Advertisement

ಫೇಸ್‌ ರೆಕಾಗ್ನಿಷನ್‌;ಮುಖ ನೋಡಿ ಕೋಳ ಹಾಕುವ ತಂತ್ರಜ್ಞಾನ

07:59 PM Nov 17, 2019 | Sriram |

ಭಾರತ ಸರ್ಕಾರದ ವತಿಯಿಂದ “ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ'(NCRB) ಸ್ವಯಂಚಾಲಿತ ಮುಖ ಗುರುತು ಪತ್ತೆ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಖಾಸಗಿ ಸಂಸ್ಥೆಗಳಿಂದ ಪ್ರಸಾವನೆಗಳನ್ನು ಆಹ್ವಾನಿಸಿದೆ. ನವೆಂಬರ್‌ 20ರಂದು ಆ ಗಡುವು ಮುಗಿಯಲಿದೆ.

Advertisement

ಫೇಸ್‌ ರೆಕಾಗ್ನಿಷನ್‌(ಮುಖದ ಗುರುತು ಪತ್ತೆ) ತಂತ್ರಜ್ಞಾನವು ನಮ್ಮ ದೇಶದ ಭದ್ರತಾ ವ್ಯವಸ್ಥೆಯ ಸಾಮರ್ಥ್ಯವನ್ನು ಬಲಪಡಿಸಲು ನೆರವಾಗುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಭಾರತ ಸರ್ಕಾರವು ಜಗತ್ತಿನಾದ್ಯಂತ ಇರುವ ಐಟಿ ಕಂಪನಿಗಳಿಗೆ ಈ ಯೋಜನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದೆ. ಈಗಾಗಲೇ ದೇಶದಲ್ಲಿ ಬಳಕೆಯಲ್ಲಿರುವ ಬೆರಳಚ್ಚು, ವಲಸೆ, ವೀಸಾ ಮತ್ತು ವಿದೇಶಿಯರ ನೋಂದಣಿ ಟ್ರ್ಯಾಕಿಂಗ್‌ ಡಾಟಾಬೇಸ್‌ಗಳು ಸೇರಿದಂತೆ, ಹಲವು ಡಾಟಾಬೇಸ್‌ ವ್ಯವಸ್ಥೆಯೊಂದಿಗೆ ಮುಖ ಗುರುತು ಪತ್ತೆಯನ್ನೂ ಸೇರಿಸಿ ಒಂದು ಕೇಂದ್ರೀಕೃತ ವ್ಯವಸ್ಥೆಯನ್ನು ರೂಪಿಸುವ ಯೋಚನೆಯೂ ಇದೆ.ಇದರಿಂದಾಗಿ ಪೊಲೀಸ್‌ ಇಲಾಖೆಯ ತನಿಖಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತಿಳಿಸಿದೆ.

ಸವಾಲುಗಳು ಅನೇಕ
ಸ್ವಯಂಚಾಲಿತ ಮುಖ ಗುರುತಿಸುವಿಕೆ ವ್ಯವಸ್ಥೆಗೆ ಖಾಸಗಿ ಪಾಲುದಾರಿಕೆ ಅಗತ್ಯವಾಗಿ ಬೇಕಿದೆ. ಆದರೆ ಹಾಗೆಂದು NCRB ಸುಮ್ಮನೆ ಕುಳಿತಿಲ್ಲ. ಅದು ಕಠಿಣ ಷರತ್ತುಗಳನ್ನು ವಿಧಿಸಿದೆ. ಅವೆಲ್ಲವಕ್ಕೂ ಸಮ್ಮತಿ ಸೂಚಿಸುವ ಸಂಸ್ಥೆಗಳನ್ನು ಮಾತ್ರವೇ ಬಿಡ್‌ ಮೂಲಕ ಆಯ್ಕೆ ಮಾಡಲಾಗುವುದು. ಈ ಷರತ್ತುಗಳಲ್ಲಿ ಪ್ರಮುಖವಾದವು ಎಂದರೆ ಈ ಯೋಜನೆಗೆ ಪ್ರಸ್ತುತ ಇರುವ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾತ್ರವಲ್ಲದೆ ಭವಿಷ್ಯತ್ತಿನಲ್ಲಿ ಎದುರಾಗುವ ಸವಾಲುಗಳನ್ನೂ ಮೀರಿ ನಿಲ್ಲುವ ಸಾಮರ್ಥ್ಯವನ್ನು ಹೊಂದಿರುವಂತೆ ರೂಪಿಸಬೇಕು ಎನ್ನುವುದು. ಮನುಷ್ಯರ ಮುಖ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ವರ್ಷಗಳ ನಂತರ ಸುಕ್ಕುಗಟ್ಟುತ್ತದೆ, ಕೂದಲುಗಳು ಬೆಳೆಯುತ್ತವೆ ಅಥವಾ ಅವಘಡಕ್ಕೆ ತುತ್ತಾಗಿ ಬದಲಾವಣೆಗಳು ಉಂಟಾಗಬಹುದು. ಅಷ್ಟೇ ಅಲ್ಲದೆ, ಒಮ್ಮೆ ಶೇಖರಿಸಿಟ್ಟ ವ್ಯಕ್ತಿ ಚಹರೆಯ ದಾಖಲೆ, ಕೆಲ ಸಮಯದ ನಂತರ ನಿರುಪಯುಕ್ತವಾಗಿಬಿಡಬಹುದು. ಹೀಗಾಗಿ ಇವೆಲ್ಲಾ ಬದಲಾವಣೆಗಳನ್ನು ಮೀರಿ ಈ ವ್ಯವಸ್ಥೆ ಅತ್ಯುತ್ತಮ ಫ‌ಲಿತಾಂಶ ನೀಡಲು ಸಾಧ್ಯವಾಗುವಂತೆ ರೂಪಿಸಬೇಕು ಎನ್ನುವ ಷರತ್ತನ್ನು NCRB ವಿಧಿಸಿದೆ. ಆ ಮೂಲಕ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನ ಸಹಾಯದಿಂದ ಜಗತ್ತಿನ ಅತಿ ದೊಡ್ಡ ಫೇಸ್‌ ರೆಕಾಗ್ನಿಷನ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಭಾರತ ಸಜ್ಜಾಗುತ್ತಿದೆ. ಇದರಿಂದಾಗಿ ಪೊಲೀಸ್‌ ಪಡೆ, ಮಾಹಿತಿ ಸಂಗ್ರಹಣೆ, ಅಪರಾಧಿಗಳ ಗುರುತು ಪತ್ತೆ, ಕಾಣೆಯಾದವರನ್ನು ಹುಡುಕಲು, ಅಪರಿಚಿತ ಶವಪತ್ತೆ ಮುಂತಾದ ಪ್ರಕರಣಗಳನ್ನು ತ್ವರಿತವಾಗಿ ಬಗೆ ಹರಿಸಲು ಸಾಧ್ಯವಾಗಲಿದೆ.

ತಂತ್ರಜ್ಞಾನದಲ್ಲಿನ ಲೋಪದೋಷಗಳು
ಅಮೆರಿಕದಲ್ಲಿ ಬಳಕೆಯಲ್ಲಿರುವ ಫೇಸ್‌ ರೆಕಾಗ್ನಿಷನ್‌ ತಂತ್ರಜ್ಞಾನದ ಕುರಿತು ಅಪಸ್ವರಗಳು ಕೇಳಿಬಂದಿದ್ದವು. ಅಲ್ಲಿನ ಹೆಸರಾಂತ ಮೆಸಾಚುಸ್ಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ ನಡೆಸಿದ ಅಧ್ಯಯನದಲ್ಲಿ ಅದು ದೃಢಪಟ್ಟಿತ್ತು ಕೂಡಾ. ಅಮೆರಿಕದಲ್ಲಿ ಬಳಕೆಯಲ್ಲಿದ್ದ ಫೇಸ್‌ ರೆಕಾಗ್ನಿಷನ್‌ ತಂತ್ರಜ್ಞಾನವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ಬಿಳಿ ಚರ್ಮದ ವ್ಯಕ್ತಿಗಳನ್ನು ಪತ್ತೆ ಹಚ್ಚಿದಷ್ಟು ಸುಲಭವಾಗಿ ಇತರೆ ವರ್ಣದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ವಿಫ‌ಲವಾಗುತ್ತಿದ್ದಿದ್ದು ಕಂಡುಬಂದಿತ್ತು. ಕಪ್ಪು, ಕಂದು ಜನರ ಮುಖ ಗುರುತು ಪತ್ತೆಯಲ್ಲಿ ಹಲವು ಲೋಪದೋಷಗಳು ಕಂಡು ಬಂದರೆ, ಬಿಳಿ ವರ್ಣದ ವ್ಯಕ್ತಿಗಳ ಚಹರೆಯ ಗುರುತು ಪತ್ತೆಯಲ್ಲಿ ಶೇ.99ರಷ್ಟು ನಿಖರತೆ ಕಂಡುಬಂದಿತ್ತು. ಹೀಗಾಗಿ, ಈ ವ್ಯವಸ್ಥೆ ಒಂದು ವರ್ಗದ ಜನರ ಓಲೈಕೆಗಾಗಿ ಎಂಬ ಅಭಿಪ್ರಾಯ ಮೂಡಿ, ವರ್ಣಬೇಧದ ಕೂಗು ಅಲ್ಲಿ ಕೇಳಿಬಂದಿತ್ತು. ಇವೆಲ್ಲದರಿಂದಾಗಿ ಇಂಥದ್ದೊಂದು ತಂತ್ರಜ್ಞಾನದಿಂದ ಉಪಯೋಗಕ್ಕೆ ಬದಲಾಗಿ ಸಮಾಜಕ್ಕೆ ಮಾರಕವಾಗುವ ಸಾಧ್ಯತೆ ಹೆಚ್ಚಾಗಬಹುದು. ಈ ತಪ್ಪುಗಳು ನಮ್ಮಲ್ಲಿ ಪುನರಾವರ್ತಿಸದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ NCRB ಮೇಲಿದೆ.

