Advertisement

ಮೆಟ್ರೋದಲ್ಲಿ ಕಂಡ ಮುಖಗಳು

04:57 PM Apr 07, 2018 | |

ಬೆಂಗಳೂರಿನ ಪಾಲಿಗೆ ಮೆಟ್ರೋ ಹೊಸ ಅಧ್ಯಾತ್ಮ. ಅಲ್ಲಿ ಧ್ಯಾನಸ್ಥರಾಗಿ ಪಯಣಿಸುವಾಗ, ಕ್ಷಣಕ್ಕೊಂದು ಕತೆಗಳು, ದೃಶ್ಯಗಳು ಬೇಡವೆಂದರೂ ಕಣ್ಣೊಳಗೆ ಬಂದು ಕೂರುತ್ತವೆ. ಈ ಮೆಟ್ರೋ ತನ್ನ ನಿತ್ಯದ ಪಯಣದಲ್ಲಿ ವಿಶಿಷ್ಟ ವ್ಯಕ್ತಿಗಳನ್ನೂ ಸಲುಹುತ್ತಿದೆ. ಅವರ್ಯಾರು? ಮೆಟ್ರೋದಲ್ಲಿ ಕಂಡ ಆ ವಿಶೇಷ ಮುಖಗಳು ಹೇಗಿರುತ್ತವೆ? ಈ ಪ್ರಶ್ನೆಗೆ ಉತ್ತರವಾಗಿ ಇಲ್ಲೊಂದು ಒಂದು ಲಹರಿ…

Advertisement

ಮುದ್ದು ಮಗುವಿನೊಂದಿಗೆ ಹೊಸ ಅಪ್ಪ ಹುಟ್ಟುತ್ತಾನಲ್ಲ, ಅಂಥದ್ದೇ ಪುಳಕದ ಪ್ರತಿರೂಪ ವಿಜ್ಞಾನದೊಡಲಲ್ಲೂ ಇದೆ. ಪ್ರತಿಯೊಂದು ತಂತ್ರಜ್ಞಾನ ಹುಟ್ಟಿದಾಗಲೆಲ್ಲ, ಅದರೊಟ್ಟಿಗೆ ಹೊಸ ಬಗೆಯ ಮನುಷ್ಯನೂ ರೂಪುಗೊಂಡು ಜಗತ್ತಿನೆದುರು ನಿಲ್ಲುತ್ತಲೇ ಇದ್ದಾನೆ. ರೇಡಿಯೋದಿಂದ ಶ್ರೋತೃ ಬಂದ. ಟಿವಿಯಿಂದ ವೀಕ್ಷಕ ಹುಟ್ಟಿಬಂದ. ಟೆಲಿಫೋನ್‌ ಟ್ರಿಣ್‌ ಟ್ರಿಣ್ಣೆಂದಾಗ ದೂರವಾಣಿ ಸಂಭಾಷಣೆಕಾರ “ಹಲೋ’ ಎಂದಂತೆ, ದೋಣಿಯೊಂದಿಗೆ ನಾವಿಕನೂ, ವಿಮಾನದ ಮೂತಿಯೊಳಗಿಂದ ಪೈಲಟ್‌ಗಳೂ ಅವತರಿಸಿಬಿಟ್ಟರು. ಒಂದೊಂದು ತಂತ್ರಜ್ಞಾನವೂ, ಹೊಸ ಮನುಷ್ಯನನ್ನು ರೂಪಿಸುತ್ತಲೇ ಇದೆ. 

  “ಹಾಗಾದರೆ, ನಮ್ಮ ಬೆಂಗಳೂರಿಗೆ ಮೆಟ್ರೋ ಬಂತಲ್ಲ… ಅದರೊಟ್ಟಿಗೆ ಹೊಸ ಮನುಷ್ಯರೇನಾದರೂ ಬಂದರೇ?’ ಅಂತ ನೀವು ಕೇಳಬಹುದು. ಬಂದರು! ಚಾಲಕ, ಪ್ರಯಾಣಿಕರಲ್ಲದೇ ಬೇರಾರೋ ಹೊಸಬರೇ ಬಂದರು. ಇಷ್ಟು ದಿನ ಆ ಹೊಸಬರೆಲ್ಲ, ಇದೇ ರಾಜಧಾನಿಯಲ್ಲೇ ಇದ್ದರು. ನಮಗೂ ತಿಳಿಯದಂತೆ, ಅವರೆಲ್ಲ ಯಾವ್ಯಾವುದೋ ದಿಕ್ಕಿನಲ್ಲೋ ಓಡಾಡುತ್ತಿದ್ದರು. ಮೆಟ್ರೋ ಬಂದಾಗ ದಿಢೀರನೇ, ಅವರೆಲ್ಲ ನಿತ್ಯ ಕಣ್ಣೊಳಗೆ ಆಸೀನರಾಗುತ್ತಿದ್ದಾರೆ. ಈ ಮೆಟ್ರೋ ನೂರಾರು ಹೊಸ ಮನುಷ್ಯರನ್ನು ದಿನಂಪ್ರತಿ ಹೊಸೆಯುತ್ತಲೇ ಇದೆ.

