Advertisement

ಚಿಂತಾಮಣಿಯಲ್ಲಿ ಕಂಡ ಮುಖ

07:30 AM Apr 01, 2018 | Team Udayavani |

ತನ್ನದೇ ನುಡಿ-ನುಡಿಗಟ್ಟು ಪಡೆಯಬೇಕೆನ್ನುವ ಹಂಬಲ-ಕವಿ ಗೋಪಾಲಕೃಷ್ಣ ಅಡಿಗರಿಗೆ. ನನ್ನ ನುಡಿಯೊಳೇ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ. ಇಷ್ಟು ತೀವ್ರವಾದ ಹಂಬಲವು ತಾಂತ್ರಿಕ ಎಚ್ಚರವಾಗಿ ಬೆಳೆಯಲೇಬೇಕು. ಅಂದರೆ ತಾನು ಬರೆಯುತ್ತಿರುವ ಕಾವ್ಯಮಾರ್ಗವು ಅದರಲ್ಲಿ ಬರೆಯುತ್ತಿರುವಾಗಲೇ ಒಳಗಿನಿಂದ ಅಸಂತೃಪ್ತಿಯನ್ನು ಉಂಟುಮಾಡುತ್ತಲೇ ಇರುತ್ತದೆ. ಈ ಅಸಂತೃಪ್ತಿಯೇ ಹೊಸಹಾದಿಯನ್ನು ಹುಡುಕುವ ಪ್ರಯತ್ನವಾಗಿ ಬೆಳೆಯುತ್ತದೆ. ಅಡಿಗರ ಪ್ರಸಿದ್ಧವಾದ ಮೋಹನ ಮುರಲಿಯಲ್ಲಿಯೇ ಇದರ ಹೊಳಹು ಇದೆ. ಆ ಕವಿತೆಯಲ್ಲಿ ಕೊಳಲಿನ ಮೋಹಕವಾದ ಕರೆ ಮಾತ್ರ ಯಾರಿಗೂ ಕೇಳಿಸಿಲ್ಲ, ಕೇಳಿಸಿತೇನು? ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?- ಎನ್ನುವ ಪ್ರಶ್ನೆ; ಜಿಜ್ಞಾಸೆ ಇದೆ. ಏಕೆಂದರೆ, ಪ್ರಾಣವೇ ವಿವಶವಾದಂತಿರುವ ಇಲ್ಲಿನ ಚಡಪಡಿಕೆಯನ್ನು ನೋಡಿದರೆ ಇದಕ್ಕೆ ಕಾರಣವಾಗಿ ನಿವಾರಿಸಲಾಗದ ತೀವ್ರ ಸೆಳೆತವೊಂದನ್ನು ಉಂಟುಮಾಡುವ ಅತೀತದ ಕರೆಯೊಂದನ್ನು ಊಹಿಸಬಹುದು. ಅದೂ ಅನಿರೀಕ್ಷಿತವಾಗಿ ಎಂಬಂತೆ! ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು? ಅನಿರೀಕ್ಷಿತವಾದುದರ ಸೆಳೆತ ತೀವ್ರವಾದದ್ದು. ಈ ಕವಿತೆ, ರಮ್ಯ ಮಾರ್ಗದ ಎಲ್ಲ ಸರಕುಗಳನ್ನೂ ಉಪಯೋಗಿಸಿಕೊಂಡೇ ಪರಿಚಿತ ಏಕತಾನತೆಯ ಆಳದ ಬೇಸರವೇ ಹೊಸ ಕರೆಗೆ ಓಗೊಡುವ ಕಿವಿಯ ಸೂಕ್ಷ್ಮವಾಗಿ, ಇರುವುದೆಲ್ಲವ ಬಿಟ್ಟು ಹೋಗಬಲ್ಲ ತೀವ್ರ ತುಡಿತವೂ ಆಗಿ ಮಾರ್ಪಡುವುದನ್ನು ಹೇಳುತ್ತದೆ. ಈ ತುಡಿತವು ಎಷ್ಟು ತೀವ್ರವೆಂದರೆ, ಮುಂದಿನ ಹಂತದಲ್ಲಿ , ಏಕತಾನತೆಯ ರಮ್ಯ ವರ್ಣನೆ ಕೂಡ- ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಇತ್ಯಾದಿ, ಕವಿತೆಗೆ ವಜ್ಯìವಾಗುತ್ತದೆ. ಆದುದರಿಂದಲೇ- “ನಡೆದುಬಂದ ದಾರಿಯ ಕಡೆಗೆ ತಿರುಗಿಸಬೇಡ ಕಣ್ಣ-ಹೊರಳಿಸಬೇಡ’ ಅಂದರೆ “ಮೋಹನ ಮುರಲಿ’ಯಲ್ಲಿ ಕೇಳಿಬಂದಂತಿರುವ ಕರೆ ಹೊಸಕಾವ್ಯ ಮಾರ್ಗದ ಕುರಿತಾದ ಅಸ್ಪಷ್ಟವಾದರೂ ತೀವ್ರವಾದ ಕರೆಯೇ ಆಗಿದೆ!