ಕೇಂದ್ರೀಕೃತ ಕಣ್ಗಾವಲು ವ್ಯವಸ್ಥೆ
ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ, ಸಾಮಾಜಿಕ ಜಾಲತಾಣಗಳ ವಿವರ, ಅಂತರ್ಜಾಲದಲ್ಲಿನ ಅವರ ನಡವಳಿಕೆ, ಫೋಟೋಗಳು, ಅವರು ಭೇಟಿ ನೀಡಿದ ಜಾಗಗಳು, ಅವರಿಗೆ ಪರಿಚಯವಿರುವ ವ್ಯಕ್ತಿಗಳು, ಸ್ನೇಹಿತರು, ಅವರು ಕೊಂಡುಕೊಂಡ ವಸ್ತುಗಳು, ಪ್ರಯಾಣದ ಟಿಕೆಟ್‌ಗಳು, ಹೀಗೆ… ಎಲ್ಲಾ ಮಾಹಿತಿಗಳೂ ಒಂದೇ ಕಡೆ ಸಿಗುವಂತಾದರೆ, ಅದರ ಹಿಂದೆ ಖಾಸಗಿತನ ಅಪಾಯದಂಚಿಗೆ ಹೋಗುವುದನ್ನೂ ನಾವು ಪರಿಗಣಿಸಬೇಕಾಗುತ್ತದೆ. ಕೇಂದ್ರೀಕೃತ ವ್ಯವಸ್ಥೆಯೊಂದು ಬಂದುಬಿಟ್ಟರೆ ದಾರಿಯಲ್ಲಿ ನಡೆದುಹೋಗುತ್ತಿರುವವನ ಚಹರೆಯನ್ನು ದೂರದ ಮೂಲೆಯಲ್ಲೆಲ್ಲೋ ಇರುವ ಸಿಸಿ ಟಿ.ವಿ ಮುಖಾಂತರ ಸೆರೆಹಿಡಿದು, ಅದನ್ನು ಕೇಂದ್ರೀಕೃತ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿಬಿಟ್ಟರೆ, ಆ ವ್ಯಕ್ತಿಯ ಜನ್ಮ ಜಾತಕವೇ ಮರುಕ್ಷಣದಲ್ಲಿ ಪರದೆ ಮೇಲೆ ಮೂಡಿರುತ್ತದೆ.

