Advertisement
ಇದಾದ ಬಳಿಕ ಪ್ರತಿ ವರ್ಷವೂ ಒಂದೊಂದು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಗ್ರಂಥಾಲಯವನ್ನು ಸರ್ಕಾರ ತೆರೆದಿದ್ದು , 2007ರಲ್ಲಿ ತಾಲೂಕಿನಲ್ಲಿ 41 ಗ್ರಾಮ ಪಂಚಾಯಿತಿ ಕೇಂದ್ರ ಹೊಂದಿರುವ ಎಲ್ಲಾ ಗ್ರಾಮದಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರವಾಗಲಿ ಇಲ್ಲ ಜನಪ್ರತಿನಿಧಿಗಳಾಗಲಿ ಆಸಕ್ತಿ ವಹಿಸಿಲ್ಲ.
Related Articles
Advertisement
ನಿರ್ವಹಣೆ ಕೊರತೆ: ಜ್ಞಾನ ದೇಗುಲವಾಗಿರುವ ವಾಚನಾಲಯಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಇರುವ ಕೊಠಡಿಯನ್ನು ರಿಪೇರಿ ಮಾಡಿ ಓದುಗರಿಗೆ ಉತ್ತಮ ವಾತಾವರಣ ಸೃಷ್ಟಿಸಲು ಇಲಾಖೆಯಾಗಲಿ, ಅಧಿಕಾರಿಗಳಾಗಲಿ, ಜನಪ್ರತಿನಿಧಿ ಗಳಾಗಲಿ ಮುಂದಾಗಿಲ್ಲ. ಸ್ವತ್ಛತೆ ಮರೀಚಿಕೆಯಾಗಿದ್ದು, ಗ್ರಂಥಾಲಯದ ಸುತ್ತ ಗಿಡ ಗಂಟೆಗಳು ಬೆಳೆದು ಹಾವು ಹಲ್ಲಿಯ ವಾಸ ಸ್ಥಾನವಾಗಿವೆ. ಗ್ರಂಥಾಲಯದ ಸಮೀಪದಲ್ಲಿ ತಿಪ್ಪೆ ಇರುವುದರಿಂದ ವಾಸನೆ ವಿಪರೀತವಾಗಿದ್ದು, ಮೂಗು ಮುಚ್ಚಿಕೊಂಡು ಓದುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾವಿರಾರು ಮಂದಿ ಸದಸ್ಯರು: ತಾಲೂಕು ಕೇಂದ್ರದ ಗ್ರಂಥಾಲಯದಲ್ಲಿ 2,846 ಸದಸ್ಯರಿದ್ದರೆ ಗ್ರಾಮೀಣ ಭಾಗದಲ್ಲಿರುವ 41 ಗ್ರಂಥಾಲಯಗಳಲ್ಲಿ ಪ್ರತಿ ವಾಚನಾಲಯದಲ್ಲಿ 100 ರಿಂದ 300ರ ವರೆಗೆ ಸದಸ್ಯರಿದ್ದು, ತಾಲೂಕಿನಲ್ಲಿ ಒಟ್ಟಾರೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆಯುವ ಮೂಲಕ ಓದುಗರ ದೊಡ್ಡ ಬಳಗ ತಾಲೂಕಿನಲ್ಲಿ ಇದೆ ಎನ್ನುವುದನ್ನು ಒತ್ತಿ ಹೇಳುತ್ತಿದ್ದಾರೆ.