Advertisement

ತನ್ನದೇ ನುಡಿಗಟ್ಟು ಪಡೆಯಬೇಕೆನ್ನುವ ಅಭೀಪ್ಸೆ ಕಾವ್ಯವನ್ನು ಅಂತರ್ಮುಖಗೊಳಿಸುವುದು ಅನಿವಾರ್ಯವೆಂದು ತೋರುತ್ತದೆ. ಬೇಂದ್ರೆಯವರು ಮಿಸ್ಟಿಕಲ್‌ ಒಲವಿನ ಕವಿಯಾದುದರಿಂದ ಮಾತು ಮಂತ್ರವಾಗಬೇಕೆನ್ನುತ್ತಿದ್ದರು. “”ಇದು ಮಂತ್ರ-ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ”- ಇದು ಬೇಂದ್ರೆ ನುಡಿ. ಅಡಿಗರು ಹೆಚ್ಚು ಆಧುನಿಕರಾದುದರಿಂದ ಮಾತು ಮನಸ್ಸಿನ ಪ್ರತಿರೂಪವಾಗಬೇಕೆನ್ನುತ್ತಿದ್ದರು. ಮಾತು ಮನಸ್ಸಿನ ಪ್ರತಿಮೆ! ಈ ಪ್ರತಿಸೃಷ್ಟಿ ; ಪ್ರತಿರೂಪ ನಿರ್ಮಿತಿ ಅಡಿಗರ ಒಂದೇ ಕಾಳಜಿಯಾಗಿತ್ತು. ಪ್ರತಿಸೃಷ್ಟಿಯು ಅತಿಸೂಕ್ಷ್ಮವಾದ ತಾಂತ್ರಿಕ ಕೌಶಲವನ್ನು ಬಯಸುವುದರಿಂದ ಕಾವ್ಯಕ್ರಿಯೆ ಎಂದರೆ-ಹೊನ್ನ ಕಾಯಿಸಿ ಹಿಡಿದು ಬಡಿದಷ್ಟ ದೇವತಾವಿಗ್ರಹಕ್ಕೊಗಿಸುವ ಅಸಲು ಕಸುಬು.

ತುಸು ಆಶ್ಚರ್ಯವಾಗುತ್ತದೆ- ಮಾತು, ಮನಸ್ಸುಗಳ ಸಂಬಂಧದ ಕುರಿತಂತೆ ಚಿಂತನೆ ಉಪನಿಷತ್‌ಕಾಲದಷ್ಟು ಪ್ರಾಚೀನವಾದದ್ದು. ವಾಲ್ಮೀ ಮನಸಿ ಪ್ರತಿಷ್ಠಿತಾ-ಮನೋ ಮೇ ವಾಚಿ ಪ್ರತಿಷ್ಠಿತಂ ಎಂಬುದು ಶಾಂತಿಪಾಠದ ಮಾತು. ಮಾತಿನ ಬೇರೆ ಮನದಲ್ಲಿ, ಮನದ ಬೇರು ಮಾತಿನಲ್ಲಿ ಇವೆ ಎಂಬುದು ಈ ಮಾತಿನ ಆಶಯ. ಅಲ್ಲದೆ, ಇವೆರಡೂ- ಮಾತು; ಮನ-ಪರಸ್ಪರವಾಗಿವೆ, ಪರಸ್ಪರವಾಗಿರಲಿ ಎಂದು ಕೂಡ ಆಶಂಸೆ. ಇವೆರಡೂ ಪರಸ್ಪರ ಪ್ರಭಾವಿಸಬಲ್ಲವಾಗಿ, ಹಾಸುಹೊಕ್ಕಿನಂತಿವೆಯಾಗಿ ಒಂದು ಇನ್ನೊಂದರ ಪ್ರತಿರೂಪವಾಗಿದೆ. ಈ ಅರ್ಥದಲ್ಲಿ ನಾವು ಸಾಮಾನ್ಯವಾಗಿ ಬಳಸುವ “ವಚನ ಬದ್ಧತೆ’ ಎನ್ನುವ ನುಡಿ, ಸಾಮಾಜಿಕ ವ್ಯವಹಾರದಲ್ಲಿ ಹೇಳಿದ ಮಾತು ಉಳಿಸಿಕೊಳ್ಳಬೇಕೆನ್ನುವ ವ್ಯಾವಹಾರಿಕ ನಯದ ಅರ್ಥದಲ್ಲಿ ಮಾತ್ರವಲ್ಲ, “ವಚನ ಬದ್ಧತೆ’ ಎನ್ನುವುದು ಮಾತು-ಮನಗಳ ಪರಸ್ಪರ ಪ್ರತಿರೂಪಗಳನ್ನು ಎಲ್ಲೂ ಮುಕ್ಕಾಗಿಸದೆ ಕಾಪಿಟ್ಟುಕೊಳ್ಳಬೇಕೆನ್ನುವ ಎಚ್ಚರದ ನುಡಿಗಟ್ಟಾಗಿದೆ. 12ನೆಯ ಶತಮಾನವನ್ನು “ವಚನ ಯುಗ’ ಎನ್ನುತ್ತೇವೆ. ಇಲ್ಲಿನ “ವಚನ’ ಎನ್ನುವ ಮಾತಿಗೆ ಮಾತಿನ ಒಂದು ಪ್ರಕಾರ ಎನ್ನುವ ಅರ್ಥಕ್ಕಿಂತ ಮನಸ್ಸಿನ ಪ್ರತಿರೂಪ-ಪ್ರತಿಮೆ ಎನ್ನುವ ಅರ್ಥವೇ ಉಚಿತವಾಗಿ ತೋರುತ್ತದೆ. ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ ಎಂದು ಬಸವಣ್ಣನವರ ಬಹು ಅರ್ಥಪೂರ್ಣವಾದ ಸಾಲುಗಳೇ ಈ ಎಲ್ಲವನ್ನೂ ಹೇಳುತ್ತವೆ! ಅಡಿಗರ “ನನ್ನ ನುಡಿ’ಯನ್ನು ಕಂಡುಕೊಳ್ಳುವ ಯತ್ನವೆಂದರೆ ಮನಕ್ಕೆ ನಾಚದ ವಚನವನ್ನು ರೂಪಿಸಿಕೊಳ್ಳುವುದೇ ಆಗಿದೆ.

