Advertisement

ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತದಿಂದ ಸೌಲಭ್ಯ ದೊರೆಯುವಂತಾಗಬೇಕು: ಜಿಲ್ಲಾಧಿಕಾರಿ

06:30 PM Dec 20, 2019 | Team Udayavani |

ಉಡುಪಿ: ಜನಸಾಮಾನ್ಯರ ಕಂದಾಯ, ಪಿಂಚಣಿ ಮತ್ತು ಇತರ ಸಮಸ್ಯೆಗಳ ಬಗ್ಗೆ ಅರಿತು ಜಿಲ್ಲಾಡಳಿತವೇ ಸಂಬಂಧ‌ಪಟ್ಟ ಫ‌ಲಾನುಭವಿಯ ಮನೆ ಬಾಗಿಲಿಗೆ ತೆರಳಿ, ಅಲ್ಲೇ ಸೌಲಭ್ಯವನ್ನು ಮಂಜೂರು ಮಾಡುವುದರ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಲು ಜಿಲ್ಲಾಡಳಿತದ ಮೂಲಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಶುಕ್ರವಾರ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಉಡುಪಿ, ಕಾಪು ಮತ್ತು ಬ್ರಹ್ಮಾವರ ವ್ಯಾಪ್ತಿಯ ಕಂದಾಯ ಅದಾಲತ್‌, ಪಿಂಚಣಿ ಅದಾಲತ್‌ ಮತ್ತು ಪೌತಿ ಅದಾಲತ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನರು ತಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ಕಚೇರಿಯಿಂದ ಕಚೇರಿಗಳಿಗೆ ಅಲೆದಾಡಬಾರದು. ಬದಲಿಗೆ ಜಿಲ್ಲಾಡಳಿತದ ಬಳಿಯೇ ಸಾರ್ವನಿಕರಿಗೆ ಸಂಬಂಧ‌ಪಟ್ಟ ಅಗತ್ಯ ದಾಖಲೆಗಳು ಲಭ್ಯವಿದ್ದಲ್ಲಿ ನೇರವಾಗಿ ಜನರ ಮನೆಬಾಗಿಲಿಗೆ ತೆರಳಿ, ಅಲ್ಲೇ ಸಂಬಂಧ‌ಪಟ್ಟ ಯೋಜನೆಯ ಅರ್ಜಿ ಭರ್ತಿ ಮಾಡಿಸಿ, ಸ್ಥಳದಲ್ಲೇ ಸೌಲಭ್ಯ ಮಂಜೂರು ಮಾಡಬೇಕು. ಸ್ಥಳದಲ್ಲೇ ಮಂಜೂರು ಮಾಡಲು ಸಾಧ್ಯವಾಗದ ಪ್ರಕರಣಗಳಲ್ಲಿ ಕಾಲಮಿತಿಯಲ್ಲಿ ಜನರಿಗೆ ಸೇವೆಯನ್ನು ಒದಗಿಸುವಂತಾಗಬೇಕು. ಜಿಲ್ಲೆಯಲ್ಲಿ ಪೌತಿ ಸಮಸ್ಯೆಗಳು ಬಹಳಿಷ್ಟಿದೆ. ಕುಟುಂಬದ ಹಿರಿಯರು ಮೃತಪಟ್ಟ ನಂತರ, ಅವರ ಉತ್ತರಾಧಿಕಾರಿಗಳು ಹೆಸರು ತಿದ್ದುಪಡಿ ಮಾಡದೇ ಇರುವುದರಿಂದ ಆಸ್ತಿ, ಮುಂದಿನ ತಲೆಮಾರಿಗೆ ವರ್ಗಾವಣೆಯಾಗದೆ ಉಳಿದುಕೊಂಡಿದೆ. ಪೌತಿಗೆ ಸಂಬಂಧಪಟ್ಟ ಅರ್ಜಿಗಳನ್ನು ಬಗೆಹರಿಸಲು ಉಡುಪಿಯಲ್ಲಿ ಮೊತ್ತ ಮೊದಲ ಬಾರಿಗೆ ಪೌತಿ ಅದಾಲತ್‌ನ್ನು ಏರ್ಪಡಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಕಂದಾಯ, ಪಿಂಚಣಿ ಮತ್ತು ಪೌತಿಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳಿಗೂ ಒಂದೇ ಸೂರಿನಡಿ ಪರಿಹಾರ ದೊರಕಿಸಿಕೊಡುವ ಪ್ರಯತ್ನದ ಭಾಗವಾಗಿ ಕಂದಾಯ ಮತ್ತು ಪಿಂಚಣಿ ಅದಾಲತ್‌ಗಳನ್ನು ನಡೆಸಲಾಗುತ್ತಿದೆ. ಜನ ಸಾಮಾನ್ಯರಿಗೆ ಆಸರೆಯಾಗುವಂತಹ ಪಿಂಚಣಿ ಸೇವೆಯಲ್ಲಿ ಸಮಸ್ಯೆಗಳು ಉದ್ಭಸುತ್ತಿದ್ದು, ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕೆನ್ನುವುದು ಈ ಕ್ರಾರ್ಯಕ್ರಮದ ಉದ್ದೇಶ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲ ತಾಲೂಕುಗಳಲ್ಲಿ ಕ್ರಮವಾಗಿ ಕಂದಾಯ ಮತ್ತು ಪಿಂಚಣಿ ಅದಾಲತ್‌ಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕಾಪು ಶಾಸಕ ಲಾಲಾಜಿ. ಆರ್‌. ಮೆಂಡನ್‌, ಉಡುಪಿ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌ ಪೂಜಾರಿ, ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು, ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕಿನ ತಹಶೀಲ್ದಾರ್‌ಗಳು, ಗ್ರಾಮ ಲೆಕ್ಕಿಗರು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಕಂದಾಯ ಸೇವೆಯನ್ನು ನೀಡುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇದನ್ನು ಇನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳೂ ಶ್ರಮವಹಿಸಬೇಕು. ಕಂದಾಯ, ಪಿಂಚಣಿ ಮತ್ತು ಪೌತಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ನಿಟ್ಟಿನಲ್ಲಿ ಮೊದಲ ಸುತ್ತಿನಲ್ಲಿ ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಅದಾಲತ್‌ಗಳನ್ನೂ ಎರಡು ಮತ್ತು ಮೂರನೇ ಸುತ್ತಿನಲ್ಲಿ ಕಾರ್ಕಳ, ಕುಂದಾಪುರ ಹಾಗೂ ಹೆಬ್ರಿ ತಾಲೂಕಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು.
-ಜಿ. ಜಗದೀಶ್‌, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next