ಮಹಾರಾಷ್ಟ್ರ: ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ವಿಚಾರದ ಜಟಾಪಟಿಯಿಂದಾಗಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಮುಂಬೈನ ಘಾಟ್ ಕೋಪರ್ ಪ್ರದೇಶದಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ.
ಅಸ್ಲಾಫಾ ಮೆಟ್ರೋ ನಿಲ್ದಾಣದ ಸಮೀಪ ನಸುಕಿನ 1.30ರ ಹೊತ್ತಿಗೆ ಇಬ್ಬರು, ಮೂವರು ಅಪರಿಚಿತ ವ್ಯಕ್ತಿಗಳು ಮನೋಜ್ ದುಬೆ(45ವರ್ಷ) ಅವರನ್ನು ಚೂರಿಯಿಂದ ಇರಿದು ಪರಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ದುಬೆಯನ್ನು ಆಸ್ಪತ್ರೆಗೆ ಕರೆದೊಯ್ಯಿದ್ದಿದ್ದು, ಅಷ್ಟರಲ್ಲಿ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಘಟನೆಯನ್ನು ಮಹಾರಾಷ್ಟ್ರ ಕಾಂಗ್ರೆಸ್ ಘಟಕ ಬಲವಾಗಿ ಖಂಡಿಸಿದೆ. ಅಲ್ಲದೇ ಬಿಜೆಪಿ ಗೂಂಡಾಗಳು ತಮ್ಮ ಕಾರ್ಯಕರ್ತನನ್ನು ಹತ್ಯೆಗೈದಿರುವುದಾಗಿ ಟ್ವೀಟ್ ಮಾಡುವ ಮೂಲಕ ಆರೋಪಿಸಿದೆ.
ರಾಜಕೀಯ ಸಂಬಂಧಿ ವಿಚಾರಗಳನ್ನು ದುಬೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದು, ಈ ಕಾರಣಕ್ಕಾಗಿಯೇ ಕೊಲೆ ನಡೆದಿರಬೇಕು ಎಂದು ಕೆಲವು ಮಾಧ್ಯಮದ ವರದಿಗಳು ತಿಳಿಸಿವೆ. ಕೊಲೆಗೆ ನಿಜವಾದ ಕಾರಣ ಏನು ಎಂಬುದನ್ನು ಇನ್ನಷ್ಟು ಪತ್ತೆ ಹಚ್ಚಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.