“ಭಾಷೆ’ ಎನ್ನುವ ವಿಸ್ಮಯ ಮನುಷ್ಯ ಜೀವದ ವಿಕಾಸದಲ್ಲಿ ಸಂವಹನದ ಉದ್ದೇಶಕ್ಕಾಗಿ ಸಂಭವಿಸಿದ ವಿದ್ಯಮಾನ ಎನ್ನುವುದು ನಾವೆಲ್ಲರೂ ಸಾಮಾನ್ಯವಾಗಿ ತಿಳಿದಿರುವುದೇ. ಭಾಷೆ ಎನ್ನುವುದು ಹೇಗೆ ಸಂಭವಿಸಿತೆನ್ನುವುದಕ್ಕೆ ಸರ್ವಸಮ್ಮತವಾದ ಸಿದ್ಧಾಂತವೊಂದು ಇನ್ನೂ ಒಡಮೂಡಿಲ್ಲ ಎಂದು ಓದಿದ್ದೇನೆ. ಅದಿರಲಿ. ಆದರೆ Stcphen Jay Gould  ಎನ್ನುವ ಅಮೆರಿಕನ್‌ ವಿಜ್ಞಾನಿ, ಭಾಷೆ ಎನ್ನುವುದು ಮೂಲತಃ ಸಂವಹನಕ್ಕಾಗಿ ಮೂಡಿಬಂದುದಲ್ಲ ಎನ್ನುತ್ತಾನೆ. ವಿಕಾಸದ ದಾರಿಯಲ್ಲಿ ಮನುಷ್ಯ ಸಾಗಿಬಂದಿದ್ದಾನೆ ಎನ್ನುವುದನ್ನೊಪ್ಪುವ ಪ್ರಮುಖ ವಿಜ್ಞಾನಿ ಈತ. ಭಾಷೆಯು ಚಿಂತನೆ (Thinking)ಯಿಂದ ಹುಟ್ಟಿಕೊಂಡ ವಿದ್ಯಮಾನ ಎನ್ನುತ್ತಾನೆ. ಚಿಂತನೆಯಾದರೋ ಹೊರಲೋಕವನ್ನು ತಮ್ಮ ಮನಸ್ಸಿನಲ್ಲಿ ಪ್ರತಿನಿಧಿಸುವುದಕ್ಕಾಗಿ (Represent) ಮೂಡಿಬಂದದ್ದು. ಕಂಡ ದೃಶ್ಯವೊಂದರ ಚಿತ್ರವನ್ನು ಬರೆದರೆ, ದೃಶ್ಯವನ್ನೂ ಅದರ ಚಿತ್ರವನ್ನೂ ಬರೆದ ತಮ್ಮನ್ನೂ  Re-present  ಮಾಡಿಕೊಳ್ಳಲಾಗುವಂತೆ, ಇಂಥ ಪ್ರತಿನಿಧೀಕರಣಕ್ಕಾಗಿ ಮೂಡಿಬಂದ ವಿದ್ಯಮಾನ-ಚಿಂತನೆ ಎಂಬುದು! ಅಂದರೆ ಲೋಕವನ್ನು ತಮ್ಮಲ್ಲಿ ಅಧಿಕೃತಗೊಳಿಸಿ ಆ ಮೂಲಕ ತಾವೂ ಅಧಿಕೃತಗೊಳ್ಳುವ ವಿಧಾನ. ಈ ವಿದ್ಯಮಾನ ಸಂವಹನದ ದಾರಿಯಲ್ಲಿ ಬೆಳೆಯಿತು; ಬೆಳೆದು ಭಾಷೆಯಾಯಿತು! ಮೂಲ ಉದ್ದೇಶ ಬೇರೆಯೇ ಇತ್ತು. ಆ ಉದ್ದೇಶವೆಂದರೆ, ತನ್ನಲ್ಲಿಯೇ ತನ್ನನ್ನು ಇನ್ನೊಮ್ಮೆ ಕಂಡುಕೊಳ್ಳುವ ಸ್ವಾಭಿಮುಖ ಅಭಿವ್ಯಕ್ತಿ. ಸ್ವಾಭಿವ್ಯಕ್ತಿಯ ಈ ಉದ್ದೇಶ ಸಹಜವಾಗಿ ಸಂವಹನದ ದಾರಿಯಲ್ಲಿ ಬೆಳೆಯಿತು ಎಂದು ವಾದಿಸುತ್ತಾನೆ Gould. ಈ ಸಿದ್ಧಾಂತವನ್ನು ಎಲ್ಲರೂ ಒಪ್ಪಿರುವರು ಎಂದೇನಿಲ್ಲ. ಆ ಮಾತು ಬೇರೆ. ಆದರೆ ಒಂದು ಉದ್ದೇಶ ಅನೇಕ ಮುಖಗಳಲ್ಲಿ ಬದಲಾಗಿ ಬೆಳೆಯಬಹುದಾದಂತೆ, ಬೆಳೆದಂತೆ ಮೂಲ ಉದ್ದೇಶದ ಕಡೆಗೆ ಮತ್ತೆ ಮುಖ ಮಾಡುವುದು ಕೂಡ ಅಷ್ಟೇ ಸಹಜವಾಗಿದೆ. “ನನ್ನ ನುಡಿ’ಯನ್ನು ಪಡೆಯಬೇಕೆನ್ನುವ ಹಂಬಲ ತನ್ನಲ್ಲಿ ತಾನು ಅಧಿಕೃತವಾಗಬೇಕೆನ್ನುವ ಹಂಬಲವೇ ಆಗಿದೆ. ಇದಕ್ಕಾಗಿ ಯಾವ ತ್ಯಾಗವೂ ದೊಡ್ಡದಲ್ಲ ಎಂದು ತಿಳಿದ ಹಂಬಲವಾಗಿದೆ.

