ಪಿರಿಯಾಪಟ್ಟಣ: ಜೆಡಿಎಸ್ ಪಕ್ಷ ಶಾಸಕರನ್ನು ತಯಾರು ಮಾಡುವ ಕಾರ್ಖಾನೆ ಮೊದಲು ನಮ್ಮ ಕಾರ್ಖಾನೆಯಲ್ಲಿ ತಯಾರಾದವರೆ ಈಗ ನಮ್ಮನ್ನು ಬೈದುಕೊಂಡು ಓಡಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.
ತಾಲೂಕಿನ ಕಣಗಾಲು ಗ್ರಾಮದಲ್ಲಿ ಆಯೋಜಿಸಿದ ಜೆಡಿಎಸ್ ರೈತ ಚೈತನ್ಯ ಯಾತ್ರೆ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಮೀಸಲಾತಿ ಪರಿಕಲ್ಪನೆ ಬರುವ ಮೊದಲೇ ದೇವೇಗೌಡರು ಮುಸಲ್ಮಾನರು, ಉಪ್ಪಾರ, ನಾಯಕ ಸಮುದಾಯ ಸೇರಿದಂತೆ ಬಹುತೇಕ ಹಿಂದುಳಿದ ಸಮುದಾಯಗಳಿಗೆ ಮೊದಲು ಶೇ. 4 ಮೀಸಲಾತಿ ನೀಡಿದರು. ಈಗ ಇದೇ ಮೀಸಲಾತಿಯನ್ನು ಕಾಂಗ್ರೆಸ್ ಮತ್ತು ಬಿಜೆಪಿಯವರು ನಾವು ಕೊಟ್ಟಿದ್ದು ಎನ್ನುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಒಂದಾಗಿ ದೇವೇಗೌಡರನ್ನು ತುಮಕೂರಿನಲ್ಲಿ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದರು ಇಂಥವರು ನಮ್ಮನ್ನು ಕೋಮುವಾದಿಗಳ ಜೊತೆ ಕೈಜೋಡಿಸುತ್ತಾರೆ ಇವರದು ಕುಟುಂಬ ರಾಜಕಾರಣ ಎನ್ನುತ್ತಾರೆ. ಕಾಂಗ್ರೆಸ್ ನವರು ರಾಷ್ಟ್ರೀಯ ನಾಯಕರನ್ನು ಕರೆಸಿಕೊಂಡು ಬಂದು ಮತ್ತು ಬಿಜೆಪಿಯವರು ಅಮಿತ್ ಶಾ ರನ್ನು ಕರೆಸಿ ಜೆಡಿಎಸ್ 25 ಕ್ಷೇತ್ರ ಮಾತ್ರ ಗೆಲ್ಲಲು ಸಾಧ್ಯ ಎಂದು ಭಾಷಣ ಮಾಡಿಸುತ್ತಾರೆ ನಮ್ಮ ಶಕ್ತಿ ಕೇವಲ 25 ಆದರೆ ನಮ್ಮ ಮೇಲೆ ಭಯ ಏಕೆ ಇವರಿಗೆ. ಜೆಡಿಎಸ್ ಯಾವಾಗಲೂ ರೈತರ ಪರ ನಿಲ್ಲುವ ಪಕ್ಷ ಈ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಎಂದರು.
ಪಿರಿಯಾಪಟ್ಟಣದಲ್ಲಿ ಕೆ.ಎಸ್. ಕಾಳಮರೀಗೌಡ, ಕೆ.ವೆಂಕಟೇಶ್ ರವರು ನಮ್ಮ ಕಾರ್ಖಾನೆಯಲ್ಲಿ ತಯರಾದ ಶಾಸಕರು. ನಾನು ನಮ್ಮ ಕುಟುಂಬ ಈ ಮಟ್ಟಕ್ಕೆ ಬೆಳೆಯಲು ದೇವರ ಕೃಪೆ. ರೈತರಿಗೆ ಹಾಗೂ ಜನರಿಗೆ ನೀಡಿದ ಮಾತನ್ನು ಉಳಿಸಿಕೊಂಡ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು. ಬಡವರಿಗೆ, ಅಶಕ್ತರಿಗೆ ಸೇರಿದಂತೆ ರೈತರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಹೋರಾಟ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ, ಈಗ 200 ಯೂನಿಟ್ ವಿದ್ಯುತ್ ಉಚಿತ ಕೊಡುತ್ತೇವೆ ಎನ್ನುತ್ತಾರೆ ಆದರೆ ಅವರೇ ಅಧಿಕಾರದಲ್ಲಿದ್ದಾಗ ಏನು ಮಾಡುತ್ತಿದ್ದರು. ನಾನು ಇಂಧನ ಸಚಿವನಾಗಿದ್ದಾಗ ನಾನು ಕೆಲಸ 48 ಸಾವಿರ ಕೋಟಿ ನಷ್ಟದಲ್ಲಿದೆ. ರೇವಣ್ಣ ಕುಮಾರಸ್ವಾಮಿ ಒಡೆದಾಡುತ್ತಾರೆ ಎಂದರು.
