ನವದೆಹಲಿ: ಅತ್ಯಂತ ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಜಗತ್ತಿನೊಂದಿಗೆ ಅದೇ ವೇಗದಲ್ಲಿ ಸಾಗುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಒಂದು “ವಿಶೇಷ ಹೈಟೆಕ್ ಪಡೆ’ಯೊಂದನ್ನು ರೂಪಿಸಿದೆ. ಅದರ ಹೆಸರೇ ಸಿಗ್ನಲ್ಸ್ ಟೆಕ್ನಾಲಜಿ ಇವಾಲ್ಯುವೇಷನ್ ಆ್ಯಂಡ್ ಅಡಾಪ್ಟೆಷನ್ ಗ್ರೂಪ್(ಸ್ಟೀಗ್).
ಅದಕ್ಕೆ ಕರ್ನಲ್ ಹುದ್ದೆಯ ಸೇನೆಯ ಅಧಿಕಾರಿ ಮುಖ್ಯಸ್ಥರಾಗಿ ಇರಲಿದ್ದಾರೆ ಎಂದು ಭೂಸೇನೆಯ ಹಿರಿಯ ಅಧಿಕಾರಿಯೊಬ್ಬರು ನವದೆಹಲಿಯಲ್ಲಿ ಮಾಹಿತಿ ನೀಡಿದ್ದಾರೆ.
ಸೇನಾ ಬಳಕೆಗಾಗಿ ಕೃತಕ ಬುದ್ಧಿಮತ್ತೆ, 6ಜಿ, ಮಷೀನ್ ಲರ್ನಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ ಮುಂತಾದ ಭವಿಷ್ಯದ ಸಂವಹನ ತಂತ್ರಜ್ಞಾನಗಳಿಗೆ ಸಂಬಂಧಿಸಿ ಸಂಶೋಧನೆ ಮತ್ತು ಮೌಲ್ಯಮಾಪನದ ಕೆಲಸವನ್ನು ಈ ಪಡೆ ಕೈಗೆತ್ತಿಕೊಳ್ಳಲಿದೆ. ಭವಿಷ್ಯದ ಯುದ್ಧಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸೇನೆ ಕೈಗೊಳ್ಳುತ್ತಿರುವ ಹಲವು ಕ್ರಮಗಳಲ್ಲಿ ಇದೂ ಒಂದು.
ಯುದ್ಧದ ಸ್ವರೂಪಗಳೇ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಸೇನಾ ಮುಖ್ಯಸ್ಥ ಜ.ಮನೋಜ್ ಪಾಂಡೆ ಇತ್ತೀಚೆಗೆ ಹೇಳಿದ್ದರು. ಅದರಂತೆ, ಇದೇ ಮೊದಲ ಬಾರಿಗೆ ಇಂಥದ್ದೊಂದು ವಿಶೇಷ ಪಡೆಯನ್ನು ರಚಿಸಲಾಗಿದ್ದು, ಎಲೆಕ್ಟ್ರಾನಿಕ್ ವಿನಿಮಯಗಳು, ಮೊಬೈಲ್ ಸಂವಹನಗಳು, ಸಾಫ್ಟ್ವೇರ್ ಆಧರಿತ ರೇಡಿಯೋಗಳು, ವಿದ್ಯುನ್ಮಾನ ಯುದ್ಧ ವ್ಯವಸ್ಥೆಗಳು, 5ಜಿ ಮತ್ತು 6ಜಿ ಜಾಲಗಳು, ಕ್ವಾಂಟಮ್ ತಂತ್ರಜ್ಞಾನ, ಎಐ, ಮಷೀನ್ ಲರ್ನಿಂಗ್ ಮುಂತಾದ ತಂತ್ರಜ್ಞಾನಗಳಲ್ಲಿ ಇದು ವಿಶೇಷ ಪರಿಣತಿ ಹೊಂದಿರಲಿದೆ.