ನಾಗಮಂಗಲ: ಫೇಸ್‌ಬುಕ್‌ನಲ್ಲಿ ಯುವತಿ ಎಂದು ಪರಿಚಯ ಮಾಡಿಕೊಂಡು ಯುವಕನಿಂದ ಲಕ್ಷಾಂತರ ರೂ. ಹಣ ಪಡೆದು ಪಂಗನಾಮ ಹಾಕಿರುವ ಘಟನೆ ನಾಗಮಂಗಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಕಳೆದ ಮೂರು ತಿಂಗಳ ಹಿಂದೆ ಫೇಸ್‌ಬುಕ್, ಮೆಸೆಂಜರ್‌ನಲ್ಲಿದ್ದ ಸುಂದರ ಯುವತಿಯ ಭಾವಚಿತ್ರಕ್ಕೆ ಲೈಕ್‌ಕೊಟ್ಟ ಯುವಕನಿಗೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಮಲ್ಲಸಂದ್ರ ಗ್ರಾಮದ ಎಂ.ಆರ್.ಆಶಾ ಎಂದು ಹೇಳಿಕೊಂಡ ಸುಮಾರು 50 ವರ್ಷದ ಮಹಿಳೆಯೊಬ್ಬಳು ಪರಿಚಯ ಮಾಡಿಕೊಂಡಿದ್ದಾಳೆ.
ಒಂದು ವಾರದ ಬಳಿಕ ಆ ಯುವಕನಿಗೆ ಮೊಬೈಲ್ ನಂಬರ್ ಕೊಟ್ಟ ಮಹಿಳೆ ಯುವತಿಯ ಧ್ವನಿಯಲ್ಲಿ ಮಾತನಾಡಲು ಆರಂಭಿಸಿ ನಾನು ನಿಮ್ಮನ್ನು ಪ್ರೀತಿಸುತ್ತಿದ್ದು, ನನಗೊಂದು ಬಾಳು ಕೊಡುವುದಾದರೆ ನಿಮ್ಮನ್ನು ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಅಂದಿನಿಂದ ನಿರಂತರವಾಗಿ ಇಬ್ಬರ ನಡುವೆ ಮೊಬೈಲ್ ಸಂಭಾಷಣೆ ಹಾಗೂ ವಾಟ್ಸ್ ಆಫ್ ಚಾಟಿಂಗ್ ಆರಂಭಗೊಂಡಿದೆ. ತನ್ನ ಕಷ್ಟಗಳನ್ನು ಹೇಳಿಕೊಂಡ ಆಶಾ ಹೆಸರಿನ ವಂಚಕಿ ಮಹಿಳೆ ಮೊಬೈಲ್ ನಂಬರ್‌ಗೆ ಫೋನ್ ಪೇ ಮೂಲಕ ಹಣ ಹಾಕುವಂತೆ ಕೇಳಿಕೊಂಡಿದ್ದಾಳೆ. ಇದನ್ನು ನಂಬಿದ ಯುವಕ ಆಕೆ ಕೇಳಿದಾಗಲೆಲ್ಲ ಹಣ ಹಾಕಲು ಶುರು ಮಾಡಿದ್ದಾನೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಮೂರೇ ತಿಂಗಳಲ್ಲಿ ಬಿಡಿ ಬಿಡಿಯಾಗಿ ಬರೋಬ್ಬರಿ 3.50 ಲಕ್ಷ ರೂ. ಹಣವನ್ನು ತನ್ನ ಖಾತೆಯಿಂದ ಮಹಿಳೆಗೆ ವರ್ಗಾವಣೆ ಮಾಡಿದ್ದಾನೆ. ಅಲ್ಲದೆ 30 ಸಾವಿರ ರೂ. ದಿನಸಿ ಪದಾರ್ಥಗಳನ್ನು ತರಿಸಿಕೊಂಡಿದ್ದಾಳೆ.