ನನ್ನ ನುಡಿಯನ್ನು ನಾನು ಪಡೆಯಬೇಕೆನ್ನುವುದು, ನನ್ನ ಸಹೃದಯರನ್ನೂ ನಾನೇ ಹುಡುಕಿಕೊಳ್ಳಬೇಕಾಗಿದೆ ಎನ್ನುವುದೂ- ಎರಡೂ ಹತ್ತಿರ ಇವೆ. ಕಾವ್ಯವು ಸಾರ್ಥಕವಾಗುವುದು ಸಹೃದಯರಲ್ಲಿ ಎಂದು ಬೇಂದ್ರೆ ಹೇಳಿದರೆ ತನ್ನ ಸಹೃದಯರನ್ನು ಆ ಕಾವ್ಯವೇ ರೂಪಿಸಿಕೊಂಡು ಸಾರ್ಥಕವಾಗುವುದು ಎಂದು ಅಡಿಗರು ಹೇಳಿದ್ದರು. ತನಗೆ ಅನ್ನಿಸಿದ್ದು ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ತನ್ನಷ್ಟೇ ತೀವ್ರವಾಗಿ ಹಾಗೆ ಅನ್ನಿಸುವ ಇನ್ನೊಂದಾದರೂ ಜೀವ ಇದ್ದೇ ಇರುತ್ತದೆ ಎಂಬ ತೀವ್ರ ಶ್ರದ್ಧೆ ಇದು. ಇದು ಭವಭೂತಿಯ ಶ್ರದ್ಧೆ ! ಭೂಮಿ ವಿಶಾಲವಾಗಿದೆ; ಕಾಲ ಅನಂತವಾಗಿದೆ. ಆದುದರಿಂದ ನನ್ನದೇ ಮನೋಧರ್ಮದ ಇನ್ನೊಂದು ಮನಸ್ಸು ಎಂದಾದರೂ ಎಲ್ಲಿಯಾದರೂ ಹುಟ್ಟಿ ಬಂದೀತು ಎನ್ನುತ್ತಾನೆ ಭವಭೂತಿ ! ಅಂಥ ಸಮಾನಧರ್ಮಿ, ಭವಭೂತಿಗೆ ಪ್ರಾಯಃ ಸಿಕ್ಕಿಲ್ಲ. 