ಅಣ್ಣ ತಮ್ಮ ಕಚ್ಚಾಡುತ್ತಾರೆ ಎಂಬುದು ಭ್ರಮೆ
ನಾನಾಗಲಿ, ಕುಮಾರಸ್ವಾಮಿಯವರಾಗಲಿ ಕಚ್ಚಾಡುತ್ತಾರೆ ಜೆಡಿಎಸ್ ಒಡೆದೋಗುತ್ತದೆ ಎಂಬುದು ವಿರೋಧ ಪಕ್ಷದವರ ಭ್ರಮೆ ನಾನ್ಯಾವತ್ತೂ ಒಡೆದಾಡುವುದಿಲ್ಲ, ಹಾಸನದಲ್ಲಿ ಜೆಡಿಎಸ್ ಪಕ್ಷದ ಶಾಸಕರು ಗೆಲುವು ಸಾಧಿಸುತ್ತಾರೆ. ಯಾರೂ ಇದರ ಬಗ್ಗೆ ಗೊಂದಲ ಮಾಡಿಕೊಳ್ಳಬೇಡಿ.
ಮುಂದಿನ ಚುನಾವಣೆಯಲ್ಲಿ ಜನರು ಬಹುಮತದಿಂದ ಜೆಡಿಎಸ್ ಅಧಿಕಾರಕ್ಕೆ ತಂದರೆ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ಯವರು ಪಂಚರತ್ನ ಯೋಜನೆಗಳ ಜಾರಿಗೆ ತರಲಿದ್ದಾರೆ ಎಂದರು.
Related Articles
ಪಿರಿಯಾಪಟ್ಟಣ ಕ್ಷೇತ್ರದ ಶಾಸಕರು ಜನರ ಪರ ಸೇವೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಶಾಸಕ ಕೆ.ಮಹದೇವ್ ಮಾತನಾಡಿ ಎಚ್.ಡಿ.ದೇವೇಗೌಡ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾನು ಬಂದಿದ್ದೇನೆ. ಬೇರೆ ಪಕ್ಷದವರು ಹಣದ ಆಮಿಷ ಒಡ್ಡಿದರೂ ನಿರಾಕರಣೆ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ನಾನು ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ತಾಲೂಕಿನಲ್ಲಿ ಕೆಲಸ ಮಾಡಿಲ್ಲ ಎಂದು ದೂರಬಾರದು ಎಂಬ ಭಾವನೆಯಿಂದ ಬಿಜೆಪಿ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿದ್ದೇನೆ. ಜೆಡಿಎಸ್ ಭದ್ರಕೋಟೆಯನ್ನು ಒಡೆಯಲು ವಿರೋಧಿಗಳು ಹುನ್ನಾರ ಮಾಡುತ್ತಿದ್ದಾರೆ. ಮಾಜಿ ಶಾಸಕರು ನನ್ನ ಅನುದಾನದಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಸತ್ಯ ಏನೆಂಬುದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ನನ್ನನ್ನು ಕಳೆದುಕೊಂಡರೆ ನನಗೆ ನಷ್ಟವಿಲ್ಲ ನಮ್ಮ ಪಕ್ಷದ ಕಾರ್ಯಕರ್ತರಿಗೆ ನಷ್ಟ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಅವರಿಂದ ಹಣ ಪಡೆದು ಮಾರಾಟವಾದರೆ ನಿಮ್ಮ ಮನೆಗಳು ಆಳಾಗುತ್ತವೆ ಆದ್ದರಿಂದ ಹಣದ ಆಮಿಷಕ್ಕೆ ಬಲಿಯಾಗದೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಐಲಾಪುರ ರಾಮು, ಹೇಮಂತ್, ರುದ್ರಮ್ಮ, ಗೀತಾ ಮಹದೇವ್, ಮೋಹನ್ ರಾಜ್, ಚಂದ್ರಮ್ಮ, ಗೋವಿಂದೇಗೌಡ, ಚಂದ್ರೇಗೌಡ, ಕೃಷ್ಣಪ್ಪ, ಆನಂದ, ಕುಮಾರ್ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.