Advertisement

ಫೇಸ್‌ಬುಕ್‌ ಸ್ವಯಂವರ: ಕೊನೆಗೂ ಜ್ಯೋತಿಗೆ ಸಿಕ್ಕನು ರಾಜಕುಮಾರ

06:00 AM Jul 04, 2018 | Team Udayavani |

ಹೋದಲ್ಲಿ ಬಂದಲ್ಲಿ, “ಮದುವೆ ಯಾವಾಗ?’ ಎಂಬ ಪ್ರಶ್ನೆ ಜ್ಯೋತಿಯ ಕಾಲ್ಗಳಿಗೆ ಎಡತಾಕುತ್ತಿದ್ದವು. ತಾನು ಕೃಷ್ಣವರ್ಣೆ, ಮದುವೆ ವಯಸ್ಸು ಒಂದು ಹಂತಕ್ಕೆ ಮೀರಿಬಿಟ್ಟದೆ, ಫೇಸ್‌ಬುಕ್‌ ಆನ್‌ ಮಾಡಿ ಗಂಟೆಗಟ್ಟಲೆ ಕುಳಿತರೂ ಯಾವ ಹುಡುಗರೂ ಚಾಟ್‌ಗೆ ಇಳಿದ ಉದಾಹರಣೆ, ಖಾತೆ ತೆರೆದಾಗಿನಿಂದಲೂ ದಾಖಲಾಗಿಲ್ಲ ಎಂಬ ಸಂಗತಿಗಳೆಲ್ಲ ಅವಳನ್ನು ವಿಷಣ್ಣಳನ್ನಾಗಿ ಮಾಡಿದ್ದವು. ಕೊನೆಗೂ ಆಕೆ, ಧೈರ್ಯ ತಂದುಕೊಂಡು ಒಂದು ತಾಸಿನಿಂದ ಅಳೆದುತೂಗಿ ಬರೆದ ಆ ಪೋಸ್ಟ್‌ ಅನ್ನು ಫೇಸ್‌ಬುಕ್‌ಗೆ ಹಾಕಿದ್ದಳು…  

Advertisement

ಆಕೆ ಯಾವ ಮುಹೂರ್ತದಲ್ಲಿ ಆ ಪೋಸ್ಟ್‌ ಹಾಕಿದ್ದಳ್ಳೋ ಗೊತ್ತಿಲ್ಲ. ಆದರೆ, ಫೇಸ್‌ಬುಕ್‌ನಲ್ಲಿ ಆ ಪೋಸ್ಟ್‌ ಹಾಕುವ ವರೆಗೂ ಜ್ಯೋತಿ ಕೆ.ಜಿ. ಎಂಬಾಕೆಯ ಮೊಗದಲ್ಲಿ ನಸುನಗುವೂ ಇದ್ದಿರಲಿಲ್ಲ. ಹೋದಲ್ಲಿ ಬಂದಲ್ಲಿ, “ಮದುವೆ ಯಾವಾಗ?’ ಎಂಬ ಪ್ರಶ್ನೆ ಅವಳ ಕಾಲ್ಗಳಿಗೆ ಎಡತಾಕುತ್ತಿದ್ದವು. ತಾನು ಕೃಷ್ಣವರ್ಣೆ, ಮದುವೆ ವಯಸ್ಸು ಒಂದು ಹಂತಕ್ಕೆ ಮೀರಿಬಿಟ್ಟದೆ, ಫೇಸ್‌ಬುಕ್‌ ಆನ್‌ ಮಾಡಿ ಗಂಟೆಗಟ್ಟಲೆ ಕುಳಿತರೂ ಯಾವ ಹುಡುಗರೂ ಚಾಟ್‌ಗೆ ಇಳಿದ ಉದಾಹರಣೆ, ಖಾತೆ ತೆರೆದಾಗಿನಿಂದಲೂ ದಾಖಲಾಗಿಲ್ಲ ಎಂಬ ಸಂಗತಿಗಳೆಲ್ಲ ಅವಳನ್ನು ವಿಷಣ್ಣಳನ್ನಾಗಿ ಮಾಡಿದ್ದವು. ಕೊನೆಗೂ ಆಕೆ, ಧೈರ್ಯ ತಂದುಕೊಂಡು ಒಂದು ತಾಸಿನಿಂದ ಅಳೆದುತೂಗಿ ಬರೆದ ಆ ಪೋಸ್ಟ್‌ ಅನ್ನು ಫೇಸ್‌ಬುಕ್‌ಗೆ ಹಾಕಿದ್ದಳು.  