Advertisement

ಸಿಗುತ್ತಿದ್ದರೆ, ಕಾಲ ಅಖಂಡವಾಗಿ ತನ್ನನ್ನು ಆವರಿಸಿದಂತೆ, ಭೂಗೋಲವೇ ದಿಗಂತದಂಚಿಗೆ ತನ್ನನ್ನೆತ್ತಿ ತನ್ನೆರಡು ಬದಿಗಳನ್ನೂ ತೆರೆದು ತೋರಿಸಿದಂತೆ, ಮತ್ತು ಈ ಅನುಭವದಿಂದ ತಾನೆ ಇಡಿಯಾದಂತೆ ಭವಭೂತಿಗೆ ಅನುಭವವಾಗುತ್ತಿತ್ತು ಎನಿಸುತ್ತದೆ. ಭವಭೂತಿಯ ಮಾತುಗಳಲ್ಲೇ ಹುದುಗಿದೆ ಈ ಗುಟ್ಟು ! ಅಡಿಗರು, ಚಿಂತಾಮಣಿಯಲ್ಲಿ ಕಂಡಮುಖ  ಎಂಬ ತಮ್ಮ ಕವಿತೆಯಲ್ಲಿ ತಮ್ಮ ಸಮಾನಧರ್ಮಿಯನ್ನು ಅನಿರೀಕ್ಷಿತವಾಗಿ ಕಂಡುಕೊಂಡ ಆಳದ ಅನುಭವವನ್ನು ಹೇಳಿದ್ದಾರೆ. ಭವಭೂತಿಗೆ ಆಗಿರಬಹುದಾಗಿದ್ದ ಅನುಭವವದು! ಪದ್ಯ ಹೀಗಿದೆ: ಹೀಗೆ ತೊಡಗುತ್ತದೆ:

ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣ ಮಗ್ನ
ಮನಸ್ಸು , ಮನಸ್ಸಿನ ಶೇ. ತೊಂಬತ್ತು ಪಾಲು; ಕಣ್ಣು
ಹಾಯುತ್ತಿತ್ತು ಮುಖದಿಂದ ಮುಖಕ್ಕೆ ; ಹುಡುಕುತ್ತಿತ್ತು
ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ
ಅಂತರಂಗದ ಅನಂಗಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ ,
ಬಡಿತಕ್ಕೆ ತಕ್ಕ ಪ್ರತಿಬಡಿತ ಕೊಡುವ ಇನ್ನೊಂದು
ಸಮಹೃದಯದ ನಿಗೂಢ ಸಹಕಂಪನದ ರೋಮಾಂಚ
ಪ್ರತಿಫ‌ಲಿಸಬಲ್ಲೊಂದು ಮುಖವ ಕಂಡಂತೆ ಕವಿ ಹೊರಮುಖವಾಗಿದ್ದಾನೆ. ಸಭಾಂಗಣದಲ್ಲಿ ಭಾಷಣಮಗ್ನ. ಆದರೆ, ಭಾಷಣದ ನಡುವೆಯೇ ಅಂತರಂಗದ ಶೇಕಡಾ ಹತ್ತು-ಇದು ಒಳಮುಖ; ಸುಪ್ತಮನ; ಇದು ಉತ್ಕಟ- ಇನ್ನೇನನ್ನೋ ಹುಡುಕುತ್ತಿದೆ! ತನ್ನ ಮಾತು ಯಾರನ್ನು ಮುಟ್ಟಿತು ಎಂಬುದನ್ನಲ್ಲ. ಕೇಳುಗರನ್ನಲ್ಲ. ಕೇಳ್ಮೆಯಲ್ಲಿ ಮಗ್ನರಾಗಿಯೂ ತನ್ನಂತೆ ಇನ್ನೇನನ್ನೋ ಹುಡುಕುತ್ತಿರುವ ಒಂದು ಮುಖವನ್ನು ಹುಡುಕುತ್ತಿದೆ! ಈ ಹುಡುಕಾಟವೇ ಅರ್ಥಪೂರ್ಣ. ಭಾಷಣವೂ ಅಲ್ಲ. ಭಾಷಣದ ಕೇಳ್ಮೆಯೂ ಅಲ್ಲ. ಅಂದರೆ, ಇಲ್ಲಿ ನಡೆಯುತ್ತಿರುವುದು ಭಾಷೆಯ ಮುಖ್ಯಕಾರ್ಯವಾದ ಸಂವಹನವಲ್ಲ. ಆ ಸಂವಹನವೆಲ್ಲ ಹೊರಹೊರಗಿನದು. ಇದು ಅಂತರಂಗದ ಸಮಶ್ರುತಿಯ ಕೇಳ್ಮೆ , ಹಾಗೆ ಸಮಾನಶ್ರುತಿಗೊಂಡವರು ಇದ್ದಾರೆಯೇ ಎಂಬ ಹುಡುಕಾಟ. ಇದ್ದರೆ ಅಂಥ ಸಮಶ್ರುತಿಯ ಕೇಳ್ಮೆಯೇ ಮುಖ್ಯ. ಭಾಷಣವಲ್ಲ. ಯಾಕೋ ಬೇಂದ್ರೆಯವರ ಕಲ್ಪವೃಕ್ಷ ವೃಂದಾವನಂಗಳಲಿ ಎಂಬ ಕವಿತೆ ನೆನಪಾಗುತ್ತದೆ. ಆ ಕವಿತೆಯಲ್ಲಿ ಈ ಕೆಳಗಿನ ಸಾಲುಗಳಿವೆ.