   ಮೆಟ್ರೋ ಒಳಗೆ ಕಾಲಿಟ್ಟಾಗ, ಬಾಗಿಲ ಬಳಿ ಇಬ್ಬರು ಆಚೀಚೆ ನಿಂತಿರುತ್ತಾರಲ್ಲ, ಅವರು ಆಧುನಿಕ ಕಾಲದ ರಾಜಭಟರು. ಆಗೆಲ್ಲ ರಾಜ ಬರುವಾಗ, ಆಚೀಚೆ ಈಟಿ ಹಿಡಿದು ಇಬ್ಬರು ಸ್ವಾಗತ ಕೋರಲು ನಿಲ್ಲುತ್ತಿದ್ದರಂತೆ. ಆ ರಾಜಭಟರ ಜವಾಬ್ದಾರಿಯನ್ನು ಇವರಿಗೆ ದಾಟಿಸಿದ ಪುಣ್ಯಾತ್ಮ ಯಾರಂತ ಗೊತ್ತಿಲ್ಲ. ಈಟಿಯ ಬದಲು, ಕೈಯಲ್ಲಿ ಫ‌ಳಫ‌ಳನೆ ಹೊಳೆಯುವ ಉಕ್ಕಿನ ಕಂಬಿ ಹಿಡಿದು, ನಿಮ್ಮನ್ನು ಸ್ವಾಗತಿಸುತ್ತಾ, ನಿಂತಿರುತ್ತಾರೆ. ಆದರೆ, ನಗು ಮಾತ್ರ ಅವರ ಮೊಗದಲ್ಲಿ ಮೂಡಿರುವುದಿಲ್ಲ. ಪಾಪ, ನೀವು ರಾಜರು ಅಂತ ಭ್ರಮಿಸಿದ್ದೀರೆಂದು ಅವರಿಗೇನು ಗೊತ್ತು!?

