Advertisement

ಭಕ್ತರಿಗೆ ಸಮಸ್ಯೆಯಾಗದಂತೆ ಸೌಲಭ್ಯ ಕಲ್ಪಿಸಿ

06:31 AM Jan 17, 2019 | |

ದಾವಣಗೆರೆ: ಶ್ರೀಸಂತ ಸೇವಾಲಾಲರ 280ನೇ ಜನ್ಮ ದಿನಾಚರಣೆ ಅಂಗವಾಗಿ ಫೆ. 13ರಿಂದ 15ರ ವರೆಗೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಕ್ರಮ ವಹಿಸುವಂತೆ ಮುಜರಾಯಿ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ್‌ ನಾಯ್ಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಬುಧವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಶ್ರೀ ಸಂತಸೇವಾಲಾಲರ 280ನೇ ಜನ್ಮದಿನದ ಪ್ರಯುಕ್ತ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಸುಮಾರು 2.5 ಲಕ್ಷದಿಂದ 3 ಲಕ್ಷ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಕುಡಿಯುವ ನೀರು, ಪ್ರಸಾದ, ಧಾರ್ಮಿಕ ಆಚರಣೆ, ಸಾರಿಗೆ, ವಾಹನಗಳ ಪಾರ್ಕಿಂಗ್‌, ಶೌಚಾಲಯ ವ್ಯವಸ್ಥೆ ಜತೆಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸಲು ಕ್ರಮ ವಹಿಸಲು ತಿಳಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅತಿ ಹೆಚ್ಚಿನ ಒತ್ತು ನೀಡಬೇಕು. ಎಲ್ಲ ಅಧಿಕಾರಿಗಳು, ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ, ಸೇವಾಲಾಲ್‌ ಪ್ರತಿಷ್ಠಾನ ಹಾಗೂ ಸ್ವಯಂ ಸೇವಕರು ಸೇರಿದಂತೆ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌.ಶ್ರೀನಿವಾಸ್‌, ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸುವರು ಎಂದರು.

ಫೆ.14ರಂದು ಬೆಳಿಗ್ಗೆ ಹೆಚ್ಚು ನೀರಿನ ಅವಶ್ಯಕತೆ ಇದ್ದು, 40-50 ಟ್ಯಾಂಕರ್‌, 20-30 ಟ್ರಾಕ್ಟರ್‌ಗಳಲ್ಲಿ ನೀರು ಸಂಗ್ರಹಿಸಬೇಕು. ಅಡುಗೆ ಇತರೆಡೆ ಅವಶ್ಯಕತೆಗನುಗುಣವಾಗಿ ನೀರು ಸರಬರಾಜು ಮಾಡಬೇಕು. ಇದಕ್ಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಜೊತೆಗೆ 4 ರಿಂದ 5 ಜನ ಅಧಿಕಾರಿಗಳನ್ನು ನೇಮಿಸಬೇಕು. ನೀರು ಸರಬರಾಜು ಸಂಬಂಧ ಸಹಾಯವಾಣಿ ತೆರೆದು, ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು. ಈ ಬಾರಿ ಮಳೆ ಕೊರತೆಯಿಂದ ಬಹುತೇಕ ಕೆರೆಗಳು ಒಣಗಿವೆ. ಹಾಗಾಗಿ ಕೆಎಂಎಫ್‌ ಹಾಲಿನ ಟ್ಯಾಂಕರ್‌ಗಳಲ್ಲಿ ಶಿವಮೊಗ್ಗದಿಂದ ನೀರು ತುಂಬಿ ಕಳುಹಿಸಲು ಕ್ರಮ ವಹಿಸುವಂತೆ ಕೆಎಂಎಫ್‌ ಎಂಡಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.

Advertisement

ಚಿನ್ನಿಕಟ್ಟೆಯಿಂದ ಹೊಸ ಜೋಗ ಮಾರ್ಗದ ಸೂರಗೊಂಡನಕೊಪ್ಪ ರಸ್ತೆ ದುರಸ್ತಿಗೊಳಿಸಲು ಲೋಕೋಪಯೊಗಿ ಇಲಾಖೆ ಅಧಿಕಾರಿಗೆ ತಿಳಿಸಿದ ಸಚಿವರು, ಫೆ.13, 14 ಮತ್ತು 15 ರಂದು ಭಕ್ತರು, ಸಿಬ್ಬಂದಿ ಮತ್ತು ವಿಶೇಷ ಅತಿಥಿಗಳು ಸೇರಿದಂತೆ ಎಲ್ಲರಿಗೂ ಕೆಆರ್‌ಐಡಿಎಲ್‌ ವತಿಯಿಂದ ಊಟದ ವ್ಯವಸ್ಥೆ ನಿರ್ವಹಿಸಲು ಸೂಚಿಸಿದರು. 35 ರಿಂದ 40 ಕೌಂಟರ್‌ಗಳಲ್ಲಿ ಊಟದ ವಿತರಣೆ ವ್ಯವಸ್ಥೆ ಜತೆಗೆ ಹಾಗೂ ಅಡುಗೆ ತಯಾರಿಸುವ, ಊಟದ ಪ್ರದೇಶದಲ್ಲಿ ಸುರಕ್ಷತಾ ದೃಷ್ಟಿಯಿಂದ ಸಿಸಿ ಟಿವಿ ಅಳವಡಿಕೆ ಮತ್ತು ಡಿಎಚ್ಒ, ಆಹಾರ ಸುರಕ್ಷತೆಯವರು ಹಾಜರಿದ್ದು ಪರಿವೀಕ್ಷಿಸಬೇಕೆಂದು ಸೂಚಿಸಿದರು.