ಅಲ್ಲಿ ಎಲ್ಲರಿಗೂ ನಾಲ್ಕು ಕೈಗಳೇ
ಮಾಟ ತಪ್ಪದಿಹವು
ಎರಡು ಒಪ್ಪಿಸಿವೆ ಕುಶಲಕಲೆಗಳಲಿ
ಎರಡು ಅಪ್ಪಿ ಇಹವು
ಎಲ್ಲರಲಿ ತಲ್ಲೀನರಾಗಲೋ
ಜೀವ ಒಪ್ಪಿಸಿಹವು
ಅಲ್ಲಿ ಕುಶಲಕಲೆಗಳಲಿ ಎರಡು ಕೈಗಳು ಒಪ್ಪಿಸಿರುವಂತೆಯೇ ಮತ್ತೆರಡು ಕೈಗಳು ಇನ್ನೊಂದು ಜೀವವನ್ನು ತಬ್ಬಿಕೊಂಡಿವೆ. ಕುಶಲಕಲೆಗೂ ಅಪ್ಪುಗೆಗೂ ಯಾವುದಕ್ಕೂ ಭಂಗ ಬಂದಿಲ್ಲ. ಏಕಕಾಲದಲ್ಲಿ ಎರಡೂ ಕ್ರಿಯೆಗಳು! ಯಾವುದು ನಿಜ? ಎರಡೂ ನಿಜ. ಕುಶಲಕಲೆಯು ಆಯ್ಕೆಯ ಸಂದರ್ಭ ಅಪ್ಪುಗೆಯು ಅಂತರಂಗ ಜೀವನದ ಸಂದರ್ಭ. ಆಯ್ಕೆಯೂ ಜೀವನವೇ. ಅಂತರಂಗವೂ ಜೀವನ. ಆದರೆ ಬೇಂದ್ರೆ ಕವಿತೆಯಲ್ಲಿ ಇಡೀ ಕವಿತೆಯು ಕನಸಿನ ಸಂದರ್ಭದಲ್ಲಿ ನಡೆಯುವಂಥದು. ಅಡಿಗರ ಕವಿತೆಯಲ್ಲಿ ಎಚ್ಚರದ ಸಂದರ್ಭ. ಹುಡುಕುತ್ತಿರುವ ಮುಖ ಕಂಡಿತೇನು? ಕವಿತೆ ಮುನ್ನಡೆಯುತ್ತದೆ:

