ಪಶ್ಚಿಮಬಂಗಾಳ(ಡಾರ್ಜಿಲಿಂಗ್):ಪಶ್ಚಿಮ ಬಂಗಾಳದ 7 ಮಹಾನಗರ ಪಾಲಿಕೆಗೆ ಭಾನುವಾರ ನಡೆದಿದ್ದ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಾಲ್ಕು ಹಾಗೂ ಗೋರಖ್ ಜನಮುಕ್ತಿ ಮೋರ್ಚಾ 3 ಮುನ್ಸಿಪಾಲ್ಟಿಯಲ್ಲಿ ಜಯಭೇರಿ ಬಾರಿಸಿದೆ. ಕುತೂಹಲ ಕೆರಳಿಸಿದ್ದ ಬಿಜೆಪಿ ಮೈತ್ರಿಕೂಟದ ಗೋರಖ್ ಜನಮುಕ್ತಿ ಮೋರ್ಚಾ(ಜಿಜೆಎಂ) ಪಕ್ಷದ ಹಿಡಿತದಲ್ಲಿದ್ದ ಪರ್ವತ ಶ್ರೇಣಿ ಪ್ರದೇಶವಾದ ಡಾರ್ಜಿಲಿಂಗ್ ನ ಮಿರ್ರಿಕ್ ಕೂಡಾ ಟಿಎಂಸಿ ವಶವಾಗುವ ಮೂಲಕ ಬಿಜೆಪಿ ಮುಖಭಂಗ ಅನುಭವಿಸಿದೆ.
ಬಹುಮುಖ್ಯವಾದ ಅಂಶ ಎಂಬಂತೆ ಕಳೆದ 30 ವರ್ಷಗಳಲ್ಲಿಯೇ ಮೊದಲ ಬಾರಿಗೆ ಗೋರಖ್ ಯೇತರ ಪಕ್ಷ ಪರ್ವತಶ್ರೇಣಿ ಪ್ರದೇಶದಲ್ಲಿ ಕಾಲೂರಿದಂತಾಗಿದೆ. ಡಾರ್ಜಿಲಿಂಗ್ , ಕುರ್ಸೆಯೋಂಗ್ ಮತ್ತು ಕಾಲಿಂಪಿಂಗ್ ಪಾಲಿಕೆಯಲ್ಲಿ ಗೋರಖ್ ಜನಮುಕ್ತಿ ಮೋರ್ಚಾ ತನ್ನ ಹಿಡಿತವನ್ನು ಮುಂದುವರಿಸಿದೆ.
ತೃಣಮೂಲ ಕಾಂಗ್ರೆಸ್ ದಕ್ಷಿಣ 24 ಪರಗಣಾಸ್ ನ ಪುಜಾಲಿ, ಮುರ್ಶಿದಾಬಾದ್ ನ ಡೋಮ್ಕಾಲ್, ಉತ್ತರ ದಿನಾಜ್ ಪುರ್ ನ ರಾಜ್ ಗಂಜ್ ಹಾಗೂ ಡಾರ್ಜಿಲಿಂಗ್ ನ ಮಿರ್ರಿಕ್ ಸೇರಿದಂತೆ ನಾಲ್ಕು ಮಹಾನಗರ ಪಾಲಿಕೆಯಲ್ಲಿ ವಿಜಯಪತಾಕೆ ಹಾರಿಸಿದೆ.
ಪುಜಾಲಿ ಮಹಾನಗರ ಪಾಲಿಕೆಯ 16 ವಾರ್ಡ್ ಗಳಲ್ಲಿ ಟಿಎಂಸಿ 12ರಲ್ಲಿ ಜಯ ಸಾಧಿಸಿದ್ದು, 2ರಲ್ಲಿ ಬಿಜೆಪಿ ಗೆಲುವು ಪಡೆದಿದೆ. ಡೋಮ್ಕಾಲ್ ನ 21 ವಾರ್ಡ್ ಗಳಲ್ಲಿ ಟಿಎಂಸಿ 20ರಲ್ಲಿ ಗೆಲುವು ಗಳಿಸಿದೆ. ಆರಂಭದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಎಡ ಪಕ್ಷ ಮೈತ್ರಿಕೂಟ 3 ವಾರ್ಡ್ ಗಳಲ್ಲಿ ಜಯ ಸಾಧಿಸಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ರಾಫಿಕುಲ್ ಇಸ್ಲಾಂ ವಾರ್ಡ್ ಮತ್ತು ಅಸಾದುಲ್ಲ್ ಇಸ್ಲಾಂ ವಾರ್ಡ್ ನಲ್ಲಿ ಟಿಎಂಸಿಯೇ ಗೆದ್ದಿರುವುದಾಗಿ ಪ್ರಕಟಿಸಲಾಯ್ತು, ಹಾಗಾಗಿ ಕಾಂಗ್ರೆಸ್ 1ಸ್ಥಾನದಲ್ಲಷ್ಟೇ ಗೆಲುವು ಸಾಧಿಸಿದಂತಾಗಿದೆ.
ರಾಯ್ ಗನಿ ಮಹಾನಗರ ಪಾಲಿಕೆ ಕಾಂಗ್ರೆಸ್ ಹಿಡಿತದಲ್ಲಿದ್ದಿದ್ದು, ಈ ಬಾರಿಯ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 27 ವಾರ್ಡ್ ಗಳಲ್ಲಿ 24ರಲ್ಲಿ ಗೆಲುವಿನ ನಗು ಬೀರಿದೆ. ಮಿರ್ರಿಕ್ ನ 9 ವಾರ್ಡ್ ಗಳಲ್ಲಿ 6ರಲ್ಲಿ ಟಿಎಂಸಿ ಜಯ ಸಾಧಿಸಿದೆ. 1986ರಿಂದ ಬಿಜೆಪಿ ಗೋರಖ್ ಜನಮುಕ್ತಿ ಮೋರ್ಚಾದ ಹಿಡಿತದಲ್ಲಿದ್ದ ಮಿರ್ರಿಕ್ ವಾರ್ಡ್ ಮೊದಲ ಬಾರಿಗೆ ಟಿಎಂಸಿ ಪಾಲಾಗಿದೆ.
ಪರ್ವತಶ್ರೇಣಿ ಪ್ರದೇಶವಾದ ಡಾರ್ಜಿಲಿಂಗ್, ಕಾಲಿಂಪೊಂಗ್ ಮತ್ತು ಕುರ್ಸೆಯೋಂಗ್ ಪಾಲಿಕೆ ಗಳಲ್ಲಿ ಗೋರಖ್ ಜನಮುಕ್ತಿ ಮೋರ್ಚಾ ತನ್ನ ಹಿಡಿತವನ್ನು ಮುಂದುವರಿಸಿದೆ. ಡಾರ್ಜಿಲಿಂಗ್ ನ 32 ವಾರ್ಡ್ ಗಳಲ್ಲಿ ಜಿಜೆಎಂ 31 ವಾರ್ಡ್ ಗಳಲ್ಲಿ ಜಯಭೇರಿ ಬಾರಿಸಿದೆ. ಕುರ್ಸೆಯೋಂಗ್ ನ 20 ವಾರ್ಡ್ ಗಳಲ್ಲಿ 17ರಲ್ಲಿ ಗೆಲುವಿನ ನಗು ಬೀರಿದೆ.