ಶಿವಮೊಗ್ಗ, ಶಿಕಾರಿಪುರ, ಹರಿಹರ, ಹೊನ್ನಾಳಿ, ರಾಣೆಬೆನ್ನೂರು, ದಾವಣಗೆರೆ, ಚನ್ನಗಿರಿ ಮತ್ತು ಭದ್ರಾವತಿಯಿಂದ ಸೂರಗೊಂಡನಕೊಪ್ಪದ ಭಾಯಾಗಡ್‌ವರೆಗೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಬಗಾದಿ ಗೌತಮ್‌ ಸಭೆ ಗಮನಕ್ಕೆ ತಂದರು.

ಮುಂದಿನ ದಿನಗಳಲ್ಲಿ ಸೂರಗೊಂಡನಕೊಪ್ಪ ತಾಣವಾಗಲಿದ್ದು, ಹೊನ್ನಾಳಿಯಿಂದ ಸೂರಗೊಂಡನಕೊಪ್ಪದವರೆಗೆ ನಿರಂತರವಾಗಿ ಬಸ್‌ ಸಂಚಾರಕ್ಕೆ ಕ್ರಮ ವಹಿಸುವಂತೆ ಪರಮೇಶ್ವರ ನಾಯ್ಕ ಸೂಚಿಸಿದರು.

ಜಾತ್ರೆಗೆ ಬರುವ ಭಕ್ತಾದಿಗಳ ವಾಹನ ನಿಲುಗಡೆಗೆ ಪಾರ್ಕಿಂಗ್‌ ಶುಲ್ಕ ಪಡೆಯುವುದು ಬೇಡ. ಶ್ರೀಸೇವಾಲಾಲ್‌ ಪ್ರತಿಷ್ಠಾನದಿಂದ ಜಮೀನಿನವರಿಗೆ ಪಾರ್ಕಿಂಗ್‌ ಶುಲ್ಕ ನೀಡಲಾಗುವುದು ಎಂದು ತಿಳಿಸಿದರು.

ಮಹಿಳೆಯರು ಮತ್ತು ಪುರುಷರಿಗೆ ತಲಾ 40 ಶೌಚಾಲಯ ನಿರ್ಮಿಸಲು ನಿರ್ಮಿತಿ ಕೇಂದ್ರದವರಿಗೆ ಸೂಚಿಸಲಾಯಿತು. ವಿದ್ಯುತ್‌ ದೀಪಾಲಂಕಾರ ಪ್ರತಿಷ್ಠಾನ ನಿರ್ವಹಿಸಲಿದೆ. ವೇದಿಕೆ ನಿರ್ಮಾಣದ ಜವಾಬ್ದಾರಿ ಕೆಆರ್‌ಐಡಿಎಲ್‌ ನಿರ್ವಹಿಸಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾ ತಂಡ ಕಳುಹಿಸಿಕೊಡಲಿದೆ. ಕಂಟ್ರೋಲ್‌ ರೂಂ, ತಾತ್ಕಾಲಿಕ ಪೊಲೀಸ್‌ ಠಾಣೆ, ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮತ್ತು ಆ್ಯಂಬ್ಯುಲೆನ್ಸ್‌ ಸೇವೆ ಇರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ಶ್ರೀ ಸೇವಾಲಾಲ್‌ ಕ್ಷೇತ್ರಾಭಿವೃದ್ಧಿ ಹಾಗೂ ನಿರ್ವಹಣಾ ಪ್ರತಿಷಾಷ್ಠನದ ಎಂ.ಡಿ ಹೀರಾಲಾಲ್‌, ಶ್ರೀ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್‌, ತಾಂಡಾ ಅಭಿವೃದ್ಧಿ ನಿಗಮದ ಯೋಜನಾ ನಿರ್ದೇಶಕ ಭೋಜ್ಯಾನಾಯ್ಕ, ಜಿಪಂ ಸಿಇಒ ಎಸ್‌.ಅಶ್ವತಿ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್‌ ಸಂತೊಷ್‌ಕುಮಾರ್‌, ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next