ಹಠಾತ್ತಾಗಿ ಮೂಡಿತ್ತಲ್ಲಿ ಅಗೋ, ಅಗೋ ಸಭಾಮಧ್ಯದಲ್ಲಿ ಪರಮಾಪ್ತ ಮುಖ,
ಮಾತಿನಾಚೆಯ ಸಹಸ್ಪಂದಿ; ಮಾತಿಲ್ಲದೆಯೆ
ಇಂಗಿತವನರಿವ ಸಹಭಾಗಿನಿಯ ಸಹಜ ಮುದ್ರೆ.
ಯಾವ ಮುಖ ಅದು? ಎಲ್ಲಿ, ಯಾವಾಗ, ಯಾವ ಭವದಲ್ಲಿ ,
ಲೋಕದಲ್ಲಿ, ಸಂಭಾವ್ಯತೆಯ ಯಾವ ಆಕಸ್ಮಿಕದ
ಆತ್ಮೀಯತೆಯ ಆಪ್ಯಾಯಮಾನ ಕ್ಷಣದಲ್ಲಿ
ಕಂಡದ್ದು ಅದು?
ಒಳತಳದ ಬೀಗ ಹೇಗೋ ಕಳಚಿ ಬಾಗಿಲು ತೆರೆದು
ಮೇಲಕ್ಕೆ ಚಿಮ್ಮಿ ಮುಖದಲ್ಲಿ ಮೂಡುವ ಕೆಂಪು.
ಮಿಂಚಂತೆ ಬಂದೊಂದು ಬೆರಗು; ನಿಷ್ಕಾಮವಾದೊಂದು ಚೆಲುವಿನ ಕಂಪು;
ಕಣ್ಣಂಚಲ್ಲಿ ಚಕಮಕಿಸುತ್ತಿರುವ ಬೆಳಕಿನ ಗುಳ್ಳೆ , 
ಕೆನ್ನೆಯಲ್ಲವತರಿಸುವ ಅನಾದಿರಾಗದ ಪ್ರತಿಮೆ.
ಅಹಹಾ, ಅಲೌಕಿಕ ಸಖೀಯೆ,
ಮುಂಗೈ ಮೇಲೆಯೇ ಅಮೂರ್ತ ಕುಳಿತ ಓ ಅರಗಿಣಿಯೆ,
ಅಸಂಭಾವ್ಯ ಸಂಭಾವ್ಯವಾದೊಂದು ನಿಮಿಷ, ಅನಿಮೇಷ,
ವೇಷವೆಲ್ಲವ ಕಿತ್ತು ಬಿಸುಟ ಅಂತರ್ಮೂಲದ ಅಮೂಲ್ಯ ಹಾಸ
ಹುಡುಕಿದ್ದರೂ ತಾನು ಹುಡುಕಿದ್ದರಿಂದ ಇದು ಸಿಕ್ಕಿತು ಎನ್ನಲಾಗದ ಮುಖ. ಇದನ್ನು ಹುಡುಕಿ ಪಡೆಯಲು ಸಾಧ್ಯವಿಲ್ಲವೆಂಬಂಥ ಮುಖ, ಎಲ್ಲೋ ಕಂಡಿದ್ದೆ ಆದರೆ ಯಾವ ಜನ್ಮದಲ್ಲಿ ಎಂಬ ಭಾವವನ್ನು ಉದ್ದೀಪಿಸುವ ಮುಖ, ಹಾಗೆ ಉದ್ದೀಪಿಸಿ ಕಾಲವನ್ನು ಅಖಂಡವಾಗಿಸುವ ಮುಖ, ಪರಸ್ಪರ ಮೌನದಲ್ಲೇ ಅರ್ಥವಾಗುವ ಪರಿಗೆ ಮಾತು ನಾಚಿಕೊಳ್ಳುವ ಹಾಗೆ ಮಾಡುವ ಮುಖ, ಶಬ್ದದೊಳಗಣ ಅರ್ಥಕ್ಕಲ್ಲ-ಶಬ್ದದೊಳಗಣ ನಿಃಶಬ್ದಕ್ಕೆ ಕಿವಿಗೊಡುವುದನ್ನು ಹೇಳಿಕೊಡಬಲ್ಲ ಮುಖವಿದು.

ಕಣ್ಣಂಚಲ್ಲಿ ಚಕಮಕಿಸುತ್ತಿರುವ ಬೆಳಕಿನ ಗುಳ್ಳೆ ಎನ್ನುತ್ತಾರೆ. ಕೆನ್ನೆಯಲ್ಲವತರಿಸುವ ಅನಾದಿ ರಾಗದ ಪ್ರತಿಮೆ ಎನ್ನುತ್ತಾರೆ. ಮುಂಗೈ ಮೇಲೆಯೇ ಅಮೂರ್ತ ಕುಳಿತ ಓ ಅರಗಿಣಿಯೆ ಎನ್ನುತ್ತಾರೆ. ಎದುರಿಗೆ ಕಾಣುತ್ತಿರುವುದು ಬರಿಯ ದೃಶ್ಯವಲ್ಲ. ಬರಿಯ ಲೌಕಿಕವಲ್ಲ. ಇದೊಂದು ಹೊಳಹು! ಇವಳು ಅಲೌಕಿಕ ಸಖೀ ಎಂದಂತೆ. ದೃಶ್ಯವೇ ಹೊಳಹಾಗಿ ಒದಗಿಬರುವ ಆಕಸ್ಮಿಕವನ್ನು ಹೇಳುತ್ತಿದ್ದಾರೆ. ಮಹಾನ್‌ ಶಿಲ್ಪಿ ರೋಡಿನ್‌ ಕವಿ ರಿಲ್ಕೆಗೆ ಹೀಗೆ ಹೇಳಿದ್ದನಂತೆ- ದಿಟ್ಟಿಸಿ ನೋಡು. ನೀ ಹೇಗೆ ದಿಟ್ಟಿಸಬೇಕೆಂದರೆ ನೀನು ನೋಡಿದ್ದು ನಿನಗೆ ಹೊಳಹಾಗಿಯೂ ಒದಗಬೇಕು, ಮುಂಗೈ ಮೇಲೆ ಅಮೂರ್ತ ಕುಳಿತ ಅರಗಿಣಿ- ಈ ಮಾತನ್ನು ನೆನಪಿಸುತ್ತದೆ. ಓ ದೃಶ್ಯವೇ ಹೊಳಹಾಗಿ ಒದಗಿ ಬಾ ಎಂದು ಅಡಿಗರು ಕರೆಯುತ್ತಿದ್ದಾರೇನೋ ಅನ್ನಿಸುತ್ತದೆ. ಮೃಗಶಾಲೆಯಲ್ಲಿ ಸಿಂಹವನ್ನು ನೋಡಿ, ಹಾ! ತಾಯಿದುರ್ಗೆಯ ವಾಹನ ಎನ್ನುತ್ತ ರಾಮಕೃಷ್ಣರು ಭಾವಸಮಾಧಿ ಪಡೆದ ಕಥೆ ನೆನಪಾಗುತ್ತದೆ!

