಿನಗಳಲ್ಲಿ ಸಮಸ್ಯೆ ಸರಿಹೋಗದಿದ್ದರೆ ಇಲಾಖೆಯ ಕೇಂದ್ರ ಕಚೇರಿ, ಡಿಡಿಪಿಐ, ಬಿಇಒ ಕಚೇರಿಗಳ ಮುಂದೆ ಧರಣಿ
ನಡೆಸಲು ಪೋಷಕರು ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next