  “ನನಗಿನ್ನೂ ಮದುವೆಯಾಗಿಲ್ಲ. ನಿಮಗೆ ಯಾರಾದರೂ ಯೋಗ್ಯ ವರ ಗೊತ್ತಿದ್ದರೆ, ದಯವಿಟ್ಟು ನನಗೆ ಹೇಳಿ. ನಾನು ಫ್ಯಾಶನ್‌ ಡಿಸೈನಿಂಗ್‌ನಲ್ಲಿ ಬಿ.ಎಸ್ಸಿ. ಮುಗಿಸಿರುವವಳು. ವಯಸ್ಸು ಇಪ್ಪತ್ತೆಂಟು. ತಂದೆ- ತಾಯಿ ಇಲ್ಲದ ತಬ್ಬಲಿ ನಾನು. ಜಾತಿ, ಜಾತಕ, ಧರ್ಮ ಯಾವುದೂ ನನಗೀಗ ಅಗತ್ಯವಿಲ್ಲ. ನನ್ನ ಸೋದರ ಮುಂಬೈನಲ್ಲಿ ಆರ್ಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ತಂಗಿ ಸಿವಿಲ್‌ ಎಂಜಿನಿಯರಿಂಗ್‌ ಓದುತ್ತಿದ್ದಾಳೆ. ಬಾಳ ಬಂಡಿ ನಡೆಸಲು, ನನಗೆ ತೋಚಿದ್ದನ್ನು ಗೀಚಿ ಫೇಸ್‌ಬುಕ್‌ನ ಎಲ್ಲ ಗೆಳೆಯರಿಗೆ ಮುಟ್ಟಿಸುತ್ತಿದ್ದೇನೆ. ದಯವಿಟ್ಟು ಯಾರೂ ಅಸಭ್ಯವಾಗಿ ಕಾಮೆಂಟಿಸಬೇಡಿ’. ಹೀಗೆ ಬರೆದ ಪೋಸ್ಟ್‌ನ ಜತೆಗೆ ಆಕೆಯ ಫೋಟೋವನ್ನೂ ಹಾಕಿದ್ದಳು.