ನಂತರ ಯುವಕ ಮದುವೆ ಪ್ರಸ್ತಾಪ ಮಾಡಿದ್ದಾನೆ. ಕೇವಲ ಹಣ ಕೇಳುತ್ತೀದ್ದೀರಿ. ಮದುವೆ ಬಗ್ಗೆ ಮಾತನಾಡುತ್ತಿಲ್ಲ. ನನಗೆ ಹಣ ವಾಪಸ್ ಕೊಡಿ. ಇಲ್ಲ ಮದುವೆ ಫಿಕ್ಸ್ ಮಾಡಿ ಎಂದು ಯುವಕ ಕೇಳಿದಾಗ, ಮಾತು ಬದಲಿಸಿದ ಮಹಿಳೆ ನಾನು ಆಶಾಳಿಗೆ ದೊಡ್ಡಮ್ಮ ಆಗಬೇಕು. ನನ್ನ ಹೆಸರು ಸವಿತಾ ಮಂಡ್ಯದ ಕಲ್ಲಹಳ್ಳಿಯವಳು. ಆಶಾ ತಂದೆ ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಹಾಗಾಗಿ ಅವಳ ಮದುವೆಯನ್ನು ನಾನೇ ಮುಂದೆ ನಿಂತು ಮಾಡಿಸಬೇಕು. ಮದುವೆ ವಿಚಾರ ಪ್ರಸ್ತಾಪಿಸಲು ನಾನೇ ನಿಮ್ಮ ಮನೆಗೆ ಬರುವುದಾಗಿ ಹೇಳಿ ಯುವಕನ ಮನೆಗೆ ಪೋಷಕರನ್ನು ಪರಿಚಯಿಸಿಕೊಂಡು ಮದುವೆ ಮಾತುಕತೆ ನಡೆಸಿ ಹೋಗಿದ್ದಾಳೆ. ನಂತರ ಮದುವೆಯ ದಿನವೇ ನಿಶ್ಚಿತಾರ್ಥ ಮಾಡಿಕೊಳ್ಳೋಣ ಎಂದು ನಂಬಿಸಿದ್ದಾರೆ.
ಮದುಮಗಳ ದೊಡ್ಡಮ್ಮ ಎಂದು ಹೇಳಿಕೊಂಡ ಮಹಿಳೆಯ ಮಾತನ್ನು ನಂಬಿದ ಯುವಕನ ಪೋಷಕರು ಮೇ 20 ರಂದು ಆದಿಚುಂಚನಗಿರಿ ಕ್ಷೇತ್ರದ ಶ್ರೀ ಕಾಲಭೈರವೇಶ್ವರಸ್ವಾಮಿ ಸನ್ನಿಧಿಯಲ್ಲಿ ಮದುವೆ ಕಾರ್ಯ ಮಾಡಲು ನಿರ್ಧರಿಸಿ ಲಗ್ನಪತ್ರಿಕೆಯನ್ನು ಮುದ್ರಿಸಿ ಸಂಬಂಧಿಕರಿಗೆಲ್ಲ ಆಹ್ವಾನ ಕೊಟ್ಟು ಮದುವೆಗೆ ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡಿದ್ದರು.
ದಿನಾಂಕ ನಿಗದಿಪಡಿಸಿದಂತೆ ಮೇ 19 ರ ಗುರುವಾರ ಚಪ್ಪರ ಶಾಸ್ತ್ರ ಮುಗಿಸಿದ್ದ ಯುವಕನ ಪೋಷಕರು ಗುರುವಾರ ಸಂಜೆ ನಿಶ್ಚಿತಾರ್ಥಕ್ಕಾಗಿ ವಧು ಮತ್ತು ಅವರ ಪೋಷಕರನ್ನು ಕಾಯ್ದು ಕುಳಿತರೂ ಸಹ ಅವರು ಬರಲಿಲ್ಲ. ಮೇ 20ರ ಬೆಳಿಗ್ಗೆಯಾದರೂ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು. ಶುಕ್ರವಾರ ಬೆಳಿಗ್ಗೆಯೂ ಸಹ ಹೆಣ್ಣಿನ ಕಡೆಯವರು ಬಾರದಿದ್ದಾಗ ಗಾಬರಿಗೊಂಡಿದ್ದಾರೆ.
