Advertisement

ವೃದ್ಧರ ಪತ್ತೆಗೆ ನೆರವಾದ ಫೇಸ್‌ಬುಕ್‌

11:58 AM Apr 26, 2017 | Team Udayavani |

ಬೆಂಗಳೂರು: ಕೇವಲ ಹರಟೆ, ವಾದ, ಪ್ರತಿ ವಾದಗಳಿಗೆ ವೇದಿಕೆಯಾಗಿದ್ದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಇದೀಗ ಕಾಣೆಯಾಗಿದ್ದ ವೃದ್ಧರೊಬ್ಬರ ಪತ್ತೆಗೆ ನೆರವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಗುಜರಾತ್‌ ಮೂಲದ ಮಹೇಂದ್ರ (65) ಪತ್ತೆಯಾದವರು.

Advertisement

ಮಗನ ಮನೆಯ ಗೃಹ ಪ್ರವೇಶಕ್ಕೆಂದು ಬೆಂಗಳೂರಿಗೆ ಬಂದಿದ್ದ ಮಹೇಂದ್ರ ಅವರು ಏ.23ರಂದು ಕಾಣೆಯಾಗಿದ್ದರು. ಈ ಬಗ್ಗೆ ಇವರ ಮಗನ ಸ್ನೇಹಿತರೊಬ್ಬರು ಫೇಸ್‌ಬುಕ್‌ನಲ್ಲಿ ಮಹೇಂದ್ರ ಅವರ ಫೋಟೋ ಪ್ರಕಟಿಸಿ ಪತ್ತೆಗೆ ಸಹಾಯ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಕಮ್ಯೂನಿಟಿ ಪೊಲೀಸಿಂಗ್‌ನ ಸದಸ್ಯ ವಿಕಾಸ್‌ ಬೆಳ್ಳಂದೂರು ಮತ್ತು ವೈಟ್‌ಫೀಲ್ಡ್‌ ಪೊಲೀಸರ ನೆರವಿನೊಂದಿಗೆ ಮಹೇಂದ್ರ ಪತ್ತೆಗೆ ಕಾರಣರಾಗಿದ್ದಾರೆ.

ಘಟನೆ ಏನು?
ಏ.23ರಂದು ಸಂಜೆ 6 ಗಂಟೆ ಸುಮಾರಿಗೆ ಮಹೇಂದ್ರ ಅವರು ತಮ್ಮ ಪತ್ನಿಯೊಂದಿಗೆ ಮನೆಯಿಂದ ವೈಟ್‌ಫೀಲ್ಡ್‌ನ ಬೋರ್‌ವೆಲ್‌ ರಸ್ತೆಯಲ್ಲಿರುವ ಹೇರ್‌ಸಲೂನ್‌ಗೆ ತೆರಳಿದ್ದರು. ಈ ವೇಳೆ ತರಕಾರಿ ತರಲು ಪತ್ನಿ ಪಕ್ಕದ ಅಂಗಡಿಗೆ ಹೋಗಿದ್ದರು. ಅಲ್ಲಿಂದ ಬರುವಷ್ಟರಲ್ಲಿ ಮಹೇಂದ್ರ ಸಲೂಲ್‌ ಶಾಪ್‌ನಿಂದ ಕಾಣೆಯಾಗಿದ್ದರು. ಪುತ್ರ ಹಿತೇಶ್‌ಗೆ ಕರೆ ಮಾಡಿ ಕಾಣೆಯಾದ ಬಗ್ಗೆ ಹೇಳಿದ್ದರು. ಬಳಿಕ ಅಕ್ಕ-ಪಕ್ಕ ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ.