  “ಯಾರು ಈ ಜ್ಯೋತಿ?’ - ಫೇಸ್‌ಬುಕ್‌ ತೆರೆದು ಕೂತವರಿಗೆಲ್ಲ, ಕಾಡಿತು ಪ್ರಶ್ನೆ. ಕ್ಷಣಮಾತ್ರದಲ್ಲೇ ಸಹಸ್ರಾರು ಮಂದಿ ಆಕೆಯ ವಿವರ ತಿಳಿದುಕೊಳ್ಳಲು ಪ್ರೊಫೈಲ್‌ ಜಾಲಾಡಿಯಾಗಿತ್ತು. ನೋಡ್ತಾ ನೋಡ್ತಾ ಈಕೆಯ ಪೋಸ್ಟ್‌ ಅನ್ನು 6 ಸಾವಿರಕ್ಕೂ ಅಧಿಕ ಮಂದಿ ಹಂಚಿಕೊಂಡು, ಜಗದಗಲ ತಲುಪಿಸಿಬಿಟ್ಟರು. ಲೈಕುಗಳು ಲಕ್ಷದ ಹಾದಿಹಿಡಿದವು. ಮದುವೆಯಾಗದ ಹುಡುಗರೆಲ್ಲ ಕಾಮೆಂಟಿನಲ್ಲಿ ತಮ್ಮ ವಿಳಾಸ, ವೃತ್ತಾಂತ ಬರೆದುಕೊಂಡರು. ಇನ್‌ಬಾಕ್ಸ್‌ಗೆ ತಮ್ಮ ಚೆಂದದ ಫೋಟೋ ಕಳಿಸಿ, ಊಟ- ತಿಂಡಿ, ಯೋಗಕ್ಷೇಮಗಳ ವಿಚಾರಣೆಗಿಳಿದರು. ಮತ್ತೆ ಕೆಲವರು, “ನಾನು ನಿನ್ನ ಅಕ್ಕ/ ನಾನು ನಿನ್ನ ಅಣ್ಣ ಎಂದು ತಿಳಿದುಕೋ… ನಾನೇ ನಿಂತು ಮದುವೆ ಮಾಡಿಸುವೆ’ ಎಂಬ ಭರವಸೆ ಕೊಟ್ಟರು. ಅಲ್ಲಿಯ ತನಕ ತಬ್ಬಲಿಯಾಗಿದ್ದ ಜ್ಯೋತಿಗೆ, ಅಣ್ಣ, ತಮ್ಮ, ಅಕ್ಕ, ತಂದೆ, ತಾಯಿ ಸಮಾನರೆಲ್ಲ ಪರೋಕ್ಷವಾಗಿ ಸಿಕ್ಕಂತಾಯಿತು. ಜ್ಯೋತಿಯ ಜಗತ್ತು ವಿಸ್ತಾರವಾಯಿತು. ಅಂದಹಾಗೆ, ಈಕೆ ಆ ಪೋಸ್ಟ್‌ ಅನ್ನು ಫೇಸ್‌ಬುಕ್‌ ಗೋಡೆ ಮೇಲೆ ಮಾಮೂಲಿಯಾಗಿ ಅಂಟಿಸಿರಲಿಲ್ಲ. ಒಂದು ಹ್ಯಾಶ್‌ಟ್ಯಾಗ್‌ ಅನ್ನು ಸೃಷ್ಟಿಸಿ, ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ಗೆ ಟ್ಯಾಗ್‌ ಮಾಡಿದ್ದೇ ಟರ್ನಿಂಗ್‌ ಪಾಯಿಂಟ್‌ ಆಗಿಹೋಯಿತು. ಫೇಸ್‌ಬುಕ್‌ನಲ್ಲೊಂದು ಮ್ಯಾಟ್ರಿಮನಿ ವಿಭಾಗ ತೆರೆಯುವಂತೆ ಆಗ್ರಹಿಸಿದ ಆಕೆಯ ಧ್ವನಿಗೆ, ಜಗತ್ತಿನ ಬ್ರಹ್ಮಚಾರಿಗಳೆಲ್ಲ ಕೊರಳು ಸೇರಿಸಿದರು.

  ಆಕೆ ಅಲ್ಲಿಯ ತನಕ ಸಾಕಷ್ಟು ಹುಡುಗರನ್ನು ನೋಡಿದ್ದರೂ, ಯಾಕೋ ಏನೋ ಅವಳನ್ನು ಯಾರೂ ಒಪ್ಪಿರಲಿಲ್ಲ. ಆದರೆ, ಈಗಿನ ಒಂದು ಪೋಸ್ಟ್‌ ಅವಳನ್ನು ಜಗತ್ತೇ ಮನಸ್ಸಾರೆ ಒಪ್ಪುವಂತೆ ಜಾದೂ ಮಾಡಿತ್ತು. ಸಹಸ್ರಾರು ಹುಡುಗರು, ತನ್ನನ್ನು ಮೆಚ್ಚಿ, ಸವಿವರ ಕಳಿಸಿದ್ದಾರೆ. “ಇಷ್ಟು ಮಂದಿಯಲ್ಲಿ ಯಾರನ್ನು ಒಪ್ಪಲಿ?’- ಆಕೆಯ ಮುಂದಿದ್ದ ಏಕೈಕ ಪ್ರಶ್ನೆ. ಈ ಪ್ರಶ್ನೆಗೆ ಜ್ಯೋತಿ, ಉತ್ತರ ಕಂಡುಕೊಳ್ಳಲು ತೆಗೆದುಕೊಂಡ ಸಮಯ ಅಷ್ಟೇ ಚುಟುಕು; ಕೇವಲ ಇಪ್ಪತ್ತೇ ದಿನ. ಜ್ಯೋತಿಯನ್ನು ಮೆಚ್ಚಿದ ಹುಡುಗರೆಲ್ಲ, ಅಲ್ಲಿಯ ತನಕವೂ ಆಕೆಯ ಪ್ರೊಫೈಲ್‌ ಜಾಲಾಡುವುದನ್ನು ನಿಲ್ಲಿಸಿರಲಿಲ್ಲ. ಕೇರಳದ ಮಲಪ್ಪುರಂನ ಈ ಹುಡುಗಿ, ಯಾರನ್ನು ಬಾಳಸಂಗಾತಿಯಾಗಿ ಆರಿಸುತ್ತಾಳೆಂಬ ಕುತೂಹಲವೇ ಅವರಿಗೆಲ್ಲ ಫೇಸ್‌ಬುಕ್‌ ಮೇಲೆ ಆಗಾಗ್ಗೆ ಕಣ್ಣರಳಿಸುವಂತೆ ಮಾಡಿತ್ತು.