  ಆ ರಾಜಭಟರನ್ನು ದಾಟಿ ಹಾಗೆಯೇ ಒಳಗೆ ಹೋದರೆ, ಅಲ್ಲಿ ಒಂದು ಕಂಬ ನಿಟಾರನೆ ನಿಂತಿರುತ್ತೆ. ಅದಕ್ಕೆ ಅನೇಕರು ಜೋತುಬಿದ್ದು, ಮೊಬೈಲ್‌ ಸ್ವೆ„ಪ್‌ ಮಾಡುತ್ತಿರುತ್ತಾರೆ. ಅವರು ಆ ಪ್ರದೇಶದ ಪರಮನೆಂಟ್‌ ವ್ಯಕ್ತಿಗಳು. ಸೌತ್‌ ಪೋಲ್‌, ನಾರ್ತ್‌ ಪೋಲ್‌ ಇದ್ಹಂಗೆ, ಇದು ಅವರ ಪಾಲಿಗೆ ಮೂರನೇ “ಪೋಲ್‌’! ಮೆಟ್ರೋ ಹೊರಟಾಗ, ನಿಂತಾಗ, ಇಲ್ಲವೇ ದಿಢೀರನೆ ವೇಗ ಪಡೆದಾಗ, ಬ್ಯಾಲೆನ್ಸ್‌ ತಪ್ಪಿ, ಪೋಲ್‌ ಡ್ಯಾನ್ಸರ್‌ ಥರ ಆಡುತ್ತಿರುತ್ತಾರೆ. ಒಮ್ಮೆ ಈ ಬದಿಯಿಂದ, ಆ ಬದಿಗೆ, ಆ ಬದಿಯಿಂದ ಈ ಬದಿಗೆ ತಿರುಗುತ್ತಾ, ಕಂಬಕ್ಕೆ ಪ್ರದಕ್ಷಿಣೆ ಹಾಕುವ ಅವರ ಭಕ್ತಿಯಲ್ಲಿ, ಯಾವ ಭಗವಂತನೂ ಇರುವುದಿಲ್ಲ.
  ಕಂಪ್ಯೂಟರಿನೊಳಗೇ ಎಂಟØತ್ತು ತಾಸು ಕುಳಿತು, ದಿನವಿಡೀ ಸ್ಮಾರ್ಟ್‌ಫೋನಿನಲ್ಲಿ ಕಳೆದುಹೋಗುವ ಬೆಂಗಳೂರಿಗರಿಗೆ ನಿದ್ರಾಹೀನತೆ ಹೆಚ್ಚು ಎಂಬುದನ್ನು ಅಲ್ಲಿಲ್ಲಿ ಓದಿಯೇ ಇರುತ್ತೀರಿ. ಆದರೆ, ಮೆಟ್ರೋದೊಳಗೆ ಸೀಟು ಹಿಡಿದ ಅನೇಕರು ಆ ಮಾತಿಗೆ ಹೊರತಾದವರಂತೆ ತೋರುತ್ತಾರೆ. ಕುಳಿತಲ್ಲೇ ಜೋರು ನಿದ್ರೆ ಬಂದಂತೆ ನಟಿಸುತ್ತಾ, ಆಗಾಗ್ಗೆ ಕಿರುಗಣ್ಣಿಂದ ಎದುರು ನಿಂತವರನ್ನು ನೋಡುತ್ತಾ, ಅವರ ಪ್ರಯಣ ಸಾಗುತ್ತಿರುತ್ತೆ. ಹಾಗೆ ಕಿರುಗಣ್ಣು ತೆರೆದಾಗ, ಎಲ್ಲಾದರೂ ವಯಸ್ಸಾದವರೋ, ಗರ್ಭಿಣಿಯರೋ, ಮಕ್ಕಳನ್ನು ಸೊಂಟದ ಮೇಲೆ ಕೂರಿಸಿಕೊಂಡವರೋ ಕಂಡುಬಿಟ್ಟರೆ, ತಮ್ಮ ಸ್ಟಾಪ್‌ ಬರುವ ತನಕ ಜಪ್ಪಯ್ಯ ಅಂದರೂ ಅವರು ಕಣ್ತೆರೆಯುವುದೇ ಇಲ್ಲ. ಕೆಲವು ವೃದ್ಧರು ತಮಗೆ ಯಾರೂ ಸೀಟು ಬಿಟ್ಟುಕೊಡದೇ ಇದ್ದಾಗ, ತಲೆಗೆ ಹೇರ್‌ಡೈ ಹಾಕಿದ್ದೇ ತಪ್ಪೆಂದು, ತಮ್ಮನ್ನೇ ಶಪಿಸುತ್ತಾ ನಿಂತಿರುತ್ತಾರೆ. 
  ಇನ್ನು ಅನೇಕ ಪ್ರಯಾಣಿಕರು ಮೆಟ್ರೋದಲ್ಲಿ ಮೊಬೈಲನ್ನು ಮುಟ್ಟುವುದೇ ಇಲ್ಲ.

Advertisement

ನೋಡುತ್ತಿರುತ್ತಾರಷ್ಟೇ. ಅದು ಅವರ ಡಾಟಾ ಉಳಿಸುವ ಪ್ಲ್ರಾನ್‌ ಅಂತೆ. ಯಾರೋ ಪಕ್ಕದಲ್ಲಿ, ವಾಟ್ಸಾéಪ್‌ ನೋಡುತ್ತಿರುತ್ತಾರೆ, ಫೇಸ್‌ಬುಕ್‌ ಜಾಲಾಡುತ್ತಿರುತ್ತಾರೆ. ಅವರ ಮೊಬೈಲನ್ನೇ ಇಣುಕಿ ಇಣುಕಿ ನೋಡಿಬಿಟ್ಟರೆ, ಇಂಟರ್ನೆಟ್‌ ಒಂದಿಷ್ಟು ಉಳಿತಾಯ ಆಗುತ್ತೆ ಎನ್ನುವ ಲೆಕ್ಕಾಚಾರ ಜಿಯೋ ಸಿಮ್‌ ಬಂದ ಮೇಲೂ ಬದಲಾಗಿಲ್ಲ.