ಮಾನಸಿಕ ಅಸ್ವಸ್ಥರಂತೆ ಕಾಣುವ ಮಹೇಂದ್ರ ಅವರಿಗೆ ಬೆಂಗಳೂರಿನ ಪರಿಚಯವಿಲ್ಲ. ಜತೆಗೆ ಕನ್ನಡ ಭಾಷೆ ಬಾರದ ಅವರು ನಡೆದುಕೊಂಡೆ ಸುಮಾರು 7-8 ಕಿ.ಮೀ ದೂರ ಕ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಮಹೇಂದ್ರ ಅವರಿಗೆ ವಾಹನವೊಂದು ಡಿಕ್ಕಿಹೊಡೆದು ಎಡಗೈ ಗಾಯಗೊಂಡು, ರಕ್ತ ಸುರಿಯುತ್ತಿತ್ತು.

ಈ ನೋವಿನಿಂದ ಬಳಲಿದ ಅವರು ಬೆಳ್ಳಂದೂರಿನ ಇಕೋಸ್ಪೇಸ್‌ ಬಳಿಯ ಆಟೋ ನಿಲ್ದಾಣದಲ್ಲಿ ರಾತ್ರಿ ಕಳೆದಿದ್ದಾರೆ. ಏ.24ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಆಟೋ ಚಾಲಕರೊಬ್ಬರು ಇವರನ್ನು ಕಂಡು ಬೆಳ್ಳಂದೂರು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಠಾಣೆಯ ಪೇದೆ ಕಮ್ಯೂನಿಟಿ ಪೊಲೀಸಿಂಗ್‌ ಸದಸ್ಯ ವಿಕಾಸ್‌ಗೆ ತಿಳಿಸಿದ್ದರು.

Advertisement

ಕೂಡಲೇ ಸ್ಥಳಕ್ಕೆ ಬಂದ ವಿಕಾಸ್‌, ಮಹೇಂದ್ರ ಅವರನ್ನು ವಿಚಾರಿಸಿದಾಗ ಮಹೇಂದ್ರ ಮೊಬೈಲ್‌ ಸಂಖ್ಯೆ ತಿಳಿಸಿದ್ದಾರೆ. ಆದರೆ, ಅದು ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ಸ್ಥಳೀಯ ಎನ್‌ಜಿಓಗೆ ಅವರನ್ನು ದಾಖಲಿಸಲಾಯಿತು ಎಂದು ಕಮ್ಯೂನಿಟಿ ಪೊಲೀಸಿಂಗ್‌ ಸದಸ್ಯ ವಿಕಾಸ್‌ ತಿಳಿಸಿದ್ದಾರೆ.

ಫೇಸ್‌ಬುಕ್‌ಲ್ಲಿ ಪ್ರಕಟ
ಮತ್ತೂಂದೆಡೆ ಖಾಸಗಿ ಕಂಪನಿಯ ಉದ್ಯೋಗಿ ಹಿತೇಶ್‌ ತಂದೆ ಮಹೇಂದ್ರ ನಾಪತ್ತೆಯಾದ ಬಗ್ಗೆ ವೈಟ್‌ಫೀಲ್ಡ್‌ ಠಾಣೆಗೆ ದೂರು ನೀಡಿದ್ದರು. ಅಲ್ಲದೇ ಇವರ ಸ್ನೇಹಿತರೊಬ್ಬರು ಫೇಸ್‌ಬುಕ್‌ನಲ್ಲಿ ಮಹೇಂದ್ರ ಅವರ ಫೋಟೋ ಹಾಕಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಮೊಬೈಲ್‌ ಸಂಖ್ಯೆ ಪ್ರಕಟಿಸಿದ್ದರು.

ಏ.25ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಇದನ್ನು ಗಮನಿಸಿದ ವಿಕಾಸ್‌, ಹಿತೇಶ್‌ಗೆ ಕರೆ ಮಾಡಿ ತಂದೆ ಪತ್ತೆಯಾಗಿರುವ ಕುರಿತು ಮಾಹಿತಿ ನೀಡಿ ವೈಟ್‌ಫೀಲ್ಡ್‌ ಠಾಣೆಗೆ ಕರೆಸಿಕೊಂಡು ಪೊಲೀಸರ ಸಮ್ಮುಖದಲ್ಲಿ ಮಹೇಂದ್ರ ಅವರನ್ನು ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next