ಮಧ್ಯಪ್ರದೇಶ: ಫ್ರಾಡ್ ಟು ಫೋನ್ ಎಂಬುದು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಶಬ್ದ. ಇದು ಒಂದು ಸೈಬರ್ ಕ್ರೈಮ್ ನ ಭಾಗವಾಗಿದ್ದು ಇದರಿಂದಾಗಿ ಹಲವಾರು ಜನರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಹಾಗಾದರೆ ಫ್ರಾಡ್ ಟು ಫೋನ್ ಎಂದದರೇನು ? ( ಎಫ್ 2ಪಿ)
ಸಾಮಾನ್ಯ ಅರ್ಥದಲ್ಲಿ ಜನಸಾಮಾನ್ಯರಿಂದ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಸ್ಮಾರ್ಟ್ ಫೋನ್ ಗಳನ್ನು ಅಥವಾ ದೂರಸಂಪರ್ಕ ಸೇವೆಗಳನ್ನು ಕಾನೂನುಬಾಹಿರವಾಗಿ ಬಳಸಿಕೊಳ್ಳುವುದು.
ಉದಯ್ ಪುರದಲ್ಲಿ ವರದಿಯಾದ ಘಟನೆಯೊಂದರಂತೆ ಫ್ರಾಡ್ ಟು ಫೋನ್ ಮೂಲಕ ಜೂನ್ 11 ರಂದು 78 ವರ್ಷದ ವೃದ್ಧರೊಬ್ಬರು 6.5 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದರು ಎಂದು ಸೈಬರ್ ಸೇಫ್ ಸಂಸ್ಥೆ ತಿಳಿಸಿದೆ. ಇಲ್ಲಿ ವಂಚಕ ಜಾರ್ಖಂಡ್ ನಲ್ಲಿ ಕುಳಿತುಕೊಂಡು ಉದಯ್ ಪುರದ ವೃದ್ಧರನ್ನು ಯಾಮಾರಿಸಿ ಹಣವನ್ನು ಎಗರಿಸಿದ್ದ. ಫ್ರಾಡ್ ಟು ಫೋನ್ ನಲ್ಲಿ ವಂಚಕರು ಹಲವಾರು ಗುಂಪುಗಳ ಮೂಲಕ ಕಾರ್ಯನಿರ್ವಹಿಸುತ್ತಾರೆ. ಮಾತ್ರವಲ್ಲದೆ ನೂರಾರು ಅಪರೇಟಿವ್ಸ್ ಗಳನ್ನು ಇರಿಸಿಕೊಂಡು ಓಟಿಪಿ(One time password) ಗಳನ್ನು ಎಗರಿಸುವುದು, ಕ್ರೆಡಿಟ್ ಕಾರ್ಡ್ ವಂಚನೆ, ಇ-ಕಾಮರ್ಸ್, ನಕಲಿ ಐಡಿ, ನಕಲಿ ಫೋನ್ ನಂಬರ್, ವಿಳಾಸ ತೆರಿಗೆ ವಂಚನೆ ಮುಂತಾದ ಕೃತ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ.
ಈ ವಂಚಕರನ್ನು ಸೆರೆಯಿಡುವ ಉದ್ದೇಶದಿಂದ MHAs FCORD ತಂಡ, ಮಧ್ಯಪ್ರದೇಶ ಪೊಲೀಸ್ ಪಡೆ ಮತ್ತು ವಿವಿಧ ರಾಜ್ಯಗಳ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಫ್ರಾಡ್ ಟು ಫೋನ್ ಮಾಡುತ್ತಿದ್ದ ಒಂದು ಗುಂಪನ್ನು ಸರೆಯಿಡಿಯುವಲ್ಲಿ ಯಶಸ್ವಿಯಾಗಿದ್ದವು. ಸೈಬರ್ ಸೇಫ್ ವರದಿಗಳ ಪ್ರಕಾರ ಸೈಬರ್ ವಂಚನೆ ಪ್ರಕರಣ ದಾಖಲಾದ ಕೆಲವೇ ನಿಮಿಷಗಳಲ್ಲಿ ಮಧ್ಯಪ್ರದೇಶದ ಬಾಲಾಘಾಟ್ ನಲ್ಲಿ ವಂಚಕರಿರುವ ಸ್ಥಳವನ್ನು ಗುರುತಿಸಲಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಮಧ್ಯಪ್ರದೇಶದ ಪೊಲೀಸರು F2P ಯ ಮಾಸ್ಟರ್ ಮೈಂಡ್ ನನ್ನು ಬಂಧಿಸಿದ್ದರು. ಮಾತ್ರವಲ್ಲದೆ ಆತನಿಂದ 33 ಹೊಸ ಫೋನ್ ಗಳು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಈ ಖತರ್ನಾಕ್ F2P ಗ್ಯಾಂಗ್ ಗಳು ಹೊಸ ಸ್ಮಾರ್ಟ್ ಫೋನ್ ಗಳನ್ನು 10 ಸಾವಿರ ರೂ. ಗಳಿಗೆ ಕೊಂಡುಕೊಂಡು, ಬಳಿಕ ಕಾಳದಂಧೆಯಲ್ಲಿ 5ರಿಂದ 10 % ಡಿಸ್ಕೌಂಟ್ ಮೂಲಕ ಮಾರಾಟ ಮಾಡುತ್ತಿದ್ದರು. ಏತನ್ಮಧ್ಯೆ ಜಾರ್ಖಂಡ್ ಪೊಲೀಸರು F2P ಕಾಲರ್ ಒಬ್ಬನನ್ನು ಬಂಧಿಸಿದ್ದರು.
