ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬೆನ್ನಲ್ಲೇ ಹಲವಾರು ದೇಶಗಳು ಎಚ್ಚರಿಕೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ ನಂತರ ಫೇಸ್ ಬುಕ್ ಕೂಡಾ ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ನಿಷೇಧಿಸಿದ್ದು, ತಮ್ಮ ಫ್ಲ್ಯಾಟ್ ಫಾರಂನಲ್ಲಿ ಉಗ್ರಗಾಮಿಗಳನ್ನು ಬೆಂಬಲಿಸುವ ಎಲ್ಲಾ ವಿಧದ ಕಂಟೆಂಟ್ ಗಳನ್ನು ತೆಗೆದು ಹಾಕಲಾಗುವುದು ಮತ್ತು ಫೇಸ್ ಬುಕ್ ಖಾತೆಯನ್ನು ರದ್ದುಗೊಳಿಸಲಾಗುವುದು ಎಂದು ಮಂಗಳವಾರ(ಆಗಸ್ಟ್ 17) ಘೋಷಿಸಿದೆ.
ಇದನ್ನೂ ಓದಿ:ಅಫ್ಘಾನ್ ನಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಬದ್ಧವಾಗಿದೆ: ಪ್ರಹ್ಲಾದ ಜೋಶಿ
ತಾಲಿಬಾನ್ ಅನ್ನು ಉಗ್ರಗಾಮಿ ಸಂಘಟನೆ ಎಂದು ಪರಿಗಣಿಸುವುದಾಗಿ ತಿಳಿಸಿರುವ ಫೇಸ್ ಬುಕ್, ಸಂಘಟನೆಗೆ ಸಂಬಂಧಪಟ್ಟ ಎಲ್ಲಾ ಬಗೆಯ ಮಾಹಿತಿ, ಕಂಟೆಂಟ್ ಗಳನ್ನು ತಜ್ಞರ ತಂಡ ತೆಗೆದುಹಾಕಲಿದೆ ಎಂದು ತಿಳಿಸಿದೆ.
ಕಳೆದ ಕೆಲವು ವರ್ಷಗಳಿಂದ ತಾಲಿಬಾನ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ಉಪಯೋಗಿಸಿಕೊಂಡು ತಮ್ಮ ಸಂದೇಶಗಳನ್ನು ಪ್ರಸಾರ ಮಾಡುತ್ತಿತ್ತು ಎಂದು ಹೇಳಿದೆ. ತಾಲಿಬಾನ್ ಬಂಡುಕೋರರು ಕ್ಷಿಪ್ರವಾಗಿ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರ ಬಿಕ್ಕಟ್ಟಿಗೆ ಕಾರಣವಾಗಿತ್ತು. ತಾಲಿಬಾನ್ ಅನ್ನು ಉಗ್ರಗಾಮಿ ಸಂಘಟನೆ ಎಂದು ಅಮೆರಿಕ ಘೋಷಿಸಿದೆ. ನಾವು ಕೂಡಾ ಅಪಾಯಕಾರಿ ಸಂಘಟನೆಯ ನಿಮಯಗಳನ್ನು ಹರಡದಂತೆ ತಡೆಗಟ್ಟಲು ನಿರ್ಬಂಧ ವಿಧಿಸಿರುವುದಾಗಿ ಫೇಸ್ ಬುಕ್ ಸಂಸ್ಥೆ ತಿಳಿಸಿದೆ.
ನಮ್ಮಲ್ಲಿಯೂ ಅಫ್ಘಾನಿಸ್ತಾನದ ಪರಿಣತರ ತಂಡವಿದ್ದು, ಅವರು ಅಫ್ಘಾನ್ ನ ಡಾರಿ ಮತ್ತು ಪಾಸ್ಟೋ ಭಾಷೆಯ ಬಗ್ಗೆ ಅನುಭವ ಹೊಂದಿದ್ದು, ಸ್ಥಳೀಯ ಭಾಷೆಯ ಬಗ್ಗೆ ಅವರ ನೆರವನ್ನು ಪಡೆದು ಫೇಸ್ ಬುಕ್ ನಲ್ಲಿರುವ ತಾಲಿಬಾನ್ ಉಗ್ರಗಾಮಿ ಸಂಘಟನೆಯ ಕಂಟೆಂಟ್ ಗಳನ್ನು ತೆಗೆದುಹಾಕಲಾಗುವುದು ಎಂದು ಫೇಸ್ ಬುಕ್ ಸಂಸ್ಥೆ ಮಾಹಿತಿ ನೀಡಿದೆ.