ಕುಂದಾಪುರ: ಈ ಬಾರಿ ಮೆಸ್ಕಾಂ ಬಿಲ್‌ನಲ್ಲಿ ಹೆಚ್ಚಳ ಕಂಡುಬಂದಿದ್ದು, ಗ್ರಾಹಕರಿಗೆ ಗೊಂದಲ ಉಂಟಾಗಿದೆ. ಆದರೆ ಜೂನ್ ತಿಂಗಳಿನ ಬಿಲ್ ಯುನಿಟ್‌ಗೆ 2.3 ರೂ.ಗಳಷ್ಟು ಹೆಚ್ಚಾಗಿ ಇನ್ನಷ್ಟು ಭಾರವಾಗಲಿದೆ.
ಈಗಾಗಲೇ ಎಪ್ರಿಲ್‌ನಿಂದ ಯುನಿಟ್‌ಗೆ 70 ಪೈಸೆಯಂತೆ ವಿದ್ಯುತ್ ದರ ಏರಿಸಲು ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸಮ್ಮತಿಸಿದೆ. ಈ ಹಿನ್ನೆಲೆಯಲ್ಲಿ ಬಹುತೇಕರು ಇದೇ ದರ ಹೆಚ್ಚಳದ ಬಿಲ್ ಎಂದು ಭಾವಿಸಿದ್ದರು. ಆದರೆ ಯುನಿಟ್‌ಗೆ 1.10 ರೂ.ನಂತೆ ಹೆಚ್ಚಳ ಕಂಡುಬಂದದ್ದು ಗೊಂದಲಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಮೆಸ್ಕಾಂನ ಲೆಕ್ಕ ವಿಭಾಗದ ಸಹಾಯಕ ಲೆಕ್ಕಾಧಿಕಾರಿಯವರು, ಕೆಇಆರ್‌ಸಿಯು ಪ್ರತೀ ತಿಂಗಳು ಇಂಧನ ಖರೀದಿ ನಿರ್ವಹಣ ಶುಲ್ಕ (ಫ್ಯೂಯೆಲ್ ಕಾಸ್ಟ್ ಅಡ್ಜಸ್ಟ್‌ಮೆಂಟ್ ಚಾರ್ಜಸ್) ದರ ವಿಧಿಸಲು ಅನುಮತಿಸಿದೆ. ಇದು ಸಾಮಾನ್ಯವಾಗಿ ಯುನಿಟ್‌ಗೆ 15, 14 ಪೈಸೆಗಳಷ್ಟು ಇದ್ದು, ಪ್ರತೀ ತಿಂಗಳು ವ್ಯತ್ಯಯವಾಗುವ ಸಂಭವವಿರುತ್ತದೆ. ದರ ಕಡಿಮೆ ಇದ್ದಾಗ ಕೆಲವೊಮ್ಮೆ ಗ್ರಾಹಕರಿಗೆ ಮರುಪಾವತಿ ಮಾಡುತ್ತಿದ್ದು, ಮಾರ್ಚ್‌ನಲ್ಲಿ ಗ್ರಾಹಕರಿಗೆ 15 ಪೈಸೆ ಮರಳಿಸಿದ್ದೇವೆ. ಎಪ್ರಿಲ್‌ನಲ್ಲಿ 55 ಪೈಸೆ, ಮೇ ತಿಂಗಳಿನಲ್ಲಿ 1.10 ರೂ. ಗ್ರಾಹಕರಿಗೆ ವಿಧಿಸಲು ಅನುಮತಿ ಸಿಕ್ಕಿದ್ದು, ಅದರಂತೆ ಪ್ರತೀ ಯುನಿಟ್ ಮೇಲೆ 1.10 ರೂ. ಹೆಚ್ಚುವರಿ ವಿಧಿಸಿ ಬಿಲ್ ನೀಡಲಾಗಿದೆ. ಇದರೊಂದಿಗೆ ಈ ಬಾರಿಯ ದರ ಹೆಚ್ಚಳದ ವಿವರ ಬಂದಿದ್ದು, ಅದು ಜೂನ್‌ನ ಬಿಲ್‌ನಲ್ಲಿ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಯಾಕೆ ಹೆಚ್ಚಳ?
