Advertisement

ಟ್ರೋಲ್ ಪೇಜ್ ನಲ್ಲಿ ತುಳುನಾಡಿನ ದೈವಕ್ಕೆ ಅವಮಾನ ; ಸೂಕ್ತ ಕ್ರಮಕ್ಕೆ ಶಾಸಕ ಕಾಮತ್ ಆಗ್ರಹ

07:28 AM Oct 23, 2019 | Hari Prasad |

ಮಂಗಳೂರು: ತುಳುನಾಡಿನ ಪ್ರಮುಖ ನಂಬಿಕೆಯಾಗಿರುವ ದೈವಾರಾಧನೆಯನ್ನು ಅವಹೇಳನ ಮಾಡುವಂತಹ ಪೋಸ್ಟ್ ಒಂದನ್ನು ತಮ್ಮ ಪೇಸ್ಬುಕ್ ಪುಟದಲ್ಲಿ ಹಾಕಿಕೊಂಡಿರುವ ವಿಚಾರದ ವಿರುದ್ಧ ಇದೀಗ ತುಳುವರು ಸಿಡಿದೆದ್ದಿದ್ದಾರೆ. ಮಾತ್ರವಲ್ಲದೇ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಈ ಪೋಸ್ಟ್ ಕುರಿತಾಗಿ ತಮ್ಮ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೇ ಈ ರೀತಿಯಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವ್ಯಕ್ತಿಗಳು ಮತ್ತು ಫೇಸ್ಬುಕ್ ಪೇಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಕಮಿಷನರ್ ಹರ್ಷ ಅವರಿಗೆ ಮನವಿಯನ್ನೂ ಸಹ ಮಾಡಿಕೊಂಡಿದ್ದಾರೆ.

Advertisement


ಇನ್ನು ‘ಟ್ರೋಲ್ ಹೂ ಟ್ರೋಲ್ ಕನ್ನಡಿಗ’ ಎಂಬ ಫೇಸ್ಬುಕ್ ಪುಟದಲ್ಲಿ ಈ ಹಿಂದೆಯೂ ದೈವದೇವರನ್ನು ಅವಮಾನಿಸುವ ರೀತಿಯ ಪೋಸ್ಟ್ ಗಳನ್ನು ಹಾಕಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೈವಾರಾಧನಾ ಚಾವಡಿ ಮತ್ತು ದಲಿತ ರಕ್ಷಣಾ ವೇದಿಕೆಯವರು ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರೊಂದನ್ನೂ ಸಹ ಸಲ್ಲಿಸಿದ್ದರು. ಆದರೂ ತಮ್ಮ ಹಳೇ ಚಾಳಿ ಬಿಡದ ಈ ಟ್ರೋಲ್ ಪೇಜಿನವರು ಇದೀಗ ಮತ್ತೆ ತುಳುನಾಡಿನ ದೈವಗಳನ್ನು ತುಂಬಾ ಕೀಳುಮಟ್ಟದಲ್ಲಿ ಅವಮಾನಿಸುವ ಕೆಲಸವನ್ನು ಮಾಡಿರುವುದು ತುಳುವರ ಮತ್ತು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ವತಃ ತುಳುನಾಡಿನ ಶಾಸಕರೇ ಧ್ವನಿ ಎತ್ತಿರುವುದು ಮತ್ತು ಶಾಸಕರ ಮನವಿಗೆ ಮಂಗಳೂರು ಪೊಲೀಸ್ ಕಮಿಷನರ್ ಸಕಾರಾತ್ಮಕವಾಗಿ ಸ್ಪಂದಿಸಿರುವುದು ತುಳುನಾಡಿನ ಜನತೆಯಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ ಮೂಡಲು ಕಾರಣವಾಗಿದೆ.


ಶಾಸಕ ಕಾಮತ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಹರ್ಷ ಅವರು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಕ್ರೈಮ್ ವಿಭಾಗದ ಡಿಸಿಪಿ ಅವರಿಗೆ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭರವಸೆ ನೀಡಿದ್ದಾರೆ.


ಆದರೆ ಎಲ್ಲೋ ಕುಳಿತು ಜನರ ಧಾರ್ಮಿಕ ನಂಬಿಕೆಗಳನ್ನು ಕೀಳುಮಟ್ಟದಲ್ಲಿ ಅವಮಾನಿಸುವ ಮತ್ತು ಈ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಕೆಲಸವನ್ನು ಮಾಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಈ ಚಾಳಿ ಇನ್ನಷ್ಟು ಮುಂದುವರಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next