ಲಕ್ಷ್ಮೇ ಶ್ವರ: ಕೊಳಚೆ ನೀರಿನಿಂದ ಆವೃತಗೊಂಡಿರುವ ಶಾಲೆಯ ಮೈದಾನ . ಶಾಲಾ ಆವರಣದಲ್ಲಿರುವ ನಿರುಪಯುಕ್ತ ಅಂಗನವಾಡಿ ಕಟ್ಟಡ. (ಬಲಚಿತ್ರ)
ಪಟ್ಟಣದ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರ್ಯಾರಂಭವಾಗಿ 16 ವರ್ಷ ಕಳೆದರೂ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ.
ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 68 ವಿದ್ಯಾರ್ಥಿಗಳು ಓದುತ್ತಿದ್ದು, ಸಾಕಷ್ಟು ಸ್ಥಳವಾಕಾಶವಿದ್ದರೂ ಶಾಲೆಯ ಸುತ್ತಲೂ ಕಾಂಪೌಂಡ್ ಇಲ್ಲದ್ದರಿಂದ ಆವರಣದಲ್ಲಿಯೇ ನಿರುಪಯುಕ್ತ ವಸ್ತು ತಂದು ಹಾಕಲಾಗುತ್ತಿದೆ. ನೀರು ಹರಿದು ಹೋಗಲು ಚರಂಡಿ ಇಲ್ಲದ್ದರಿಂದ ಕೊಳಚೆ ನೀರು ಮತ್ತು ಮಳೆಯ ನೀರು ವರ್ಷಪೂರ್ತಿ ಮೈದಾನದಲ್ಲಿ ನಿಲ್ಲುವ ಸ್ಥಿತಿ ಉದ್ಬವಿಸಿದೆ. ಇದರಿಂದ ಶಾಲಾ ವಾತಾವರಣ ಗಬ್ಬು ನಾರುವಂತಾಗಿದೆ. ಮಕ್ಕಳು ನಿಶ್ಚಿಂತೆಯಿಂದ ಕುಳಿತು ಕಲಿಯುವ ವಾತಾವರಣ ಇಲ್ಲದೇ ಅನಾರೋಗ್ಯದ ಭೀತಿ ನಿರ್ಮಾಣವಾಗಿದೆ.
ಈ ಮೊದಲು ಶಾಲೆಗೆ ಕಟ್ಟಡ ಇಲ್ಲದ್ದರಿಂದ ಇಲ್ಲಿನ ಸಮುದಾಯ ಭವನದಲ್ಲಿ ಶಾಲೆ ನಡೆಯುತ್ತಿತ್ತು. ಸದ್ಯ ಶಾಲೆ ಸ್ವಂತ ಕಟ್ಟಡ ಹೊಂದಿದ್ದರೂ ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ. ಶಾಲಾ ಆವರಣದಲ್ಲಿಯೇ ಅತ್ಯಂತ ಹಳೆಯದಾದ ಅಂಗನವಾಡಿ ಕಟ್ಟಡವೊಂದು ಆಗಲೂ ಈಗಲೂ ಬೀಳುವ ಸ್ಥಿತಿಯಲ್ಲಿದ್ದು ಇದು ಅನೈರ್ಮಲ್ಯಕ್ಕೆ ಕಾರಣವಾಗಿದೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಶಾಲೆ ಇದ್ದು ಇದೇ ರಸ್ತೆಯಲ್ಲಿ ಶಿಕ್ಷಣ ಇಲಾಖೆಯವರು, ಜನಪ್ರತಿನಿಧಿಗಳು ನಿತ್ಯವೂ ಸಂಚರಿಸುತ್ತಿದ್ದರೂ ಜಾಣ ಕುರುಡುತನ ತೋರುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಶಾಲೆಯ ಅವ್ಯವಸ್ಥೆಯಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಮೈದಾನದಲ್ಲಿ ಕೊಳಚೆ ನೀರು ನಿಲ್ಲುವುದರಿಂದ ಆಟವಾಡಲು ಜಾಗವಿಲ್ಲದಂತಾಗಿದೆ. ಸೊಳ್ಳೆ, ನೊಣಗಳ ಕಾಟದಿಂದ ಪಾಠ ಮತ್ತು ಊಟಕ್ಕೆ ತೊಂದರೆಯಾಗುತ್ತಿದೆ. ಶಾಲೆಗೆ ಬರಲು ಹೋಗಲು ಕೊಳಚೆ ದಾಟಬೇಕಿದೆ. ರಸ್ತೆ ಪಕ್ಕವೇ ಶಾಲೆ ಇರುವುದರಿಂದ ಯರ್ರಾಬಿರ್ರಿ ವಾಹನಗಳು ಸಂಚರಿಸುತ್ತಿದ್ದು ಶಾಲೆಗೆ ಕಾಂಪೌಂಡ್ ನಿರ್ಮಿಸಬೇಕು ಎಂದು ಸಮಸ್ಯೆ ಹೇಳಿಕೊಂಡರು.