  ಅದೊಂದು ದಿನ… ತಮಿಳುನಾಡಿನ ಸ್ಪೆಷಲ್‌ ಪೊಲೀಸ್‌ ಅಧಿಕಾರಿ ರಾಜ್‌ಕುಮಾರ್‌ ಎಂಬಾತನೊಂದಿಗೆ ಆಕೆ ತೆಗೆದುಕೊಂಡಿದ್ದ ಸೆಲ್ಫಿ, ಎಲ್ಲ ಕುತೂಹಲಗಳಿಗೆ ತೆರೆ ಎಳೆಯಿತು. ಅವತ್ತೇ ಎಂಗೇಜ್‌ಮೆಂಟೂ ಮುಗಿಯಿತು. ಕಳೆದವಾರ, ಕಲ್ಕಿಪುರಿ ದೇಗುಲದಲ್ಲಿ ಸರಳವಾಗಿ ಸಪ್ತಪದಿ ತುಳಿದಿದ್ದಾರೆ, ಜ್ಯೋತಿ- ರಾಜ್‌ಕುಮಾರ್‌ ಜೋಡಿ.

Advertisement

  ಇಂದು ಫೇಸ್‌ಬುಕ್‌ನಲ್ಲಿ ನಿತ್ಯವೂ ಸಾಕಷ್ಟು ಫೋಟೋಗಳು ಅಪ್‌ಡೇಟ್‌ ಆಗುತ್ತವೆ. ವರ್ಷಕ್ಕೆ ಏನಿಲ್ಲವೆಂದರೂ ಒಬ್ಬೊಬ್ಬರು ಕನಿಷ್ಠ ಐದಾದರೂ ಪ್ರೊಫೈಲ್‌ ಚಿತ್ರ ಬದಲಿಸುತ್ತಾರೆ. ಆದರೆ, ಮತ್ತೆ ಕೆಲವರು ಅದರ ಗೋಜಿಗೇ ಹೋಗುವುದಿಲ್ಲ. ಇನ್ನೂ ಕೆಲವರಿಗೆ, ತಾನು ಚೆನ್ನಾಗಿಲ್ಲವೇನೋ ಎಂಬ ಹಿಂಜರಿಕೆಯೂ ಇರುತ್ತದೆ. ಆದರೆ, ಅದನ್ನೆಲ್ಲ ಮೀರುತ್ತಾ ಜ್ಯೋತಿ ಚಿಲುಮೆಯಾದಳು. ಹುಡುಗರು ಒಪ್ತಾನೇ ಇಲ್ಲ. ವಯಸ್ಸಾಗಿ ಹೋಗ್ತಿದೆ. ನಾವು ಮದುವೆಗೆ ಅರ್ಹರೇ ಅಲ್ಲ ಎಂದೆಲ್ಲಾ ಯೋಚಿಸಿ, ಖನ್ನತೆಗೆ ಜಾರುವ ಎಷ್ಟೋ ಮನಸ್ಸುಗಳಿಗೆ ಜ್ಯೋತಿಯ ಬಾಳ ಕಥೆ ಸಂಭ್ರಮ, ಸದಾಶಯದ ಹಣತೆ ಹಚ್ಚಲಿ.

Advertisement

Udayavani is now on Telegram. Click here to join our channel and stay updated with the latest news.

Next