ಜನಪ್ರಿಯ ಸೋಷಿಯಲ್ ಮೀಡಿಯಾ ತಾಣ ಫೇಸ್‍ಬುಕ್ ತನ್ನ ಗ್ರಾಹಕರ ಸಂಖ್ಯೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಂದು ಹೊಸ ಆ್ಯಪ್ ಪರಿಚಯಿಸುತ್ತಿದೆ. ಇದಕ್ಕೆ ಹಾಟ್‍ಲೈನ್ ಎಂದು ಹೆಸರಿಟ್ಟಿರುವ ಫೇಸ್‍ಬುಕ್ ಬುಧವಾರದಿಂದ ಇದರ ಪ್ರಾಯೋಗಿಕ ಆ್ಯಪ್ ಅಮೆರಿಕದಲ್ಲಿ ಲಾಂಚ್ ಮಾಡಿದೆ.
ಏನಿದು ಹಾಟ್‍ಲೈನ್ ?
ಹಾಟ್‍ಲೈನ್ ಮುಖ್ಯವಾಗಿ ಪ್ರಶ್ನೋತ್ತರ ಮಾದರಿ ಚರ್ಚೆ ಹಾಗೂ ಸಂಭಾಷಣೆಗಾಗಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಬರವಣೆಗೆ ಇಲ್ಲವೆ ಆಡಿಯೋ ಹಾಗೂ ವಿಡಿಯೋ ಮೂಲಕ ಪ್ರಶ್ನೆಗಳನ್ನು ಕೇಳುವ ಅವಕಾಶ ಇರುತ್ತದೆ. ನಿಮ್ಮ ಪ್ರಶ್ನೆಗಳಿಗೆ ಪರಿಣಿತರಿಂದ ಉತ್ತರ ದೊರೆಯಲಿದೆ. ಉದಾಹರಣೆಗೆ ಯಾವುದಾದರೂ ಬ್ಯುಸಿನೆಸ್ ಕುರಿತು ನಿಮಗೆ ಮಾಹಿತಿ ಬೇಕಾಗಿದ್ದರೆ ಅಥವಾ ಗೊಂದಲಗಳಿದ್ದರೆ ನೀವು ಹಾಟ್‍ಲೈನ್‍ನಲ್ಲಿ ಪ್ರಶ್ನಿಸಬಹುದು. ಅಲ್ಲಿ ನಿಮಗೆ ಅಗತ್ಯವಾದ ಉತ್ತರ ಸುಲಭವಾಗಿ ದೊರೆಯಲಿದೆ.
ಹಾಟ್‍ಲೈನ್‍ನಲ್ಲಿ ಲೈವ್ ವಿಡಿಯೋ ಹೋಸ್ಟ್ ಗೂ ಅವಕಾಶ ಇದೆ. ಇದರಲ್ಲಿ ನಿಮಗೆ ಬೇಕಾದವರ ಜೊತೆ ಚರ್ಚೆ ನಡೆಸಬಹುದು.
ಕ್ಲಬ್ ಹೌಸ್ ಹಾಗೂ ಇನ್‍ಸ್ಟಾಗ್ರಾಂ ಲೈವ್ ರೀತಿಯಲ್ಲಿಯೇ ಹಾಟ್‍ಲೈನ್ ರೂಪಗೊಂಡಿದೆಯಾದರೂ ಇವುಗಳಿಗಿಂತ ಕೊಂಚ ಭಿನ್ನವಾಗಿದೆ ಎಂದು ಫೇಸ್‍ಬುಕ್ ಹೇಳಿಕೊಂಡಿದೆ.
ಹಾಟ್‍ಲೈನ್‍ನಲ್ಲಿ ಆಯೋಜಿಸಲಾಗುವ ಚರ್ಚೆಗಳನ್ನು ಸದ್ಯಕ್ಕೆ ಫೇಸ್‍ಬುಕ್ ಸಿಬ್ಬಂದಿಗಳು ನಿಯಂತ್ರಿಸಲಿದ್ದಾರೆ. ಅಶ್ಲೀಲ ಕಾಮೆಂಟ್, ಆಡಿಯೋ, ವಿಡಿಯೋಗಳನ್ನು ಡಿಲೀಟ್ ಮಾಡುವ ಅವಕಾಶ ಲೈವ್ ಹೋಸ್ಟ್ ಮಾಡುವರಿಗೆ ನೀಡಲಾಗಿದೆ.
ಕಳೆದ ವರ್ಷವೇ ಫೇಸ್‍ಬುಕ್ ಹಾಟ್‍ಲೈನ್ ಮೇಲೆ ಕಾರ್ಯ ಶುರು ಮಾಡಿತ್ತು. ಇದೀಗ ಪ್ರಾಯೋಗಿಕ ಬಳಕೆಗೆ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಬಳಕೆದಾರರಿಗೂ ಸಿಗಲಿದೆ ಎಂದು ತಿಳಿಸಿದೆ.