ಅಧಿಕೃತ ವರದಿಗಳ ಪ್ರಕಾರ ಒಟ್ಟಾರೆ 8 F2P ಗ್ಯಾಂಗ್ ನ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಲಾಗಿದೆ.(ಮಧ್ಯಪ್ರದೇಶದ ಇಬ್ಬರು, ಜಾರ್ಖಂಡ್ ನ ನಾಲ್ವರು, ಆಂಧ್ರಪ್ರದೇಶದ ಇಬ್ಬರು) ಇವರಿಂದ ಕದ್ದ ಹಣದಿಂದ ಖರೀದಿಸಲಾಗಿದ್ದ ಸರಿಸುಮಾರು 300 ಸ್ಮಾರ್ಟ್ ಪೋನ್ ಗಳನ್ನು ವಶಪಡಿಸಕೊಳ್ಳಲಾಗಿದೆ. ಇದಲ್ಲದೆ ಗ್ಯಾಂಗ್ ನ ಬಳಿ 900 ಇತರೆ ಸೆಲ್ ಫೋನ್ ಗಳು, 1000 ಬ್ಯಾಂಕ್ ಅಕೌಂಟ್ ಗಳು, ನೂರಕ್ಕಿಂತ ಹೆಚ್ಚು ಯುಪಿಐ ಗಳು, ಇ ಕಾಮರ್ಸ್ ಐಡಿಗಳು ಕೂಡ ಇದ್ದವು ಎಂದು ವರದಿಯಾಗಿದೆ. ಇದೇ ವೇಳೆ ಸುಮಾರು 100 ಬ್ಯಾಂಕ್ ಖಾತೆಗಳು ಹಾಗೂ ಡೆಬಿಟ್ /ಕ್ರೆಡಿಟ್ ಕಾರ್ಡ್ ಗಳು ಸ್ಥಗಿತಗೊಂಡಿರುವುದು ಕೂಡ ಬೆಳಕಿಗೆ ಬಂದಿದೆ. ಇದೀಗ F2P ಗ್ಯಾಂಗ್ ವಿರುದ್ದದ ಕಾರ್ಯಾಚರಣೆ 18 ರಾಜ್ಯಗಳಿಗೆ ಹಾಗೂ 350 ವ್ಯಕ್ತಿಗಳಿಗೆ ವಿಸ್ತರಿಸಿದೆ ಎಂದು ವರದಿ ತಿಳಿಸಿದೆ.
ಸೈಬರ್ ಸೆಫ್ ವೈಬ್ ಸೈಟ್ ನ ಕಾರ್ಯವೇನು ?
ಯಾವುದೇ ಅನಾಮಿಕ ವ್ಯಕ್ತಿಗೆ ಹಣಪಾವತಿ ಮಾಡುವಾಗ ಫೋನ್ ನಂಬರ್, ಅಕೌಂಟ್ ನಂಬರ್ ಯುಪಿಐ ಐಡಿ ಗಳನ್ನು ಗಮನಿಸಬೇಕಾಗುತ್ತದೆ. ಸೈಬರ್ ಸೇಫ್ ವೆಬ್ ಸೈಟ್ ಗಳು ಇಂತಹ ದೃಡೀಕರಣ ಸೇವೆಗಳನ್ನು ಗ್ರಾಹಕರಿಗೆ ಪರಿಣಾಮಕಾರಿಯಾಗಿ ಮಾಡಿಕೊಡುತ್ತದೆ. ಮಾತ್ರವಲ್ಲದೆ ಸೈಬರ್ ವಂಚನೆಗಳಾಗುವುದನ್ನು ತಡೆಗಟ್ಟುತ್ತದೆ. ಅದಾಗ್ಯೂ ಯಾವುದೇ ಹಣಕಾಸಿನ ವಹಿವಾಟಾಗುವ ಮೊದಲು ಮಾಹಿತಿಗಳನ್ನು ದೃಢೀಕರಿಸಿಕೊಳ್ಳಿ ಎಂದು ಸೈಬರ್ ಸೇಫ್ ತಿಳಿಸುತ್ತದೆ. ಈ ಮೊದಲು ವರದಿಯಾಗದ ಹೊಸ ನಕಲಿ ನಂಬರ್, ಅಕೌಂಟ್ ನಂಬರ್, ಹಾಗೂ ಯುಪಿಐ ಐಡಿಗಳನ್ನು ಪತ್ತೆ ಹಚ್ಚುವುದು ತುಸು ಕಷ್ಷ ಸಾಧ್ಯ ಎಂದು ಸೈಬರ್ ಸೇಫ್ ಉಲ್ಲೇಖಿಸಿದೆ. https://cybersafe.gov.in