ಫೇಸ್‌ಬುಕ್ ಪ್ರೇಮಿಗಳ ಮದುವೆಗೆ ಮಧ್ಯವರ್ತಿಯಾಗಿದ್ದ ಸವಿತಾ ಹೆಸರಿನ ಮಹಿಳೆ ಮೇ 20 ರ ಶುಕ್ರವಾರ ಬೆಳಿಗ್ಗೆ ೮ ಗಂಟೆ ಸಮಯದಲ್ಲಿ ಯುವಕನ ಗ್ರಾಮದಲ್ಲಿ ದಿಢೀರ್ ಪ್ರತ್ಯಕ್ಷಗೊಂಡು ನಾನು ಹುಷಾರಿಲ್ಲದೆ ಆಸ್ಪತ್ರೆಯಲ್ಲಿದ್ದ ವೇಳೆ ಹುಡುಗಿಯ ಮಾವಂದಿರು ಹಾಗೂ ದೊಡ್ಡಪ್ಪ ಎಲ್ಲರೂ ಸೇರಿ ಮದುಮಗಳನ್ನು ಬಚ್ಚಿಟ್ಟಿದ್ದಾರೆ. ಆದ್ದರಿಂದ ಈ ಮದುವೆಯನ್ನು ಸಧ್ಯಕ್ಕೆ ಸ್ಥಗಿತಗೊಳಿಸಿ ಇನ್ನೊಂದು ವಾರದಲ್ಲಿ ಹುಡುಗಿಯನ್ನು ಕರೆತಂದು ಮದುವೆ ಮಾಡಿಸುತ್ತೇನೆಂದು ಮತ್ತೊಂದು ಕಥೆ ಕಟ್ಟಿದ್ದಾಳೆ. ಇವಳ ಮಾತಿನಿಂದ ಅನುಮಾನಗೊಂಡ ಯುವಕನ ಪೋಷಕರು ಆ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಠಾಣೆಗೆ ಕರೆದೊಯ್ಯುತ್ತಿದ್ದಂತೆ ಮತ್ತೊಂದು ಹೈಡ್ರಾಮ ನಡೆಸಿದ ವಂಚಕಿ ಮಹಿಳೆ ನಾನು ಅಮಾಯಕಳಾಗಿದ್ದು, ತಂದೆ ತಾಯಿಯಿಲ್ಲದ ಹುಡುಗಿಗೆ ಮದುವೆಯ ಮಾಡಿಸುವ ಜವಾಬ್ದಾರಿ ಹೊತ್ತಿದ್ದೇನೆ ಅಷ್ಟೆ. ನನ್ನನ್ನು ಏಕೆ ಪೊಲೀಸರಿಗೆ ಒಪ್ಪಿಸುತ್ತಿದ್ದೀರಿ ಎಂದು ಆರಂಭದಲ್ಲಿ ನಾಟಕವಾಡಿ, ಕೊನೆಗೆ ತನ್ನೆಲ್ಲ ತಪ್ಪುಗಳನ್ನು ಒಪ್ಪಿಕೊಂಡಿದ್ದಾಳೆ. ನಂತರ ಪೊಲೀಸರ ಮುಂದೆ ಪಡೆದ ಹಣವನ್ನೆಲ್ಲ ವಾಪಸ್ ಕೊಡುವ ಬಗ್ಗೆ ಮುಚ್ಚಳಿಕೆ ಬರೆದುಕೊಟ್ಟ ನಂತರ ಪ್ರಕರಣ ಇತ್ಯರ್ಥಗೊಳಿಸಲಾಗಿದೆ.