  ನಿತ್ಯ ಸಹಸ್ರಾರು ಮಂದಿಯನ್ನು ಒಂದೇ ಉಸಿರಿನಲ್ಲಿ ಹೊತ್ತೂಯ್ಯುವ ಮೆಟ್ರೋದಲ್ಲಿ ಯಾರು ಹೊಚ್ಚ ಹೊಸ ಪ್ರಯಾಣಿಕರು ಎನ್ನುವ ಪ್ರಶ್ನೆಯೂ ಹುಟ್ಟಬಹುದು. ಅದನ್ನು ಕಂಡುಹಿಡಿಯುವುದೂ ಸುಲಭ. ಅಂಥವರು ಸಾಮಾನ್ಯವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಮೆಜೆಸ್ಟಿಕ್‌ನಲ್ಲಿ ಇಳಿಯಬೇಕಾದವರು ಇನ್ನೆಲ್ಲೋ ಇಳಿಯುವುದು, ಬಲಗಡೆ ಪ್ಲಾಟ್‌ಫಾರಂ ಬರೋವಾಗ, ಎಡಗಡೆಯ ಬಾಗಿಲಿನಲ್ಲಿ ನಿಂತುಕೊಳ್ಳುವ ದೃಶ್ಯಗಳೂ ಅವರು ತೀರಾ ಹೊಸಬರು ಎನ್ನುವುದಕ್ಕೆ ಸಿಗುವ ಸಾಕ್ಷ್ಯಗಳು.   

ಅಂಥ ಹೊಸಬರಿಗೆ ಇನ್ನೊ ಒಂದು ಭಯ ಟೋಕನ್‌ ವಿಚಾರದಲ್ಲಿ. ಆ ಪುಟ್ಟ ಕಾಯಿನ್‌ ಎಲ್ಲಾದರೂ ಕಳೆದುಹೋದರೆ, ನನ್ನ ಕತೆಯೇನು ಎಂಬ ದಿಗಿಲು ಅವರನ್ನು ಕಾಡುತ್ತಲೇ ಇರುತ್ತದೆ. ಪದೇಪದೆ ಜೇಬನ್ನು ಮುಟ್ಟಿಕೊಳ್ಳುತ್ತಾ, ಟೋಕನ್‌ ಇರುವುದನ್ನು ಕನ್‌ಫ‌ರ್ಮ್ ಮಾಡಿಕೊಂಡರೇನೇ ಅವರಿಗೆ ಸಮಾಧಾನ.

  ಅಂತಿಮವಾಗಿ ಮೆಟ್ರೋ ಬಂದು ಮೆಜೆಸ್ಟಿಕ್‌ನಲ್ಲಿ ನಿಂತಾಗ, ಬೇಕೋ ಬೇಡವೋ, ಅಮೆರಿಕ ಅಧ್ಯಕ್ಷ ಟ್ರಂಪ್‌ ನೆನಪಾಗುತ್ತಾನೆ. ಅಧ್ಯಕ್ಷ ಪದಗ್ರಹಣದ ವೇಳೆ ಜನರೇ ಇರಲಿಲ್ಲ ಎಂಬ ಖಾಲಿ ಕುರ್ಚಿಯನ್ನು ಅಮೆರಿಕದ ಒಂದಿಷ್ಟು ಪತ್ರಿಕೆಗಳು ಮುಖಪುಟದಲ್ಲೇ ಮುದ್ರಿಸಿ, ಟ್ರಂಪ್‌ ಅವರನ್ನು ಮುಜುಗರಕ್ಕೆ ಸಿಲುಕಿಸಿದ್ದವು. ಅದನ್ನು ನೆನೆದು, ನಮ್ಮೊಳಗೊಂದು ಹೆಮ್ಮೆ ಅರಳುತ್ತದೆ. ಟ್ರಂಪ್‌ ಸಮಾರಂಭಕ್ಕಿಂತ ಜಾಸ್ತಿ ಜನ ಈ ಮೆಟ್ರೋ ಸ್ಟೇಶನ್ನಿನಲ್ಲಿದ್ದಾರೆ ಅಂತ!

  ಈ ವೇಳೆ ಇಳಿಯುವಾಗ ಯಾರಾದರೂ, ನಿಮ್ಮ ಕಾಲು ತುಳಿದುಬಿಟ್ಟರೆ, ಅವರನ್ನು ನಿಂದಿಸುವುದೂ ತಪ್ಪು. ಈ ಸಾರಿಗೆಯ ಹೆಸರೇ “ಮೆಟ್ರೋ’. ಇನ್ನು ಮೆಟ್ಟಬೇಡಿ ಅನ್ನಲು ನಾವ್ಯಾರು?

 ಕೀರ್ತಿ

Advertisement

Udayavani is now on Telegram. Click here to join our channel and stay updated with the latest news.

Next