Advertisement

ಸೂಕ್ಷ್ಮ ಮಾಹಿತಿ ಸರ್ಕಾರದ ಬಳಿಯೇ ಇರಲಿ
ಹಾಗೆ ನೋಡಿದರೆ, ಈ ವ್ಯವಸ್ಥೆಯನ್ನು ಸಕರಾತ್ಮಕವಾಗಿ ಬಳಸಿಕೊಂಡರೆ ಅದರಿಂದ ಸರ್ವರಿಗೂ ಉಪಯೋಗವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂಥದ್ದೊಂದು ಶಕ್ತಿಶಾಲಿ ವ್ಯವಸ್ಥೆಯನ್ನು ದುರುದ್ದೇಶಗಳಿಗೆ ಬಳಸಿಕೊಳ್ಳುವುದರಿಂದ ಇಡೀ ಸಮಾಜವೇ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗಿ ಬರುವುದು. ಅಪರಾಧ ಪತ್ತೆಯಲ್ಲಿ ಈ ತಂತ್ರಜ್ಞಾನ ಬಳಕೆ ಸೂಕ್ತವೂ ಹೌದು, ಅಗತ್ಯವೂ ಹೌದು. ನಾಗರಿಕರ ಖಾಸಗಿತನವನ್ನು ಉಲ್ಲಂ ಸದೇ, ಗೌಪ್ಯತೆ ಕಾಪಾಡಿಕೊಳ್ಳುವುದು ಈ ಯೋಜನೆಯ ಮೂಲಮಂತ್ರವಾಗಬೇಕು. ಯೋಜನೆಯಲ್ಲಿ ಭಾಗಿಯಾಗುವ ಖಾಸಗಿ ಸಂಸ್ಥೆಗಳಿಗೆ ಸೂಕ್ಷ್ಮ ಮಾಹಿತಿಯ ಬಳಕೆಗೆ ಅನುಮತಿ ನೀಡದೆ, ಸರ್ಕಾರಿ ಸಂಸ್ಥೆಗಳೇ ಅದನ್ನು ನೇರವಾಗಿ ನೋಡಿಕೊಳ್ಳುವಂತಾದರೆ ಚೆನ್ನ ಎನ್ನುವುದು ಪರಿಣತರ ಅಭಿಪ್ರಾಯ.

ಕೋಟ್ಯಂತರ ಸಿ.ಸಿ. ಕ್ಯಾಮೆರಾಗಳು
ಫೇಸ್‌ ರೆಕಾಗ್ನಿಷನ್‌ ತಂತ್ರಜ್ಞಾನವನ್ನು ಪೂರ್ತಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದರೆ ದೇಶಾದ್ಯಂತ ಲಕ್ಷಾಂತರ, ಕೋಟ್ಯಂತರ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಬೇಕಾಗುತ್ತದೆ. ಈ ಯೋಜನೆಯ ಪ್ರಮುಖ ಉದ್ದೇಶ ಅಪರಾಧಿಗಳ ಪತ್ತೆಯಾಗಿರುವುದರಿಂದ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಅನಿವಾರ್ಯ ಕೂಡಾ ಹೌದು. ಚೀನಾ ಫೇಸ್‌ ರೆಕಾಗ್ನಿಷನ್‌ ತಂತ್ರಜ್ಞಾನವನ್ನು ಅಪರಾಧ ಪತ್ತೆಯಲ್ಲಿ ಭಳಸಿಕೊಳ್ಳುವುದರ ಜೊತೆಯಲ್ಲಿ ನಾಗರಿಕರ “ಸೋಷಿಯಲ್‌ ಕ್ರೆಡಿಟ್‌ ಸ್ಕೋರ್‌’ ಅನ್ನು ಮೇಲ್ವಿಚಾರಣೆ ಮಾಡುವಲ್ಲಿಯೂ ಬಳಸುತ್ತಿದೆ. ಅಂದರೆ ಅಲ್ಲಿ, ಪ್ರತಿಯೊಬ್ಬ ನಾಗರಿಕರನ್ನೂ ಅಂಕಗಳ ಮೂಲಕ ಅಳೆಯುತ್ತಾ ಟ್ರ್ಯಾಕ್‌ ಮಾಡಲಾಗುತ್ತಿದೆ. ಆ ಮಟ್ಟಕ್ಕೆ ಹೋಗುವುದರಿಂದ ಯಾವುದೇ ದೇಶದ ನಾಗರಿಕರ ಖಾಸಗಿತನಕ್ಕೆ ಧಕ್ಕೆ ಬಂದೇ ಬರುವುದು. ಹಾಗಾಗಿ ಶುರುವಿನಲ್ಲೇ ಈ ಯೋಜನೆಯ ರೂಪುರೇಷೆಗಳನ್ನು ಬಹಳ ನಿಖರವಾಗಿ ನಿರ್ಧರಿಸುವ ಅಗತ್ಯ ಬಹಳವಿದೆ. ನಾಗರಿಕರ ನೈತಿಕ ಹಕ್ಕುಗಳ ಉಲ್ಲಂಘನೆಯಾಗದಂತೆ, ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರಲ್ಲಿಯೇ ಈ ಯೋಜನೆ ಯಶಸ್ಸು ಅಡಗಿದೆ.

-ಉಲ್ಲಾಸ್‌ ಕೆ.ಸಿ.ರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next