ಮೆಸ್ಕಾಂನ ವಾಣಿಜ್ಯ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಎಂಜಿನಿಯರ್ ನೀಡುವ ಮಾಹಿತಿಯಂತೆ, ಉಷ್ಣವಿದ್ಯುತ್ ಸ್ಥಾವರಗಳು ವಿದ್ಯುತ್ ಉತ್ಪಾದನೆಗೆ ಬಳಸುವ ಕಲ್ಲಿದ್ದಲ್ಲಿನಲ್ಲಿ ದರ ಏರಿಳಿತವಾಗುತ್ತಿದೆ. ಅದರ ಪರಿಣಾಮ ಕೇಂದ್ರ ವಿದ್ಯುತ್ ಉತ್ಪಾದನ ಘಟಕದ ವಿದ್ಯುತ್ ಖರೀದಿಯ ಮೇಲೂ ಆಗಲಿದ್ದು, ಈ ದರ ವ್ಯತ್ಯಾಸವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ. ವಾರ್ಷಿಕ ದರ ಪರಿಷ್ಕರಣೆ ಸಂದರ್ಭದಲ್ಲಿ ವಾರ್ಷಿಕ ದರವನ್ನು ನಿರ್ಧರಿಸಿದ್ದರೂ ಇದಕ್ಕಿಂತ ಮಿಗಿಲಾಗುವ ದರ ವ್ಯತ್ಯಾಸವಿದು. ಮಳೆಗಾಲ ಮತ್ತು ಆ ಬಳಿಕ ಕೆಲವು ತಿಂಗಳು ಜಲವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಖರೀದಿಸುವಾಗ ಎಫ್ಎಸಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ ಎನ್ನುತ್ತಾರೆ.
Related Articles
ಈ ಹಿಂದೆ ಮೂರು ತಿಂಗಳಿಗೊಮ್ಮೆ ಇಂಧನ ದರ ವ್ಯತ್ಯಯವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿತ್ತು. ಡಿಸೆಂಬರ್ ಅನಂತರ ಈ ಪದ್ಧತಿ ಕೈ ಬಿಡಲಾಗಿದ್ದು, ಪ್ರತೀ ತಿಂಗಳು ವಿಧಿಸಲು ಮಾ. 23ರಂದು ನಿರ್ಣಯಿಸಿದ್ದು, ಎಪ್ರಿಲ್ ಬಿಲ್‌ನಿಂದಲೇ ಇದು ಅನ್ವಯವಾಗಿದೆ.
ಜೂನ್ ಬಿಲ್ ಇನ್ನಷ್ಟು ಭಾರ
ಯುನಿಟ್‌ಗೆ 70 ಪೈಸೆ ದರ ಹೆಚ್ಚಳ ಮೇ ತಿಂಗಳಿನ ಬಿಲ್‌ನಲ್ಲಿ ಬರಲಿದೆ. ಆದರೆ ಈ ಹೆಚ್ಚಳದ ಎಪ್ರಿಲ್ ತಿಂಗಳ ಬಾಕಿಯನ್ನು ಮುಂಬರುವ ಬಿಲ್‌ನಲ್ಲಿ ವಸೂಲು ಮಾಡಲಾಗುತ್ತದೆ. ಜತೆಗೆ ಮೇ ತಿಂಗಳ ಬಿಲ್ ಬಾಬ್ತು ಎಫ್ಎಸಿ ಯುನಿಟ್‌ಗೆ 93 ಪೈಸೆ ಇರಲಿದೆ. ಈ ಪ್ರಕಾರವಾಗಿ ಎಪ್ರಿಲ್ ಮತ್ತು ಮೇ ತಿಂಗಳಿನ 1.40 ರೂ., ಎಫ್ಎಸಿ 93 ಪೈಸೆ ಅಂದರೆ ಯುನಿಟ್ ಮೇಲೆ 2.33 ರೂ. ಹೆಚ್ಚುವರಿ ಬೀಳಲಿದೆ. ತೆರಿಗೆ ಹೊರತು ಪಡಿಸಿ 100 ಯುನಿಟ್‌ಗೆ 233 ರೂ. ದರ ಹೆಚ್ಚುವರಿ ಇರಲಿದೆ.
ಎಫ್ಎಸಿ (ಇಂಧನ ಖರೀದಿ ನಿರ್ವಹಣ ಶುಲ್ಕ)ದಲ್ಲಿ ಇಳಿಕೆ ಆದಾಗ ಗ್ರಾಹಕರಿಗೆ ಹಿಮ್ಮರಳಿಸಲಾಗುತ್ತದೆ. ಹೆಚ್ಚಾದಾಗ ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ. ಇದು ಇನ್ನು ಪ್ರತೀ ತಿಂಗಳು ಬಿಲ್‌ನಲ್ಲಿ ನಮೂದಾಗಲಿದೆ. ಇದನ್ನು ವಿದ್ಯುತ್ ನಿಯಂತ್ರಣ ಮಂಡಳಿ ಎಲ್ಲ ಎಸ್ಕಾಂಗಳಿಗೆ ನಿಗದಿಪಡಿಸುತ್ತದೆ.
– ದಿನೇಶ್, ಹಿರಿಯ ಕಾರ್ಯನಿರ್ವಾಹಕ ಎಂಜಿನಿಯರ್, ಮೆಸ್ಕಾಂ ವಾಣಿಜ್ಯ ವಿಭಾಗ, ಮಂಗಳೂರು
-ಲಕ್ಷ್ಮೀ ಮಚ್ಚಿನ