ಆಸಕ್ತಿ ವಹಿಸಬೇಕು: ಪ್ರತಿ ಗ್ರಂಥಾಲಯವನ್ನು ನೋಡಿಕೊಳ್ಳಲು ಸರ್ಕಾರ ಗ್ರಂಥಾಲಯ ಮೇಲ್ವಿಚಾರಕರನ್ನು ನೇಮಿಸಿದ್ದು, ಪ್ರತಿ ತಿಂಗಳು 7 ಸಾವಿರ ರೂ. ಗೌರವ ಧನ ನೀಡುತ್ತಿದೆ. ಇವರು ಆಸಕ್ತಿ ವಹಿಸಿ ಗ್ರಂಥಾಲಯವನ್ನು ಶುಚಿಯಾಗಿ ಇಟ್ಟು ಕೊಳ್ಳುವುದರೊಂದಿಗೆ ಗ್ರಂಥಾಲಯ ಸುತ್ತ ಸ್ವತ್ಛತೆ ಕಾಪಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿ, ತಾವೇ ಮುಂದೆ ನಿಂತು ಸ್ವತ್ಛಗೊಳಿಸಲು ಆಸಕ್ತಿ ವಹಿಸಬೇಕಿದೆ.
ಗ್ರಾಮ ಪಂಚಾಯಿತಿಗೆ ಹಸ್ತಾಂತರ: ಹಾಸನ ಜಿಲ್ಲೆಯ ಏಳು ತಾಲೂಕಿನಲ್ಲಿ ಇರುವ ಎಲ್ಲಾ ಗ್ರಾಮೀಣ ಗ್ರಂಥಾಲಯವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಇರುವ 41 ಗ್ರಂಥಾಲಯಗಳನ್ನು ಈ ವರೆಗೆ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಲ್ಲ. ಹಸ್ತಾಂತರ ಮಾಡಲು ಈಗಾಗಲೇ ತಾಲೂಕು ಗ್ರಂಥಾಲಯದ ಅಧಿಕಾರಿಗಳು ಕಡತವನ್ನು ಸಿದ್ಧಗೊಳಿಸಿದ್ದಾರೆ.
ಪಟ್ಟಣದ ಗ್ರಂಥಾಲಯಕ್ಕೆ ಪುಸ್ತಕ ಅಗತ್ಯವಿದೆ: ಪಟ್ಟಣದಲ್ಲಿ ಇರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಚನ್ನರಾಯಪಟ್ಟಣ ಶಾಖೆಗೆ ಸ್ಪರ್ಧಾತ್ಮಕ ಪುಸ್ತಕಗಳ ಅಗತ್ಯವಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯವನ್ನು ಉಪಯೋಗಿಸುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದುವ ಪುಸ್ತಕಗಳ ಕೊರತೆ ಇದೆ. ಇವುಗಳನ್ನು ದಾನ ನೀಡಲು ಯಾರಾದರೂ ಮುಂದೆ ಬರಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕೊಂಡು ಓದಿ ವೃತ್ತಿಗೆ ತೆರಳಿದ ಮೇಲೆ ಆ ಪುಸ್ತಕವನ್ನಾದರೂ ಗ್ರಂಥಾಲಯಕ್ಕೆ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಿದೆ.
ಸಮ್ಮೇಳನ ವೆಚ್ಚಕ್ಕೆ ಕಡಿವಾಣ ಹಾಕಿ: ಸರ್ಕಾರಗಳು ರಾಜ್ಯ ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಮ್ಮೇಳನ ಹಾಗೂ ತಾಲೂಕು ಸಮ್ಮೇಳನಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತವೆ. ಆದರೆ ಗ್ರಂಥಾಲಯ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಸಮ್ಮೇಳನಕ್ಕೆ ನೀಡುವ ಅನುದಾನದಲ್ಲಿ ಸ್ವಲ್ಪ ಭಾಗವನ್ನು ಕಡಿತಗೊಳಿಸಿ ಆ ಹಣವನ್ನು ಗ್ರಾಮೀಣ ಗ್ರಂಥಾಲಯಗಳಿಗೆ ನೀಡಬೇಕು ಎಂದು ಓದುಗರು ಸಲಹೆ ನೀಡಿದ್ದಾರೆ.
-ಶಾಮಸುಂದರ್ ಕೆ. ಅಣ್ಣೇನಹಳ್ಳಿ