ಇಲ್ಲಿಗೆ ವೇಷ ಕಳಚಿತು. ಸಭೆ ಮುಗಿಯಿತು. ಮೌನಕ್ಕೆ ಮೌನದ ಗುರುತು ಹತ್ತಿತು. ಕವಿತೆಯ ಎರಡನೆಯ ಭಾಗದಲ್ಲಿ ಕವಿ-ಮತ್ತೆ ಚಿಂತಿಸುತ್ತಿದ್ದಾನೆ. ನಿಮಿಷ ಕೂತಿದ್ದ ಅರಗಿಣಿ ಹಾರಿಹೋಗಿದೆ. ಹೊಳಹು ಮಿಂಚಿಹೋದ ಮೇಲೆ ಮತ್ತೆ ಆ ಕುರಿತು ಚಿಂತನೆ ಮಾತ್ರ ಸಾಧ್ಯ. ತಾನು ಅರಸುತ್ತಿದ್ದ ಆ ಮುಖ ಅದು ತನ್ನದೇ ಆದ ಹೊಸಮುಖ ಎಂದು ಕವಿ ಅರಿತವನಾದ. ಅದು ಸ್ತ್ರೀ ಮುಖ. ಆದರೂ ತನ್ನದೇ ಮುಖ. ತನ್ನದೇ ಆದರೂ ವಿಚಿತ್ರವೆಂಬಂತೆ ತೀವ್ರವಾದ ವಿರಹವನ್ನು ಉಂಟುಮಾಡುತ್ತಿದೆ! ಏಕೆಂದರೆ ಅದು ತನ್ನ ಇನ್ನೊಂದು ಅರ್ಧ.

ಎಲ್ಲಾದರೂ ತನ್ನ ಇನ್ನೊಂದರ್ಧ ಕ್ಷಣಾರ್ಧ
ಸಿಕ್ಕಿದವನೆ ಕೃತಾರ್ಥ, ಭಾಗ್ಯವಂತ

ಮತ್ತೆ ಯಾವಾಗ ಮರು ಭೇಟಿ? ಎಂಬ ಚಿಂತೆಯೊಂದಿಗೇ, ಇನ್ನೊಮ್ಮೆ ಭೇಟಿಯಾದರೂ ಅದು ಹೀಗೇ ಆಗಿರುತ್ತದೆ ಎಂದು ಹೇಳಲಾಗದು ಎಂಬ ಖನ್ನತೆಯೊಂದಿಗೇ ಕವಿತೆ ಮುಗಿಯುವುದು. ಕವಿತೆಯ ಗ್ರಾಫ‌ು ಹುಡುಕಾಟದ ಭಾವನೆಯೆ ತಹತಹದಿಂದ ತೊಡಗಿ ಅಪೂರ್ವವಾದುದನ್ನು ಪಡೆದ ಅನುಭವದ ಶಿಖರವನ್ನೇರಿ ಮತ್ತೆ ಪಡೆದುದರ ನೆನವರಿಕೆಯ ವಿಷಾದದಲ್ಲಿ ಮುಗಿಯುತ್ತದೆ. ಈ ವಿಷಾದವು ಹುಡುಕಾಟದ ತಹತಹದ ಇನ್ನೊಂದು ರೂಪವೇ. ನೆನವರಿಕೆಗೆ ಇಂಗ್ಲಿಷಲ್ಲಿ Rememberence ಎನ್ನುವರು. ಈ ಪದ ನಿಜಕ್ಕೂ Re-member ಅಂದರೆ ಅಗಲಿಬಂದ ಹಿಂಡಿಗೆ ಇನ್ನೊಮ್ಮೆ ಸದಸ್ಯನಾಗಿ ಸೇರಿಕೊಳ್ಳುವುದನ್ನು ಸೂಚಿಸುತ್ತದೆ. ಇದು, Ken Wilber ಒಳನೋಟ. ಅಡಿಗರ ಈ ಕವಿತೆಯಲ್ಲಿ ತಾನು ನೆನೆಯುವುದು ತನ್ನದೇ ಸ್ತ್ರೀಮುಖವನ್ನು ಎನ್ನುವುದು ಪುರುಷಾಹಂಕಾರವನ್ನು ಮೀರುವ ಧ್ವನಿಯಾಗಿ ಕೇಳಿಸಿ ಕವಿತೆಯನ್ನು ಇನ್ನಷ್ಟು ಆಪ್ತವಾಗಿಸುತ್ತದೆ.

ಲಕ್ಷ್ಮೀಶ ತೋಳ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next