ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ ಕೊರತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮದ ಪ್ರವಾಸಿ ಮಂದಿರದಲ್ಲಿ ಕಳೆದ 8-10 ತಿಂಗಳಿನಿಂದ ಕುಡಿಯಲು ನೀರಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಇಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ
ಅನೈತಿಕ ಚಟುವಟಿಕೆ: 8-10 ತಿಂಗಳಿನಿಂದ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಸಂಜೆ ಯಾರು ಇಲ್ಲದೇ ಇರುವುದರಿಂದ ಪ್ರವಾಸಿ ಮಂದಿರದ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎನ್ನುವುದು ಸಾರ್ವಜನಿಕರ ಆರೋಪ.
ಸುಲಿಗೆ: ಅನಾನುಕೂಲತೆಯಿಂದ ಕೆಲಗಂಟೆಗಳ ಕಾಲ ವಿಶ್ರಮಿಸಲು ಅಥವಾ ರಾತ್ರಿ ಕಳೆಯಲು ಪ್ರವಾಸಿ ಮಂದಿರದ ಕಡೆ ಬಂದರೇ ಇಲ್ಲಿನ ಸಿಬ್ಬಂದಿ ಒಬ್ಬರಿಗೆ 250 ರೂ. ಬಾಡಿಗೆ ಮಾತ್ರ ಪಡೆಯುತ್ತಾರೆ ಮತ್ತು ಒಂದು ವೇಳೆ ಕುಟುಂಬದ 4-5 ಜನ ಬಂದರೆ ತಲೆಗೆ 250ರಂತೆ 1000ರಿಂದ 1500 ರೂ. ಸುಲಿಗೆ ಮಾಡುತ್ತಿದ್ದಾರೆ. ಬಂದ ತಪ್ಪಿಗೆ ಅನಿವಾರ್ಯವಾಗಿ ಬೇರೆ ದಾರಿ ಇಲ್ಲದೇ ಕೇಳಿದಷ್ಟು ಹಣ ಕೊಟ್ಟು ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಪ್ರವಾಸಿಗರು.
ಮೌಖೀಕ ಆದೇಶ: ಮೇಲಾಧಿಕಾರಿಗಳು ಪ್ರವಾಸಿಮಂದಿರಕ್ಕೆ ಬರುವ ಅಧಿಕಾರಿ ವರ್ಗದವರೇ ಆಗಲಿ, ಜನಪ್ರತಿನಿ ಧಿಗಳೇ ಅಥವಾ ದೂರದೂರಿನ ಪ್ರವಾಸಿಗರೇ ಆಗಲಿ ಒಬ್ಬರಿಗೆ 250 ರೂ. ಬಾಡಿಗೆ ಪಡೆಯುವಂತೆ ತಿಳಿಸಿದ್ದಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಊಟಕ್ಕೆ ಪರದಾಟ: ಪ್ರವಾಸಿ ಮಂದಿರಕ್ಕೆ ಬರುವ ಅಧಿಕಾರಿಗಳು ದೂರದ ಪ್ರವಾಸಿಗರು ಮಧ್ಯಾಹ್ನ ಊಟಕ್ಕೆ ಬಂದರೆ ಇಲ್ಲಿನ ಸಿಬ್ಬಂದಿ ನಮ್ಮಲ್ಲಿ ಅಡುಗೆ ಮಾಡಲು ಸಿಬ್ಬಂದಿ ಇಲ್ಲ. ನನ್ನದು ಇಲ್ಲಿ ರೂಮ್ ಬಾಯ್ ಕೆಲಸ ಅಷ್ಟೇ, ಆದ್ದರಿಂದ ಊಟ ಹಾಗೂ ನೀರನನ್ನು ಹೊರಗಡೆಯಿಂದ ತರಬೇಕೆಂದು ಹೇಳುತ್ತಿದ್ದಾರೆ.
ಮರಳು ಶೇಖರಣೆ ಕೇಂದ್ರ: ಗ್ರಾಮದ ಸುತ್ತಮುತ್ತ ಅಕ್ರಮವಾಗಿ ಸಾಗಾಟ ಮಾಡುವಾಗ ವಶಪಡೆಸಿಕೊಂಡ ಮರಳನ್ನು ಅಧಿಕಾರಿಗಳು ಪ್ರವಾಸಿಮಂದಿರದ ಆವರಣದಲ್ಲಿ ಶೇಖರಿಸುತ್ತಿದ್ದು, ಪ್ರವಾಸಿಮಂದಿರ ಮರಳು ಶೇಕರಿಸುವ ಕೇಂದ್ರವಂತಾಗಿದೆ. ಪ್ರವಾಸಿಮಂದಿರದಲ್ಲಿ ಕೂಡಲೇ ಬೋರ್‌ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಬೇಕು.ಅಡುಗೆ ಮಾಡಲು ಸಿಬ್ಬಂದಿ ನೇಮಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಅಕ್ರಮ ಮರಳು ಸಾಗಾಟ ವೇಳೆ ಪೊಲೀಸ್ ಇಲಾಖೆ, ನಿರ್ಮಿತ ಕೇಂದ್ರ ಹಾಗೂ ಕಂದಾಯ ಇಲಾಖೆಗಳ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡೆಸಿಕೊಂಡ ಮರಳನ್ನು ಪ್ರವಾಸಿಮಂದಿರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಶೇಖರಿಸಲಾಗುವುದು. ಸರ್ಕಾರ ಯಾವುದಾದರು ಕಾಮಗಾರಿಗಳಿಗೆ ಮೇಲಾಧಿಕಾರಿಗಳ ನಿರ್ದೇಶನದಂತೆ ಅಲ್ಲಿಂದ ರವಾನಿಸಲಾಗುವುದು
.- ಸಿದ್ದೇಶ ಎಂ., ತಹಶೀಲ್ದಾರ್
–ವಸಂತಕುಮಾರ ವಿ. ಸಿನ್ನೂರ