ಮುಂಬಯಿ: ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಅವರು ಉಪ ಮುಖ್ಯಮಂತ್ರಿಯಾದ ನಂತರ ಅಸಹಿಷ್ಣು ಮತ್ತು ದುರಹಂಕಾರಿಯಾಗಿದ್ದಾರೆ ಎಂದು ಶಿವಸೇನೆ (ಯುಬಿಟಿ) ಶನಿವಾರ ಆರೋಪಿಸಿದ್ದು, ಇದಕ್ಕೆ ಬಿಜೆಪಿ ತೀವ್ರ ಪ್ರತಿಕ್ರಿಯೆಗಳನ್ನು ನೀಡಿ ಆಕ್ರೋಶ ಹೊರ ಹಾಕಿದೆ.
”ಫಡ್ನವೀಸ್ ಅವರು ಮೊದಲು ಸಹಿಷ್ಣುವಾಗಿದ್ದರು, ಆದರೆ ಉಪಮುಖ್ಯಮಂತ್ರಿಯಾದ ನಂತರ ಅವರ ಹತಾಶೆಯು ಅಸಹಿಷ್ಣು ಮತ್ತು ದುರಹಂಕಾರಕ್ಕೆ ಕಾರಣವಾಯಿತು” ಎಂದು ‘ಸಾಮ್ನಾ’ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಮರಾಠಿ ದೈನಿಕದಲ್ಲಿ ಸಂಪಾದಕೀಯ ಲೇಖನದಲ್ಲಿ ಬಳಸಲಾದ ಭಾಷೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಪಾದಕ ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಕಾರ್ಯಕಾರಿ ಸಂಪಾದಕ, ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರು ರಾಜಕೀಯ ಎದುರಾಳಿಗಳನ್ನು ಟೀಕಿಸುವಾಗ ಸೌಜನ್ಯವನ್ನು ಕಾಪಾಡಿಕೊಳ್ಳಬೇಕು ಎಂದಿದೆ. ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬಾವಂಕುಲೆ ‘ಸಾಮ್ನಾ’ ವಿರುದ್ಧ ದೂರು ದಾಖಲಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಬಿಜೆಪಿ ಯುವಮೋರ್ಚಾಸದಸ್ಯರು, ಶಾಸಕ ಮಿಹಿರ್ ಕೋಟೆಚಾ ಮತ್ತು ಪಕ್ಷದ ರಾಜ್ಯ ಉಪಾಧ್ಯಕ್ಷ ಕೃಪಾಶಂಕರ್ ಸಿಂಗ್ ಸೇರಿದಂತೆ ಕೆಲವು ಬಿಜೆಪಿ ಮುಖಂಡರು ಮಂತ್ರಾಲಯದ ಬಳಿಯ ತಮ್ಮ ಕೇಂದ್ರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕೋಟೆಚಾ ‘ಫಡ್ನವಿಸ್ ಅಭಿವೃದ್ಧಿ ಹರಿಕಾರ. ಅವರ ವಿರುದ್ಧ ಬಳಸಿರುವ ಭಾಷೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನಾವು ಆಕ್ರಮಣಕಾರಿಯಾಗಲು ಸಾಧ್ಯವಿಲ್ಲ ಎಂದು ಸೇನಾ (ಯುಬಿಟಿ) ಭಾವಿಸಿದರೆ, ನಾವು ಸಮಾನ ತೀವ್ರತೆಯಿಂದ ಪ್ರತಿಕ್ರಿಯಿಸುತ್ತೇವೆ. ಎಂ.ವಿ.ಎ.ಯಲ್ಲಿ ಉಳಿದಿರುವವರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಸಂಜಯ್ ರಾವುತ್ ಅವರನ್ನು ಸಾರ್ವಜನಿಕವಾಗಿ ಕಂಡರೆ ಚಪ್ಪಲಿಯಿಂದ ಥಳಿಸುತ್ತೇವೆ ಎಂದು ಬಿಜೆಪಿ ಯುವಮೋರ್ಚಾ ಸದಸ್ಯರೊಬ್ಬರು ಹೇಳಿದ್ದಾರೆ. ಪ್ರತಿಭಟನಾಕಾರರು ‘ಸಾಮ್ನಾ’ ಪ್ರತಿಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.ಮುಂಬೈನ ಇತರ ಭಾಗಗಳಲ್ಲಿಯೂ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುತ್ತದೆ ಎಂದರು.